ಬೆಂಗಳೂರಿನಲ್ಲಿ ಪ್ರತಿದಿನ 150 ರಿಂದ 160 ಡೆಂಘೀ ಪ್ರಕರಣ ಪತ್ತೆ : ಆಯುಕ್ತ ತುಷಾರ್‌ ಗಿರಿನಾಥ್‌

KannadaprabhaNewsNetwork | Updated : Jul 24 2024, 12:22 PM IST

ಸಾರಾಂಶ

ಜುಲೈ ಆರಂಭದಿಂದ ಈವರೆಗೆ ನಗರದಲ್ಲಿ ಬರೋಬ್ಬರಿ 3300ಕ್ಕೂ ಅಧಿಕ ಡೆಂಘೀ ಪ್ರಕರಣ ಕಾಣಿಸಿಕೊಂಡಿದ್ದು, ವಲಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅಧಿಕಾರಿಗಳಿಗೆ ಸೂಚಿಸಿದರು.

 ಬೆಂಗಳೂರು :  ಜುಲೈ ಆರಂಭದಿಂದ ಈವರೆಗೆ ನಗರದಲ್ಲಿ ಬರೋಬ್ಬರಿ 3300ಕ್ಕೂ ಅಧಿಕ ಡೆಂಘೀ ಪ್ರಕರಣ ಕಾಣಿಸಿಕೊಂಡಿದ್ದು, ವಲಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ನಗರದಲ್ಲಿ ಪ್ರತಿದಿನ ಸರಾಸರಿ 150 ರಿಂದ 160 ಡೆಂಘೀ ಪ್ರಕರಣ ಕಂಡುಬರುತ್ತಿವೆ. ವಲಯ ಆಯುಕ್ತರು ಡೆಂಘೀ ನಿಯಂತ್ರಿಸಲು ಆರೋಗ್ಯ ವಿಭಾಗದ ಅಧಿಕಾರಿಗಳ ಜತೆಗೆ ಪ್ರತಿದಿನ ಸಭೆ ನಡೆಸಿ ಮೇಲ್ವಿಚಾರಣೆ ಮಾಡಬೇಕು. ಹೆಚ್ಚು ಡೆಂಘೀ ಪ್ರಕರಣಗಳು ಕಂಡುಬರುವ ಸ್ಥಳಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಬೇಕು. ಅಲ್ಲಿನ ಜನರಿಗೆ ಸೊಳ್ಳೆ ಕಚ್ಚದಂತೆ ಕ್ರೀಮ್‌ ಹಾಗೂ ಬೇವಿನ ಎಣ್ಣೆ ವಿತರಿಸಬೇಕು. ಜತೆಗೆ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಲು ಹೆಚ್ಚಾಗಿ ಫಾಂಗಿಂಗ್ ಹಾಗೂ ಔಷಧಿ ಸಿಂಪಡಣೆ ಮಾಡಬೇಕೆಂದು ಸೂಚಿಸಿದರು.

ಆಯಾ ವಲಯ ಹಿರಿಯ ಅಧಿಕಾರಿಗಳು ಆಸ್ಪತ್ರೆಗಳಿಗೆ ಭೇಟಿ ನೀಡಿ ಡೆಂಘೀ ಪರೀಕ್ಷೆಗೆ ಎಷ್ಟು ದರ ವಿಧಿಸುತ್ತಿದ್ದಾರೆ. ಕಂಡುಬರುವ ಪ್ರಕರಣಗಳು, ಸರ್ಕಾರಿ ಆದೇಶವನ್ನು ಉಲ್ಲಂಘಿಸಿ ಹೆಚ್ಚು ದರ ವಿಧಿಸುವ ಆಸ್ಪತ್ರೆಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶಿಸಿದರು.ಸಭೆಯಲ್ಲಿ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್‌, ಸುರಳ್ಕರ್ ವಿಕಾಸ್ ಕಿಶೋರ್, ಶಿವಾನಂದ್ ಕಲ್ಕೆರೆ, ಅವಿನಾಶ್ ಮೆನನ್ ರಾಜೇಂದ್ರನ್, ವಲಯ ಆಯುಕ್ತರಾದ ವಿನೋತ್ ಪ್ರಿಯಾ, ಡಾ। ಆರ್.ಎಲ್ ದೀಪಕ್, ಸ್ನೇಹಲ್, ಕರೀಗೌಡ, ಪ್ರೀತಿ ಗೆಹ್ಲೋಟ್, ಶಿವಾನಂದ್ ಕಪಾಶಿ, ರಮೇಶ್, ರಮ್ಯಾ, ಪ್ರಧಾನ ಅಭಿಯಂತರ ಡಾ। ಪ್ರಹ್ಲಾದ್‌ ಉಪಸ್ಥಿತರಿದ್ದರು.

ರಸ್ತೆ ಗುಂಡಿ ಮುಚ್ಚಿ

ನಗರದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳ ಗುಂಡಿಗಳನ್ನು ಕೂಡಲೇ ಮುಚ್ಚಲು ಕ್ರಮ ಕೈಗೊಳ್ಳಬೇಕು. ರಸ್ತೆ ಗುಂಡಿ ಮುಚ್ಚುವ ಸಲುವಾಗಿ ಅಭಿವೃದ್ಧಿಪಡಿಸುತ್ತಿರುವ ಆ್ಯಪ್‌ ಬಿಡುಗಡೆ ಮಾಡಿ ಎಂದು ಅಧಿಕಾರಿಗಳಿಗೆ ತುಷಾರ್‌ ಗಿರಿನಾಥ್‌ ಸೂಚಿಸಿದರು.

ಆಸ್ತಿ ತೆರಿಗೆ ವಸೂಲಿ ವಿಚಾರದಲ್ಲಿ ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು ಪರಿಣಾಮಕಾರಿಯಾಗಿ ಕಾರ್ಯರ್ನಿಹಿಸಿ ಹೆಚ್ಚು ಆಸ್ತಿ ತೆರಿಗೆಯನ್ನು ಸಂಗ್ರಹಿಸಬೇಕು. ಓಟಿಎಸ್‌ ಯೋಜನೆಯಡಿ ಬರುವ ಬಾಕಿ ಆಸ್ತಿ ಸುಸ್ತಿದಾರರಿಗೆ ಕೂಡಲೇ ತೆರಿಗೆ ಪಾವತಿಸಲು ಸೂಚಿಸಬೇಕು. ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಆಸ್ತಿ ತೆರಿಗೆಯನ್ನು ಪಾವತಿಸಿಕೊಳ್ಳಬೇಕೆಂದು ಸೂಚಿಸಿದರು.

Share this article