ಪ್ರತಿ ಹನಿಯೂ ಅಮೂಲ್ಯವಾಗಿದ್ದು, ನೀರನ್ನು ಹಿತಮಿತವಾಗಿ ಬಳಸಿ: ಡಿಸಿ ಸಲಹೆ

KannadaprabhaNewsNetwork |  
Published : May 04, 2026, 02:00 AM IST
ಕ್ಯಾಪ್ಷನ2ಕೆಡಿವಿಜಿ34, 35 ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಕೆರೆಗಳ ಸಮರ್ಪಕ ನಿರ್ವಹಣೆ ಕುರಿತ ಸಭೆ ನಡೆಯಿತು. | Kannada Prabha

ಸಾರಾಂಶ

ಪ್ರತಿ ವರ್ಷದಂತೆ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಬರುತ್ತಿದೆ. ಅಲ್ಲದೇ, ತಾಪಮಾನ ಹೆಚ್ಚಳದಿಂದಾಗಿ ಕೆರೆ-ಕಟ್ಟೆ-ಕಾಲುವೆಗಳಲ್ಲಿ ನೀರಿನ ಪ್ರಮಾಣ ದಿನೇದಿನೇ ಕಡಿಮೆಯಾಗುತ್ತಿದೆ. ಅಂತರ್ಜಲದ ಮಟ್ಟವೂ ಕುಸಿಯುತ್ತಿರುವುದು ಆತಂಕದ ಸಂಗತಿಯಾಗಿದೆ. ಜಿಲ್ಲೆಯ ಜನರು ಜಲಮೂಲಗಳನ್ನು ಸಂರಕ್ಷಿಸಿಕೊಳ್ಳುವ, ಮಿತವಾಗಿ ಬಳಸುವ ಬಗ್ಗೆ ವಿಶೇಷ ಗಮನಹರಿಸಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದ್ದಾರೆ.

- ನೆಲ, ಜಲ, ಪರಿಸರ ವೃದ್ಧಿ- ಜಿಲ್ಲೆ ಕೆರೆಗಳ ಸಮರ್ಪಕ ನಿರ್ವಹಣೆ ಕುರಿತು ಡಿಸಿ ಕಚೇರಿ ಸಭಾಂಗಣದಲ್ಲಿ ಸಭೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರತಿ ವರ್ಷದಂತೆ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಬರುತ್ತಿದೆ. ಅಲ್ಲದೇ, ತಾಪಮಾನ ಹೆಚ್ಚಳದಿಂದಾಗಿ ಕೆರೆ-ಕಟ್ಟೆ-ಕಾಲುವೆಗಳಲ್ಲಿ ನೀರಿನ ಪ್ರಮಾಣ ದಿನೇದಿನೇ ಕಡಿಮೆಯಾಗುತ್ತಿದೆ. ಅಂತರ್ಜಲದ ಮಟ್ಟವೂ ಕುಸಿಯುತ್ತಿರುವುದು ಆತಂಕದ ಸಂಗತಿಯಾಗಿದೆ. ಜಿಲ್ಲೆಯ ಜನರು ಜಲಮೂಲಗಳನ್ನು ಸಂರಕ್ಷಿಸಿಕೊಳ್ಳುವ, ಮಿತವಾಗಿ ಬಳಸುವ ಬಗ್ಗೆ ವಿಶೇಷ ಗಮನಹರಿಸಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.

ಶನಿವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನೆಲ-ಜಲ ಹಾಗೂ ಪರಿಸರವನ್ನು ವೃದ್ಧಿಸಲು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಸೇರಿಸಿ, ಕಾರ್ಯೋನ್ಮುಖರಾಗುವ ಬಗ್ಗೆ ಮತ್ತು ಜಿಲ್ಲೆಯ ಕೆರೆಗಳ ಸಮರ್ಪಕ ನಿರ್ವಹಣೆ ಕುರಿತು ಏರ್ಪಡಿಸಲಾಗಿದ್ದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದಿನ ಅನೇಕ ಸಭೆಗಳಲ್ಲಿ ಚರ್ಚಿಸಿದಂತೆ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಇಂಗುಗುಂಡಿಗಳ ನಿರ್ಮಾಣಗೊಳ್ಳದಿರುವುದು ಬೇಸರದ ಸಂಗತಿ. ಕೂಡಲೇ ಇಂಗುಗುಂಡಿಗಳ ನಿರ್ಮಾಣಕ್ಕೆ ಸಂಬಂಧಿಸಿದ ಇಲಾಖಾಧಿಕಾರಿಗಳು ಗಮನಹರಿಸುವಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಬೀಳುವ ಮಳೆ ನೀರನ್ನು ಹಿಡಿದಿಟ್ಟು ಸದ್ಬಳಕೆ ಮಾಡಿಕೊಳ್ಳುವ, ಮಳೆ ನೀರು ಕೊಯ್ಲು ಮಾಡುವ ಮೂಲಕ ಜಲ ಮರುಪೂರಣಕ್ಕೆ ಗಮನಹರಿಸಬೇಕು. ವಿಶೇಷವಾಗಿ ನೂತನ ಕಟ್ಟಡಗಳ ನಿರ್ಮಾಣ ಸಂದರ್ಭದಲ್ಲಿ ಮಳೆನೀರು ಕೊಯ್ಲು ತಂತ್ರದ ಅಳವಡಿಕೆಗೆ ಮುಂದಾಗಬೇಕು. ಮುಂದಿನ ಒಂದು ವಾರದೊಳಗಾಗಿ ಅದಕ್ಕಾಗಿ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ಕ್ರಮ ವಹಿಸುವಂತೆ ಹಾಗೂ ಸರ್ಕಾರಿ ಕಟ್ಟಡಗಳಿಂದಲೇ ಮೊದಲು ಆರಂಭಗೊಳ್ಳಬೇಕೆಂದು ಸಲಹೆ ನೀಡಿದರು.

ಪ್ರತಿ ಹನಿ ನೀರೂ ಅಮೂಲ್ಯ. ಅದನ್ನು ಮಿತವಾಗಿ ಬಳಸಲು ಎಲ್ಲರೂ ಗಮನಹರಿಸಬೇಕು. ನಗರದ ಕೆಲವು ಪ್ರದೇಶಗಳಲ್ಲಿನ ನಿವಾಸಿಗಳು ತಮ್ಮ ವಾಹನಗಳನ್ನು ತೊಳೆಯಲು ನೀರನ್ನು ಯಥೇಚ್ಛವಾಗಿ ಬಳಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಸಾಕಷ್ಟು ದೂರುಗಳು ಕೇಳಿಬರುತ್ತಿವೆ. ಸ್ವತಃ ತಾವೇ ಖುದ್ದಾಗಿಯೂ ನೋಡಿದ್ದೇವೆ. ಮಹಾನಗರ ಪಾಲಿಕೆ ಪರಿಸರ ಅಧಿಕಾರಿಗಳು ನೀರನ್ನು ಅನಿಯಮಿತವಾಗಿ ಬಳಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ, ಸ್ಥಳ ತನಿಖೆ ಮಾಡಿ, ಅಂತಹ ವ್ಯಕ್ತಿಗಳಿಗೆ ನಿಯಮಾನುಸಾರ ದಂಡ ವಿಧಿಸಬೇಕು ಹಾಗೂ ಕಾನೂನು ಕ್ರಮಕ್ಕೆ ಶಿಫಾರಸು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಹಾನಗರ ಪಾಲಿಕೆ ಅಧಿಕಾರಿಗಳು ಪ್ರತಿದಿನ ಬೆಳಗ್ಗೆ ವಾರ್ಡ್‌ಗೆ ಭೇಟಿ ನೀಡಿ ಪರಿಶೀಲಿಸಬೇಕು. ಅಲ್ಲಿನ ಸಮಸ್ಯೆಗಳಿಗೆ ದ್ವನಿಯಾಗಬೇಕು. ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವರ್ತನೆ ಸಹಿಸಿಕೊಳ್ಳಲಾಗುವುದಿಲ್ಲ ಎಂದವರು ಎಚ್ಚರಿಸಿದರು.

ನಗರದಲ್ಲಿ ಮಾದರಿ ವಾರ್ಡ್‌ಗಳನ್ನು ನಿರ್ಮಾಣಗೊಳಿಸುವ ಆಶಯ ಹೊಂದಿದ್ದೇವೆ. ಒಂದು ವಾರ್ಡ್ ಅನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡು ಆ ವಾರ್ಡಿನಲ್ಲಿ ಪ್ರತಿದಿನ ಬೆಳಗ್ಗೆ 6 ರಿಂದ 7 ಗಂಟೆವರೆಗೆ ಒಂದೊಂದು ಬೀದಿಯಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗುವುದು. ಇದೇ ಸಂದರ್ಭದಲ್ಲಿ ಆ ವಾರ್ಡಿನಲ್ಲಿನ ಖಾಲಿ ನಿವೇಶನಗಳ ಮಾಲೀಕರು ತಮ್ಮ ನಿವೇಶನಗಳ ಸ್ವಚ್ಛಗೊಳಿಸಿಕೊಳ್ಳಬೇಕು. ತಪ್ಪಿದಲ್ಲಿ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದವರು ನುಡಿದರು.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ಕೆರೆ-ಕಟ್ಟೆಗಳಿಂದ ನೀರನ್ನು ಅಕ್ರಮವಾಗಿ ಎತ್ತುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಅರಣ್ಯ ಪ್ರದೇಶಗಳಲ್ಲಿ ಪಶು-ಪಕ್ಷಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ಪಕ್ಷಿಸಂಕುಲ ಅಳಿವಿನಂಚಿಗೆ ಬರಬಹುದು. ಆದ್ದರಿಂದ ಸಂಬಂಧಿಸಿದ ಅರಣ್ಯಾಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಅವುಗಳಿಗೆ ಕುಡಿಯುವ ನೀರನ್ನು ಒದಗಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡು ವರದಿ ನೀಡುವಂತೆ ಅವರು ಸೂಚಿಸಿದರು. ಅರಣ್ಯ ಪ್ರದೇಶದಲ್ಲಿ ಗುಂಡಿಗಳನ್ನು ತೆಗೆದು, ನೀರು ಸಂಗ್ರಹಿಸುವುದರಿಂದ ಪ್ರಾಣಿಗಳಿಗೆ ಅನುಕೂಲವಾಗಲಿದೆ ಅಲ್ಲದೇ ಅಂತರ್ಜಲ ಮಟ್ಟದಲ್ಲಿಯೂ ಗಣನೀಯ ಏರಿಕೆ ಕಂಡುಬರಲಿದೆ ಎಂದವರು ಆಶಿಸಿದರು.

ಜಿಲ್ಲೆಯಲ್ಲಿ ನೂತನವಾಗಿ ಅನೇಕ ಬಡಾವಣೆಗಳ ಸೃಜನೆ ಕಾರ್ಯ ನಿರಂತರವಾಗಿದೆ. ಮುಂದಿನ ದಶಕಗಳ ಅವಧಿಯಲ್ಲಿ ಆ ಪ್ರದೇಶದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಇರುವ ಸುಲಭ, ಸರಳ ಸಾಧ್ಯತೆಗಳ ಬಗ್ಗೆ ಪರಿಶೀಲಿಸುವಂತೆಯೂ, ಸಂಭಾವ್ಯ ಅವಕಾಶಗಳ ಬಗ್ಗೆ ಗಮನಹರಿಸುವಂತೆಯೂ ಅವರು ಸೂಚಿಸಿದರು. ಜಿಲ್ಲೆಯ ಉಪವಿಭಾಗಾಧಿಕಾರಿಗಳು ತಮ್ಮ ತಾಲೂಕುಗಳಲ್ಲಿ ಕಾಲಕಾಲಕ್ಕೆ ಸಭೆಗಳನ್ನು ಆಯೋಜಿಸಿ, ಅಧೀನ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಅವರು ಸೂಚಿಸಿದರು.

ಅಧಿಕಾರಿಗಳ ಸಮಯೋಚಿತ ಸಲಹೆ- ಮಾರ್ಗದರ್ಶನದಿಂದ, ಪ್ರಾಮಾಣಿಕ ಕಾರ್ಯಗಳಿಂದಾಗಿ ಅಂತರ್ಜಲ ಮರುಪೂರಣಗೊಳಿಸುವುದು ಸಾಧ್ಯವಾಗಲಿದೆ. ಅಂತರ್ಜಲಮಟ್ಟ ಹೆಚ್ಚಿಸುವಲ್ಲಿ ಇದೊಂದು ಕ್ರಾಂತಿಕಾರಕ ಹೆಜ್ಜೆ ಆಗಿರಲಿದೆ. ಅಧಿಕಾರಿಗಳು ನೀರಿನ ಬಳಕೆ ಮತ್ತು ನಿರ್ವಹಣೆ ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಬಲ್ಲೂರು ರವಿಕುಮಾರ, ಪ್ರೊ.ಕೆ.ಎಸ್.ಈಶ್ವರಪ್ಪ, ಉಪವಿಭಾಗಾಧಿಕಾರಿ ಚನ್ನಪ್ಪ, ಜಿ.ಪಂ. ಯುವಜನ ನಿರ್ದೇಶಕಿ ರೇಷ್ಮಾ ಕೌಸರ್, ಮಹಾನಗರಪಾಲಿಕೆ ಕಾರ್ಯಪಾಲಕ ಅಭಿಯಂತರ ಉದಯಕುಮಾರ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಳನಿಸ್ವಾಮಿ, ನಾಗೇಂದ್ರ ಸೇರಿದಂತೆ ನೆಲ-ಜಲ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

- - -

(ಬಾಕ್ಸ್‌) * 11.03 ಮೀ.ಕ್ಕೆ ಕುಸಿದ ಅಂತರ್ಜಲಮಟ್ಟ ಜಿಲ್ಲೆಯಲ್ಲಿ ಸ್ವತಂತ್ರ ಕೊಳವೆಬಾವಿ ಹೊಂದಿರುವ 140 ಶಾಲೆಗಳನ್ನು ಗುರುತಿಸಲಾಗಿದೆ. ಅಂತಹ ಶಾಲಾ ಆವರಣದಲ್ಲಿ ಮಳೆನೀರು ಕೊಯ್ಲು ತಂತ್ರಾಂಶ ಅಳವಡಿಸುವ ಬಗ್ಗೆ ಹಾಗೂ ಶಾಲಾ ಪರಿಸರದಲ್ಲಿ ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಿಸುವ ಬಗ್ಗೆಯೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತ್ವರಿತ ಕ್ರಮ ಕೈಗೊಂಡು ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 10.88 ಮೀ. ಇದ್ದ ಅಂತರ್ಜಲ ಮಟ್ಟ ಪ್ರಸಕ್ತ ಸಾಲಿನಲ್ಲಿ 11.03 ಮೀ.ಕ್ಕೆ ಕುಸಿದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಳಕ್ಕೆ ಕುಸಿಯುವ ಸಾಧ್ಯತೆ ಇದೆ. ಇದು ಹೀಗೆ ಮುಂದುವರೆದಲ್ಲಿ ಗಂಭೀರ ಸ್ವರೂಪದ ನೀರಿನ ಸಮಸ್ಯೆ ಎದುರಿಸಬೇಕಾಗಬಹುದು ಎಂದವರು ಎಚ್ಚರಿಸಿದರು.

- - -

-2ಕೆಡಿವಿಜಿ34, 35:

ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಕೆರೆಗಳ ಸಮರ್ಪಕ ನಿರ್ವಹಣೆ ಕುರಿತ ಸಭೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಗಿಲು ತೆರೆಯದ ಬಹು ನಿರೀಕ್ಷಿತ ಕ್ರೀಡಾ ಸಂಕೀರ್ಣ!
ಬಿಎಸ್‌ವೈ ಅಭಿಮಾನೋತ್ಸವಕ್ಕೆ ಜಿಲ್ಲೆಯಿಂದ ೫೦ ಸಾವಿರ ಅಭಿಮಾನಿಗಳು