ಹೆಣ್ಣಾದರೂ, ಗಂಡಾದರೂ ಮನೆಗೊಂದೇ ಮಗುವಿರಲಿ: ಶಾಸಕ ನಾರಾಯಣಸ್ವಾಮಿ

KannadaprabhaNewsNetwork | Published : Jul 12, 2024 1:36 AM

ಸಾರಾಂಶ

ಇಷ್ಟೊಂದು ಜನಸಂಖ್ಯೆ ಇದ್ದರೂ ಸಹ ಸರ್ಕಾರಗಳು ಜನರಿಗೆ ಅನುಕೂಲವಾಗಿ ಆಸ್ಪತ್ರೆಗಳು ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿವೆ. ಹೆಣ್ಣಾಗಲಿ, ಗಂಡಾಗಲಿ, ಮನೆಗೆ ಒಂದು ಮಗು ಸಾಕು, ಮೊದಲು ಮೂರು ಹೆಣ್ಣು ಮಗುವಾದರೂ ಸಹ ಇನ್ನೊಂದು ಗಂಡು ಮಗು ಬೇಕು ಎನ್ನುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ, ಒಂದೇ ಮಗು ಸಾಕೆನ್ನುವಂತಾಗಿದೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಜನಸಂಖ್ಯಾ ಸ್ಪೋಟದಿಂದಾಗಿ ಎದುರಾಗುತ್ತಿರುವ ಗಂಭೀರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಮಾರ್ಗವಾಗಿ ಜಗತ್ತಿನಲ್ಲಿ ಪ್ರತಿವರ್ಷ ವಿಶ್ವ ಜನಸಂಖ್ಯಾ ದಿನ ಆಚರಿಸಲಾಗುತ್ತದೆ ಎಂದು ಶಾಸಕ ಎಸ್. ಎನ್. ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತವು ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದ್ದು, 1.3 ಬಿಲಿಯನ್ ಗಿಂತಲೂ ಹೆಚ್ಚು ಜನರಿಗೆ ನೆಲೆಯಾಗಿದೆ. ಇದು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಎಂಬ ಬಿರುದನ್ನು ಪಡೆದುಕೊಂಡಿದೆ. ಆದರೆ ದೇಶದ ಜನಸಂಖ್ಯೆಯು ಸಮರ್ಥನೀಯವಲ್ಲದ ದರದಲ್ಲಿ ಬೆಳೆಯುತ್ತಿರುವುದರಿಂದ ಭಾರತವು ಗಂಭೀರವಾದ ಜನಸಂಖ್ಯೆಯ ಸಮಸ್ಯೆಯನ್ನು ಎದುರಿಸುತ್ತಿದೆ ಎಂದರು.

ಇಷ್ಟೊಂದು ಜನಸಂಖ್ಯೆ ಇದ್ದರೂ ಸಹ ಸರ್ಕಾರಗಳು ಜನರಿಗೆ ಅನುಕೂಲವಾಗಿ ಆಸ್ಪತ್ರೆಗಳು ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿವೆ. ಹೆಣ್ಣಾಗಲಿ, ಗಂಡಾಗಲಿ, ಮನೆಗೆ ಒಂದು ಮಗು ಸಾಕು, ಮೊದಲು ಮೂರು ಹೆಣ್ಣು ಮಗುವಾದರೂ ಸಹ ಇನ್ನೊಂದು ಗಂಡು ಮಗು ಬೇಕು ಎನ್ನುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ, ಒಂದೇ ಮಗು ಸಾಕೆನ್ನುವಂತಾಗಿದೆ. ಇರುವಂತಹ ಎಲ್ಲಾ ಅಧಿಕಾರಿಗಳು ಸಹ ಹೆಣ್ಣು ಮಕ್ಕಳೇ, ಹೆಣ್ಣು ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ, ಎಲ್ಲಾ ಉದ್ಯೋಗದಲ್ಲೂ ಸಹ ಹೆಣ್ಣು ಮಕ್ಕಳು ಇದ್ದಾರೆ ಎಂದರು.

ಭಾರತ ದೇಶದಲ್ಲಿ ಪ್ರತಿದಿನ ಜನಸಂಖ್ಯೆ ಹೆಚ್ಚಾಗುತ್ತಿದೆ,ಈ ಪ್ರಕ್ರಿಯೆ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಬಹಳಷ್ಟು ಕಷ್ಟವಾಗುತ್ತದೆ, ಆದರಿಂದ ಸಮಾಜದ ಎಲ್ಲಾ ಬಂಧುಗಳಿಗೂ ಮನವಿ ಮಾಡುತ್ತೇನೆ. ಪ್ರತಿಯೊಂದು ಕುಟುಂಬಕ್ಕೂ ಮಗು ಬೇಕು, ಅದು ಹೆಣ್ಣಾಗಲಿ, ಗಂಡಾಗಲಿ, ಒಂದೇ ಮಗು ಸಾಕು ಎಂಬ ನಿರ್ಧಾರಕ್ಕೆ ಬನ್ನಿ ಎಂದು ಮನವಿ ಮಾಡಿದರು.

ವೈದ್ಯಾಧಿಕಾರಿ, ಡಾ.ಭಾರತಿ, ತಾಲೂಕು ವೈದ್ಯಾಧಿಕಾರಿ ಪ್ರಿಯದರ್ಶಿನಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಅನಿತ, ಸಿಬ್ಬಂದಿ ಆದರ್ಶ್,ರವಿಕುಮಾರ್ ಮೊದಲಾದವರು ಇದ್ದರು.

Share this article