ಪ್ರತಿಯೊಬ್ಬ ಕನ್ನಡಿಗ ನಾಡಿನ ಕಾವಲುಗಾರನಾಗಬೇಕಿದೆ: ಚಲಪತಿ ಗೌಡ

KannadaprabhaNewsNetwork |  
Published : Nov 30, 2026, 04:15 AM IST
ಜಮಖಂಡಿಯ ಬಸವ ಭವನದಲ್ಲಿ ನಡೆದ ಸಾಧಕರ ಸಂಭ್ರಮ ಕಾರ್ಯಕ್ರಮವನ್ನು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಚಲಪತಿ ಗೌಡ ಉದ್ಘಾಟಿಸಿದರು. ಮಠಾಧೀಶರು ಹಾಗೂ ಗಣ್ಯರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಕನ್ನಡ ಭಾಷೆ, ನೆಲ, ಜಲ ಹಾಗೂ ಸಂಸ್ಕೃತಿಯ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ಕರ್ನಾಟಕ ಚಿನ್ನದ ಬಿಸ್ಕತ್ತಿನಂತಿದ್ದು, ಅದರ ರಕ್ಷಣೆಗಾಗಿ ಪ್ರತಿಯೊಬ್ಬ ಕನ್ನಡಿಗನೂ ಕಾವಲುಗಾರನಾಗಿ ನಿಲ್ಲಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಚಲಪತಿಗೌಡರ ಬಣ) ರಾಜ್ಯಾಧ್ಯಕ್ಷ ಚಲಪತಿ ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಕನ್ನಡ ಭಾಷೆ, ನೆಲ, ಜಲ ಹಾಗೂ ಸಂಸ್ಕೃತಿಯ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ಕರ್ನಾಟಕ ಚಿನ್ನದ ಬಿಸ್ಕತ್ತಿನಂತಿದ್ದು, ಅದರ ರಕ್ಷಣೆಗಾಗಿ ಪ್ರತಿಯೊಬ್ಬ ಕನ್ನಡಿಗನೂ ಕಾವಲುಗಾರನಾಗಿ ನಿಲ್ಲಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಚಲಪತಿಗೌಡರ ಬಣ) ರಾಜ್ಯಾಧ್ಯಕ್ಷ ಚಲಪತಿ ಗೌಡ ಹೇಳಿದರು. ನಗರದ ಬಸವ ಭವನದಲ್ಲಿ ಭಾನುವಾರ ಕನ್ನಡ ರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸಾಧಕರ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ನಾಡಿನ ಏಕೀಕರಣಕ್ಕಾಗಿ ಹಿರಿಯ ಹೋರಾಟಗಾರರು ಮಾಡಿದ ತ್ಯಾಗ, ಹೋರಾಟ ಹಾಗೂ ಭಾಷಾವಾರು ಪ್ರಾಂತಗಳ ರಚನೆಯ ಇತಿಹಾಸವನ್ನು ಇಂದಿನ ಯುವಜನತೆ ಅರಿತುಕೊಳ್ಳಬೇಕು. ರಾಜ್ಯೋತ್ಸವವನ್ನು ಕೇವಲ ನವೆಂಬರ್‌ 1ಕ್ಕೆ ಸೀಮಿತಗೊಳಿಸದೆ, ಇಡೀ ತಿಂಗಳು ಕನ್ನಡ ಭಾಷೆಯ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ವಿಶೇಷವಾಗಿ ಗಡಿಭಾಗಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಆದ್ಯತೆ ನೀಡಬೇಕು ಎಂದರು.

ಜಮಖಂಡಿ ನಗರ ಸೇರಿ ಸಾರ್ವಜನಿಕ ಸ್ಥಳಗಳು, ಅಂಗಡಿ-ಮುಂಗಟ್ಟು ಹಾಗೂ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಅನ್ಯಭಾಷೆಗಳನ್ನು ಗೌರವಿಸೋಣ, ಆದರೆ ಕನ್ನಡ ನೆಲದಲ್ಲಿ ಕನ್ನಡವೇ ಪ್ರಮುಖ ಭಾಷೆಯಾಗಿರಬೇಕು. ಕನ್ನಡದ ಅಸ್ಮಿತೆಗೆ ಧಕ್ಕೆಯಾಗದಂತೆ ಪಕ್ಷ, ಜಾತಿ, ಮತ, ಪಂಥಗಳ ಭೇದ ಮರೆತು ಎಲ್ಲ ಕನ್ನಡಿಗರು ಒಂದಾಗಿ ನಾಡಿನ ರಕ್ಷಣೆಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹಾಗೂ ಓಲೆಮಠದ ಆನಂದ ದೇವರು ಆಶೀರ್ವಚನ ನೀಡಿ, ಕನ್ನಡ ಭಾಷೆ ಮತ್ತು ಸಾಹಿತ್ಯ ಬೆಳವಣಿಗೆಗೆ ಬಸವಣ್ಣನವರು, ವಚನಕಾರರು, ಸಂತರು ಹಾಗೂ ಸಾಹಿತಿಗಳ ಕೊಡುಗೆ ಅಪಾರವಾಗಿದೆ. ಕನ್ನಡ ನಮ್ಮ ಮನೆಯ ಹೆಬ್ಬಾಗಿಲಿನ ಭಾಷೆಯಾಗಬೇಕು. ಇತರ ಭಾಷೆಗಳು ಕಿಟಕಿಗಳಿದ್ದಂತೆ. ಅನ್ಯಭಾಷೆಗಳನ್ನು ಗೌರವಿಸುತ್ತಲೇ ಕನ್ನಡವನ್ನು ಉಳಿಸಿ ಬೆಳೆಸಬೇಕು. ಕನ್ನಡ ನಾಮಫಲಕ ಅಳವಡಿಕೆ ಹಾಗೂ ಭಾಷಾ ಜಾಗೃತಿಯ ಹೋರಾಟಗಳಿಗೆ ಮಠಗಳು ಬೆಂಬಲ ನೀಡಲಿವೆ ಎಂದರು.

ಕಾಂಗ್ರೆಸ್‌ ಮುಖಂಡ ಬಸವರಾಜ ಸಿಂಧೂರ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳ ಉಳಿವಿಗೆ ನಿರಂತರ ಪ್ರಯತ್ನ ಅಗತ್ಯ. ನೆಲ, ಜಲ ಹಾಗೂ ರೈತರ ಹಿತಾಸಕ್ತಿ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ. ಸರ್ಕಾರಗಳ ತಪ್ಪುಗಳನ್ನು ಪ್ರಶ್ನಿಸುವ ಧೈರ್ಯ ಬೆಳೆಸಿಕೊಂಡು ಕನ್ನಡಿಗರು ಒಗ್ಗಟ್ಟಿನಿಂದ ನಾಡಿನ ಹಿತಕ್ಕಾಗಿ ಶ್ರಮಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ರೈತರು, ಸಮಾಜ ಸೇವಕರು, ವೀರ ಯೋಧರು, ಪ್ರತಿಭಾವಂತ ವಿದ್ಯಾರ್ಥಿಗಳು, ಪತ್ರಕರ್ತರು, ಸಾರಿಗೆ ಇಲಾಖೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆಯ ವರ್ತಕರ ಘಟಕದ ರಾಜ್ಯಾಧ್ಯಕ್ಷ ಸಿದ್ದಾರ್ಥ ಕಾಂಬಳೆ, ರಾಜ್ಯ ಉಪಾಧ್ಯಕ್ಷ ಪ್ರವೀಣ ಹೊಳಪ್ಪಗೊಳ, ನಿವೃತ್ತ ಕೃಷಿ ಅಧಿಕಾರಿ ರವಿ ಬೆಳ್ಳಿ, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕುಮಾರ ಆಲಗೂರ, ಮಹಾಲಕ್ಷ್ಮೀ ಸಂಸ್ಥೆಯ ಅಧ್ಯಕ್ಷ ಉಮೇಶ ಸಿದ್ದರೆಡ್ಡಿ, ತಾಲೂಕು ರೈತ ಸಂಘಟನೆ ಅಧ್ಯಕ್ಷ ಶ್ರೀಶೈಲ ಬೊಮ್ಮಾರ, ರೈತ ಮುಖಂಡ ರಾಜು ನದಾಫ್‌, ಕೌಂಟಗಿ, ಸಿದ್ದಪ್ಪ ಬಜನ್ನವರ, ಕಾಂಗ್ರೆಸ್‌ ಮುಖಂಡ ಪ್ರೇಮಕುಮಾರ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಂತೋಷ ತಳಕೇರಿ, ವಕೀಲೆ ಶೋಭಾ ಜಕಾತಿ ಸೇರಿ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು.

ನಾಮಫಲಕಗಳ ವಿರುದ್ಧ ಹೋರಾಟ:

ಜಮಖಂಡಿ ನಗರದಲ್ಲಿ ಅಂಗಡಿ-ಮುಂಗಟ್ಟು ಹಾಗೂ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಆಂಗ್ಲ ಮತ್ತು ಹಿಂದಿ ಭಾಷೆಯ ನಾಮಫಲಕಗಳ ನಡುವೆ ಕನ್ನಡ ಮರೆಯಾಗಬಾರದು. ಕನ್ನಡ ನಾಮಫಲಕ ಅಳವಡಿಸದಿದ್ದರೆ ಸಂಘಟನೆಯಿಂದ ಹೋರಾಟ ನಡೆಸಲಾಗುವುದು. ಕನ್ನಡ ಭಾಷೆಯ ಗೌರವ ಕಾಪಾಡಲು ವರ್ತಕರು ಸಹಕರಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಚಲಪತಿ ಗೌಡ ಎಚ್ಚರಿಕೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಸ್ತೇಜನಗೊಂಡ ಗ್ರಾಮೀಣ ಗ್ರಂಥಾಲಯಗಳು !
ವಾಯುಪಡೆ ನೇಮಕಾತಿ ಪರೀಕ್ಷೆಯಲ್ಲಿ ವೈಶಾಲಿ ರಾಜ್ಯಕ್ಕೆ ಫಸ್ಟ್