ಬ್ಯಾಡಗಿ: ಯುವಕರು ಸೂಕ್ತ ನಿರ್ಣಯ ಕೈಗೊಳ್ಳುವ ಕಾಲ ಸನ್ನಿಹಿತವಾಗಿದ್ದು, ತಮ್ಮ ಬದುಕಿನ ಪ್ರತಿ ಕ್ಷಣವೂ ನಿರ್ಣಾಯಕವಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಕರೆ ನೀಡಿದರು.
ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಬಿಎ, ಬಿಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ, ಪಠ್ಯೇತರ ಚಟುವಟಿಕೆ ಸಮಾರೋಪ ಸಮಾರಂಭ, ಆರೋಗ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಪಿಎಂ ವಿಶ್ವಕರ್ಮ ಯೋಜನೆಯಡಿ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು. ಶಿಕ್ಷಣವನ್ನು ಬದುಕಿನ ಭಾಗವನ್ನಾಗಿ ಮಾಡಿಕೊಳ್ಳುವ ಮೂಲಕ ದೇಶದ ಒಬ್ಬ ಜವಾಬ್ದಾರಿಯುತ ನಾಗರಿಕರಾಗಿ ಹೊರಹೊಮ್ಮುವಂತೆ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶ ಭಾರತ. ಹೀಗಾಗಿ ಯುವಕರಿಂದ ಸಾರ್ಥಕ ಜೀವನವನ್ನು ದೇಶ ನಿರೀಕ್ಷಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ಶಿಕ್ಷಣ, ಉದ್ಯೋಗ ಹಾಗೂ ಬದುಕಿನ ಭದ್ರತೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜವಾಬ್ದಾರಿಯುತ ಸರ್ಕಾರಗಳು ಪ್ರತಿಯೊಂದು ಕ್ಷೇತ್ರಗಳಲ್ಲಿ ಅವಕಾಶ ನೀಡಿದ ಬಳಿಕವಷ್ಟೇ ಅವರಿಂದ ಯಶಸ್ಸನ್ನು ನಿರೀಕ್ಷಿಸಬೇಕಾಗಿದೆ ಎಂದರು.
ಇತ್ತೀಚೆಗೆ ಯೌವನದ ಬದುಕಿಗೆ ಸರಿಯಾದ ಮಾರ್ಗಗಳು ಇಲ್ಲದಂತಾಗಿದೆ. ಕತ್ತಲೆ ಜಗತ್ತಿನ ಅಪರಾಧ ಕೃತ್ಯಗಳ ಪ್ರಯೋಗ ಶಾಲೆಯ ವಸ್ತುಗಳಾಗುತ್ತಿದ್ದಾರೆ. ಚಿಕ್ಕವಯಸ್ಸಿನಲ್ಲೇ ದುಶ್ಚಟಗಳ ದಾಸರಾಗುವ ಮೂಲಕ ತಮ್ಮ ಬದುಕಿನ ಸುಧಾರಣೆಗೆ ಹೆಣಗಾಡುತ್ತಿದ್ದಾರೆ. ಹೀಗಾಗಿ ಸಮಂಜಸವಾದ ಆಯ್ಕೆ ನಿರ್ಧರಿಸುವುದೂ ಕೂಡ ಅವರಿಂದ ಸಾಧ್ಯವಾಗುತ್ತಿಲ್ಲ. ನೈಜ ವ್ಯಕ್ತಿತ್ವ ಕಳೆದುಕೊಳ್ಳುತ್ತಿರುವ ಅವರು ಜನ್ಮ ನೀಡಿದ ಪಾಲಕರಿಗೂ ಬಿಡಿಸಲಾಗದ ಕಗ್ಗಂಟಾಗಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಪಿಎಂ ವಿಶ್ವಕರ್ಮ ಯೋಜನೆಯಡಿ ತರಬೇತಿ ಪೂರ್ಣಗಳಿಸಿದವರಿಗೆ ಪ್ರಮಾಣಪತ್ರ ವಿತರಿಸಿದರು. ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕಡ್ಡೀಪುಡಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ದಾನಪ್ಪ ಚೂರಿ, ರುದ್ರಪ್ಪ ಹೊಂಕಣದ, ಬೀರಪ್ಪ ಬಣಕಾರ ತಾಲೂಕು ಆರೋಗ್ಯಾಧಿಕಾರಿ ಡಾ. ಕಾಂತೇಶ ಭಜಂತ್ರಿ, ಶಿವಾನಂದ ಹಡಪದ, ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಚಂದ್ರಶೇಖರ ಸಿದ್ದಪ್ಪನವರ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಎಚ್.ಜಿ. ಸಣ್ಣಗೌಡ್ರ ಪ್ರಾಸ್ತಾವಿಕವಾಗಿ ಮಾತನಾಡಿದರು, ಬಿ.ಎಸ್. ಚಿಕ್ಕಣ್ಣ ವರದಿ ವಾಚನ ಮಾಡಿದರು. ಡಾ. ಎಫ್.ಎಚ್. ಗಿಡ್ಡಣ್ಣನವರ ಸ್ವಾಗತಿಸಿದರು.