ಪ್ರತಿ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದ್ದೆ ಇರುತ್ತದೆ: ನಯೀಂ ಉನ್ನಿಸಾ ಅಭಿಪ್ರಾಯ

KannadaprabhaNewsNetwork |  
Published : Mar 18, 2024, 01:50 AM IST
15ಕೆಎಂಎನ್ ಡಿ17 | Kannada Prabha

ಸಾರಾಂಶ

ಶಿಕ್ಷಣದಿಂದ ಮಾತ್ರ ಸಾಧನೆ ಎನ್ನುವುದಾಗಿದ್ದರೆ ಇತರೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಯಾರೂ ಕೂಡ ಇಂದು ನಮ್ಮ ಇತಿಹಾಸದಲ್ಲಿ ಇರುತ್ತಿರಲಿಲ್ಲ. ಈ ಹಿಂದೆ ಸಾಕಷ್ಟು ಪ್ರತಿಭೆಗಳು ಅವಕಾಶ ವಂಚಿತರಾಗಿ ನಶಿಸಿಹೋಗಿವೆ. ಆದರೆ, ಇಂದು ಆ ರೀತಿಯ ಪರಿಸ್ಥಿತಿ ಇಲ್ಲ. ಗ್ರಾಮೀಣ ಪ್ರದೇಶದ ಮಕ್ಕಳು ಎಂಬ ಸಂಕುಚಿತ ಮನೋಭಾವ ಬಿಟ್ಟು ಇರುವ ಅವಕಾಶಗಳನ್ನು ಸದುಪಯೋಗಿಸಿಕೊಂಡು ಸಾಧನೆ ಮಾಡಬೇಕಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪ್ರತಿ ವಿದ್ಯಾರ್ಥಿಯಲ್ಲಿಯೂ ಒಂದಲ್ಲಾ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಿದಾಗ ಮಾತ್ರ ಪ್ರತಿಭೆ ಅನಾವರಣವಾಗಲು ಸಾಧ್ಯವಾಗುತ್ತದೆ ಎಂದು ತಹಸೀಲ್ದಾರ್ ನಯೀಂಉನ್ನಿಸಾ ಹೇಳಿದರು.

ಪಟ್ಟಣದ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಮೈಸೂರು ವಿಶ್ವವಿದ್ಯಾಲಯ ಮಾಂಡವ್ಯ ವಲಯ ಅಂತರ ಕಾಲೇಜುಗಳ ಮಹಿಳಾ ವಿಭಾಗದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣದಿಂದ ಮಾತ್ರ ಸಾಧನೆ ಎನ್ನುವುದಾಗಿದ್ದರೆ ಇತರೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಯಾರೂ ಕೂಡ ಇಂದು ನಮ್ಮ ಇತಿಹಾಸದಲ್ಲಿ ಇರುತ್ತಿರಲಿಲ್ಲ. ಈ ಹಿಂದೆ ಸಾಕಷ್ಟು ಪ್ರತಿಭೆಗಳು ಅವಕಾಶ ವಂಚಿತರಾಗಿ ನಶಿಸಿಹೋಗಿವೆ. ಆದರೆ, ಇಂದು ಆ ರೀತಿಯ ಪರಿಸ್ಥಿತಿ ಇಲ್ಲ ಎಂದರು.

ಗ್ರಾಮೀಣ ಪ್ರದೇಶದ ಮಕ್ಕಳು ಎಂಬ ಸಂಕುಚಿತ ಮನೋಭಾವ ಬಿಟ್ಟು ಇರುವ ಅವಕಾಶಗಳನ್ನು ಸದುಪಯೋಗಿಸಿಕೊಂಡು ಸಾಧನೆ ಮಾಡಬೇಕಿದೆ. ಪ್ರತಿಭೆಯನ್ನು ನಿರ್ಲಕ್ಷ್ಯ ಮಾಡುವುದು ಬೇಡ. ಎಲ್ಲಾ ಕ್ಷೇತ್ರದಲ್ಲಿಯೂ ಬೆಲೆ ಸಿಗಲಿದೆ. ವ್ಯಕ್ತಿಯ ವೈಯಕ್ತಿಕ ಸಾಧನೆಗೆ ಕ್ರೀಡೆ ಮಹತ್ತರ ಪಾತ್ರ ವಹಿಸಲಿದೆ. ಇದರಿಂದ ಶಿಸ್ತು, ಸಂಯಮ ಕಲಿಯಬಹುದು ಎಂದು ತಿಳಿಸಿದರು.

ರಾಷ್ಟ್ರಮಟ್ಟದ ಗುಡ್ಡಗಾಡು ಓಟಗಾರ್ತಿ ತಾಲೂಕಿನ ಮಣ್ಣಹಳ್ಳಿ ಚಿಕ್ಕಮ್ಮ ಮಾತನಾಡಿ, ನಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿ ಒಂದು ಅವಕಾಶವನ್ನು ನೀಡಿದಾಗ ನಮಗೆ ಅದರ ಅರಿವಾಗುತ್ತದೆ. ವಿದ್ಯಾರ್ಥಿ ದೆಸೆಯಲ್ಲಿಯೇ ನಾವು ಗುರಿ ನಿಗಧಿಪಡಿಸಿಕೊಂಡು ಶ್ರಮಹಾಕಿದರೆ ಒಬ್ಬ ಗುರು ಸಿಕ್ಕೇಸಿಗುತ್ತಾರೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಾಧನೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎನ್.ಪರಮಶಿವಯ್ಯ ಮಾತನಾಡಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಕೇವಲ ಧಾರ್ಮಿಕ, ಆಧ್ಯಾತ್ಮಿಕಕ್ಕೆ ಸೀಮಿತವಾಗದೆ ಅನ್ನ, ಅಕ್ಷರ ಆರೋಗ್ಯ ದಾಸೋಹದ ಜೊತೆಗೆ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಮೈಸೂರು ವಿಶ್ವವಿದ್ಯಾಲಯದ ಕ್ರೀಡಾಕೂಟಗಳನ್ನು ವಿವಿಯಿಂದ ಹೊರಗೆ ನಡೆಸಿದ ಕೀರ್ತಿ ಆದಿಚುಂಚನಗಿರಿ ಮಠಕ್ಕೆ ಸಲ್ಲುತ್ತದೆ. ಶ್ರೀಮಠದ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದರು.

ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ಆದಿಚುಂಚನಗಿರಿ ಮಠದ ಬ್ರಹ್ಮಚಾರಿ ಸತ್ಕೀರ್ತಿ ಸ್ವಾಮೀಜಿ ಆಶಿರ್ವಚನ ನೀಡಿದರು. ಮದ್ದೂರು ತಾಲೂಕಿನ ಕೊಪ್ಪ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ್, ಎಸ್‌ಎಸಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಟಿ.ಶಿವಸಾಗರ್, ನಿವೃತ್ತ ಪ್ರಾಂಶುಪಾಲ ಡಾ.ಬಿ.ಕೆ.ಲೋಕೇಶ್ ಸೇರಿದಂತೆ ಹಲವರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ