ಶಾಲೆಗಳಲ್ಲಿ ಮೂರು ತಿಂಗಳಿಗೊಮ್ಮೆ ತಂಬಾಕು ನಿಯಂತ್ರಣ ಸಭೆ

KannadaprabhaNewsNetwork |  
Published : Jul 09, 2024, 12:46 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ | Kannada Prabha

ಸಾರಾಂಶ

every three months once tobacco controle meet

-ಕೋಟ್ಪಾ ಕಾಯ್ದೆ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ತಹಶೀಲ್ದಾರ್ ಡಾ.ನಾಗವೇಣಿ ಸೂಚನೆ

------

ಕನ್ನಡಪ್ರಭವಾರ್ತೆ, ಚಿತ್ರದುರ್ಗ

ಶಾಲೆಯ ಆಸು ಪಾಸಿನಲ್ಲಿ ತಂಬಾಕು ಬಳಕೆ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಶಾಲೆಗಳಲ್ಲಿ ತಂಬಾಕು ನಿಯಂತ್ರಣ ಸಭೆ ನಡೆಸುವಂತೆ ತಹಸೀಲ್ದಾರ್ ನಾಗವೇಣಿ ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಕೋಟ್ಪಾ-2003ರ ಕಾಯ್ದೆಯ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಶಾಲೆಗಳ ಸುತ್ತ-ಮುತ್ತ 100 ಗಜದ ವ್ಯಾಪ್ತಿಯಲ್ಲಿ ತಂಬಾಕು ದಾಳಿ ಕೈಗೊಂಡು, ತಂಬಾಕು ಮಾರಾಟ ಮಾಡದಂತೆ ತಡೆಯಬೇಕು. ಯಾವ ಶಾಲೆಗಳ ಹತ್ತಿರ ತಂಬಾಕು ಮಾರಾಟವಾಗುತ್ತಿದೆಯೋ ಅಂತಹ ಶಾಲೆಗಳ ಪಟ್ಟಿ ಮಾಡಿ, ತಂಬಾಕು ದಾಳಿ ಕೈಗೊಳ್ಳಬೇಕು. ಎಲ್ಲಾ ಶಾಲೆಗಳನ್ನು ತಂಬಾಕು ಮುಕ್ತ ಶಾಲೆಗಳೆಂದು ಮಾಡುವಲ್ಲಿ ಮುಖ್ಯೋಪಾಧ್ಯಾಯರು ಸೂಕ್ತ ಕ್ರಮವಹಿಸಬೇಕೆಂದರು.

ತಿಂಗಳಿಗೆ ಒಂದೆರೆಡು ತಂಬಾಕು ದಾಳಿಗಳು ಮಾತ್ರ ಆಗುತ್ತಿದ್ದು, ತಂಬಾಕು ದಾಳಿಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ತಾಲೂಕಿನಾದ್ಯಂತ ತಂಬಾಕು ಕಾರ್ಯಾಚರಣೆ ನಡೆಸುವಾಗ ಪೊಲೀಸ್ ಇಲಾಖೆಯವರು ಹೆಚ್ಚಿನ ಸಹಕಾರ ನೀಡಬೇಕು. ಗ್ರಾಮೀಣ ಮಟ್ಟದಲ್ಲಿ ತಂಬಾಕು ದಾಳಿಗಳನ್ನು ಕೈಗೊಳ್ಳಬೇಕು ಮತ್ತು ಪ್ರತಿದಿನ ಕಸ ವಿಲೇವಾರಿ ವಾಹನಗಳಲ್ಲಿ ತಂಬಾಕು ನಿಯಂತ್ರಣ ಕುರಿತಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಡಿಯೋ ಜಿಂಗಲ್ಸ್ ಮೂಲಕ ಸಾರ್ವಜನಿಕರಿಗೆ ತಿಳುವಳಿಕೆ ಮೂಡಿಸಬೇಕು. ಈ ಸಂಬಂಧ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸುವಂತೆ ತಾಲೂಕು ಕಾರ್ಯನಿರ್ವಾಹಕಾಧಿಕಾರಿಗಳಿಗೆ ತಿಳಿಸಿದರು.

ಚಿತ್ರದುರ್ಗ ತಾಲೂಕಿನ ಎಲ್ಲಾ ಸರ್ಕಾರಿ ಕಚೇರಿಗಳನ್ನು ತಂಬಾಕು ಮುಕ್ತ ಕಚೇರಿಗಳಾಗಿ ಮಾಡಬೇಕೆಂದು ಇಲಾಖೆಯ ಎಲ್ಲಾ ಕಚೇರಿ ಮುಖ್ಯಸ್ಥರಿಗೆ ಸೂಚಿಸಿದ ಅವರು, ತಂಬಾಕು ಸೇವನೆ ಮಾಡುವವರ ಮೇಲೆ ಮೇಲಧಿಕಾರಿಗಳು ನಿಗಾ ಇಡಬೇಕು. ಬೀಡಿ ಸಿಗರೇಟು ಸೇದುವ ನೆಪದಲ್ಲಿ ಪದೇ ಪದೆ ಕಚೇರಿಯಿಂದ ಎದ್ದು ಹೊರ ಹೋಗುವವರ ಮೇಲೆ ಹಿಡಿತ ಸಾಧಿಸುವಂತೆ ಸೂಚಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್ ಮಾತನಾಡಿ, ಕೋಟ್ಪಾ-2003ರ ಕಾಯ್ದೆಯ ಅಡಿಯಲ್ಲಿ 2024-25ನೇ ಸಾಲಿನಲ್ಲಿ ಚಿತ್ರದುರ್ಗ ತಾಲೂಕಿನಲ್ಲಿ ಏಪ್ರಿಲ್‍ನಿಂದ ಜೂನ್‍ವರೆಗೆ 2 ತಂಬಾಕು ದಾಳಿ ನಡೆಸಿದ್ದು, ಸೆಕ್ಷನ್-4 ಅಡಿಯಲ್ಲಿ 30 ಕೇಸುಗಳನ್ನು ದಾಖಲಿಸಿ ರು. 3125 ದಂಡ, ಸೆಕ್ಷನ್-6ಎ ಅಡಿಯಲ್ಲಿ 9 ಕೇಸುಗಳನ್ನು ದಾಖಲಿಸಿ ರು. 925 ಮತ್ತು ಸೆಕ್ಷನ್-6ಬಿ ಅಡಿಯಲ್ಲಿ 7 ಕೇಸುಗಳನ್ನು ದಾಖಲಿಸಿ ರು. 1200 ಸೇರಿದಂತೆ ಒಟ್ಟು 46 ಕೇಸುಗಳನ್ನು ದಾಖಲಿಸಿ ರು 5,250 ದಂಡವನ್ನು ಸಂಗ್ರಹಿಸಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಜಂಟಿ ಖಾತೆಗೆ ಜಮೆ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ತಂಬಾಕು ನಿಯಂತ್ರಣಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ್ ಮಾತನಾಡಿ, ತಾಲೂಕು ಮಟ್ಟದ ತಂಬಾಕು ತನಿಖಾ ತಂಡವು ಕನಿಷ್ಟ ವಾರಕ್ಕೊಮ್ಮೆಯಾದರೂ ತಂಬಾಕು ದಾಳಿಯನ್ನು ನಡೆಸಲು ತಹಶೀಲ್ದಾರ್ ಅವರಲ್ಲಿ ಕೋರಿದರು. ತಾಲೂಕು ಪಂಚಾಯಿತಿ ವ್ಯವಸ್ಥಾಪಕರು, ಭರಮಸಾಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಆರ್‌ಬಿಎಸ್‌ಕೆ ವೈದ್ಯಾಧಿಕಾರಿಗಳು ಮತ್ತು ನರ್ಸಿಂಗ್ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇಸಿಓ, ನೋಡೆಲ್ ಅಧಿಕಾರಿ ಡಿಡಿಆರ್‌ಸಿ, ಬಸವೇಶ್ವರ ವಿದ್ಯಾ ಸಂಸ್ಥೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

------------

ಪೋಟೋ ಕ್ಯಾಪ್ಸನ್

ಚಿತ್ರದುರ್ಗ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಕೋಟ್ಪಾ-2003ರ ಕಾಯ್ದೆಯ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ತಹಸೀಲ್ದಾರ್ ನಾಗವೇಣಿ ಮಾತನಾಡಿದರು.

-------ಫೋಟೋ:8 ಸಿಟಿಡಿ1

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ