ಅನಘಾ ತಾಂಬೋಳಿಗೆ ‘ಕಾಯಕರತ್ನ’, ಡಾ. ಪುಷ್ಪ ದ್ರವಿಡ್‍ಗೆ ‘ಕಲ್ಯಾಣರತ್ನ’ ಪ್ರಶಸ್ತಿ ಘೋಷಣೆ

KannadaprabhaNewsNetwork | Published : Feb 7, 2025 12:31 AM

ಸಾರಾಂಶ

Every year by Karnataka State Marathi Sahitya Parishad

ಕನ್ನಡಪ್ರಭವಾರ್ತೆ ಆಳಂದ:

ಕರ್ನಾಟಕ ರಾಜ್ಯ ಮರಾಠಿ ಸಾಹಿತ್ಯ ಪರಿಷತ್ತಿನಿಂದ ಪ್ರತಿವರ್ಷ ನೀಡಲಾಗುವ ಡಾ. ರಾಜೇಂದ್ರ ಪಡತುರೇ ಪ್ರಾಯೋಜಿತ ‘ಮರಾಠಿ ಭಾಷಾ ಕಾಯಕರತ್ನ’ ಪ್ರಶಸ್ತಿಗೆ ಇಬ್ಬರು ಮಹಿಳಾ ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಅಖಿಲ ಭಾರತೀಯ ಮರಾಠಿ ಸಾಹಿತ್ಯ ಮಹಾಮಂಡಳದ ಉಪಾಧ್ಯಕ್ಷ ಗುರುಯ್ಯ ಆರ್. ಸ್ವಾಮಿ ತಿಳಿಸಿದ್ದಾರೆ.

ಪ್ರಕಸ್ತ ಸಾಲಿನ ಪ್ರಶಸ್ತಿಯನ್ನು ಮಹಾರಾಷ್ಟ್ರದ ಹೊಸ ಮುಂಬೈನ ಖ್ಯಾತ ಲೇಖಕಿ ಹಾಗೂ ಕವಯತ್ರಿ ಅನಘಾ ತಾಂಬೋಳಿ ಅವರಿಗೆ ಹಾಗೂ ಮರಾಠಿ ಭಾಷಾ ಕಲ್ಯಾಣರತ್ನ ಪ್ರಶಸ್ತಿಗೆ ಬೆಂಗಳೂರಿನ ಖ್ಯಾತ ಕಲಾವಿದೆ, ಶಿಲ್ಪಕಾರ ಹಾಗೂ ವಾಸ್ತುತಜ್ಞ ಡಾ. ಪುಷ್ಪ ದ್ರವಿಡ್ ಅವರು ಆಯ್ಕೆಯಾಗಿದ್ದಾರೆ.

ಪರಿಷತ್ತಿನ ಕಾರ್ಯದರ್ಶಿ ಪ್ರಭಾಕರ್ ಸಲಗರೇ, ಪ್ರಾಧ್ಯಾಪಕ ವಿಜಯಕುಮಾರ ಚೌಧರಿ, ಮಿಲಿಂದ ಉಮಾಳಕರ, ಪ್ರಮೋದ ಶಾ, ರವೀಂದ್ರ ಪಾಟೀಲ್ ಆಳಂಗಾ ಉಪಸ್ಥಿತರಿದ್ದರು.

ಮಾರ್ಚ್ 2ರಂದು ಕಲಬುರಗಿಯ ಐಡಿಯಲ್ ಫೈನಾರ್ಟ್‌ ಕಾಲೇಜಿನಲ್ಲಿ ಬೆಳಗಿನ 10:30ಕ್ಕೆ ಮರಾಠಿ ದಿನಾಚರಣೆಯಲ್ಲಿ ಈ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಾ. ದೇವಿದಾಸ್ ಫುಲಾರಿ ಅವರ "ರಾತ್ರ ಭರಾತ್ ಆಹೆ " ಎಂಬ ಮರಾಠಿ ಕಾವ್ಯ ಸಂಕಲನದ ಡಾ. ಸಂಧ್ಯಾ ರಾಜನ್ ಅವರು ಕನ್ನಡಕ್ಕೆ ಭಾಷಾಂತರಿಸಿದ "ಇರಳು ಅರಳಿದೆ " ಹಾಗೂ "ಕಾಜ್ವಾಂಚಿ ದಿವೆ " ಎಂಬ ಮತ್ತೊಂದು ಮರಾಠಿ ಗ್ರಂಥದ ಬಿಡುಗಡೆ ನಡೆಯಲಿದೆ. ಈ ಸಮಾರಂಭವನ್ನು ಮುಖ್ಯಮಂತ್ರಿಗಳ ಸಲಹೆಗಾರ ಹಾಗೂ ಆಳಂದ ಶಾಸಕ ಬಿ.ಆರ್. ಪಾಟೀಲ್ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಮಾರುತಿರಾವ್ ಮುಳೆ, ಐಡಿಯಲ್ ಸಂಸ್ಥೆಯ ಕಾರ್ಯದರ್ಶಿ ಡಾ. ವಿ.ಜಿ ಅಂದಾನಿ, ಡಾ. ದಿನಕರ ಮೋರೆ, ಡಾ. ಎನ್.ಜಿ. ಘನಾತೆ, ಕನ್ನಡ ಸಾಹಿತ್ಯಿ ಆರ್.ಕೆ. ಹುಡಗಿ, ಡಾ. ರಾಜೇಂದ್ರ ಪಡತುರೇ, ಪ್ರಾ. ದೇವಿದಾಸ್ ಫುಲಾರಿ (ನಾಂದೇಡ್), ಇಸಾಪ್ ಪ್ರಕಾಶನದ ದತ್ತಾ ಡಾಂಗೆ, ಬಿಚಿ ಪ್ರಕಾಶನದ ಉಲ್ಲಾಸ್ ರೈಸಮ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪಾಲ್ಗೊಳ್ಳುವರು.

ಬಹುಭಾಷಾ ಕವಿ ಸಮ್ಮೇಳನ ಹಮ್ಮಿಕೊಂಡಿದ್ದು ಮರಾಠಿ, ಕನ್ನಡ, ಉರ್ದು, ಹಿಂದಿ, ತುಳು, ತಮಿಳು ಮೊದಲಾದ ಭಾಷೆಗಳ ಕವಿಗಳು ಭಾಗವಹಿಸುವ ಬಹುಭಾಷಾ ಕವಿ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

----

ಚಿತ್ರ ಶೀರ್ಷಿಕೆ: ಡಾ.ಪುಷ್ಪ ದ್ರಾವಿಡ್

Share this article