ತಿಪಟೂರು: ಜ್ಞಾನಕ್ಕಾಗಿ ಶಿಕ್ಷಣ ಎಷ್ಟು ಮುಖ್ಯವೋ ಆರೋಗ್ಯಕ್ಕಾಗಿ ಕ್ರೀಡೆಯು ಅಷ್ಟೇ ಮುಖ್ಯವಾಗಿದೆ. ಶಿಕ್ಷಣದೊಂದಿಗೆ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಸೋಮವಾರ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿರು.
ಪ್ರಾಂಶುಪಾಲ ಎಂ.ಡಿ. ಶಿವಕುಮಾರ್ ಮಾತನಾಡಿ, ತಾಲೂಕು ಮಟ್ಟದ ಕ್ರೀಡಾಕೂಟವನ್ನು ನಮ್ಮ ಕಾಲೇಜು ನೇತೃತ್ವದಲ್ಲಿ ನಡೆಸಲಾಗುತ್ತಿದ್ದು, ತಾಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ ಕಾಲೇಜುಗಳು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಸದೃಢ ದೇಹಕ್ಕೆ ಸದೃಢ ಮನಸ್ಸು ಎಂಬಂತೆ ವಿದ್ಯಾರ್ಥಿಗಳು ಇಂತಹ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು. 2024-25ನೇ ಸಾಲಿನ ಶೈಕ್ಷಣಿಕ ಸಾಲಿನಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಸಿಇಟಿ, ನೀಟ್‌ನಂತಹ ಪರೀಕ್ಷೆಗಳಿಗೆ ತರಬೇತಿ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.
ಒಲಿಂಪಿಕ್ ಟ್ರೊಫೀಸ್ ಅಂಡ್ ಸ್ಪೋರ್ಟ್ಸ್ ಮಾಲೀಕ ಎಚ್.ವಿ. ಉಮೇಶ್‌ಬಾಬು ಕ್ರೀಡಾಜ್ಯೋತಿ ಸ್ವೀಕರಿಸಿದರು. ಬಿಇಒ ಚಂದ್ರಯ್ಯ ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಕುಮಾರ್ ಆಸ್ಪತ್ರೆಯ ಡಾ.ಶ್ರೀಧರ್, ಕ್ರೀಡಾಕೂಟದ ಸಂಚಾಲಕ ಜೆ.ಎಂ. ಚಂದ್ರಶೇಖರ್, ಕಸಾಪ ತಾ. ಅಧ್ಯಕ್ಷ ಎಂ. ಬಸವರಾಜಪ್ಪ, ಪ್ರಾಚಾರ್ಯ ಪರಶಿವಮೂರ್ತಿ, ಓಸ್‌ವಾಲ್ ಸಂತೋಷ್ ಸೇರಿದಂತೆ ತಾಲೂಕಿನ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳ ಪ್ರಾಂಶುಪಾಲರು, ದೈಹಿಕ ಶಿಕ್ಷಕರು, ತೀರ್ಪುಗಾರರು ಭಾಗವಹಿಸಿದ್ದರು.