ಜೈ ಜವಾನ್, ಜೈ ಕಿಸಾನ್ ಎಂಬ ಘೋಷವಾಕ್ಯದಂತೆ ಗಡಿಕಾಯುವ ಸೈನಿಕರನ್ನು ಮತ್ತು ಅನ್ನದಾತರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಜೈ ಜವಾನ್, ಜೈ ಕಿಸಾನ್ ಎಂಬ ಘೋಷವಾಕ್ಯದಂತೆ ಗಡಿಕಾಯುವ ಸೈನಿಕರನ್ನು ಮತ್ತು ಅನ್ನದಾತರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಕರೆ ನೀಡಿದರು.ತಾಲೂಕಿನ ವಾಟದಹೊಸಹಳ್ಳಿಯ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ರೈತ ಬಾಂಧವರಿಗೆ 2025-26ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕಷ್ಟಪಟ್ಟು ದುಡಿದರೆ ಕೃಷಿ ಅತ್ಯಂತ ಲಾಭದಾಯಕವಿದೆ. ಹೀಗಾಗಿ ಯುವಕರು ಮತ್ತು ರೈತರು ಆಸಕ್ತಿ ವಹಿಸಿ ಕೃಷಿಯಲ್ಲಿ ತೊಡಗುವ ಅಗತ್ಯವಿದೆ. ರೈತರು ಬಿತ್ತನೆ ಕೈಗೊಳ್ಳುವಾಗ ಭೂಮಿಯಲ್ಲಿ ಅವಶ್ಯಕ ತೇವಾಂಶ ಇರುವುದನ್ನು ಕಡ್ಡಾಯವಾಗಿ ಖಚಿತಪಡಿಸಿಕೊಂಡು ಬಿತ್ತನೆ ಮಾಡಬೇಕು. ಇಲ್ಲವಾದಲ್ಲಿ ಬೀಜಗಳು ಸರಿಯಾಗಿ ಮೊಳಕೆಯೊಡೆಯದೇ ಉತ್ತಮ ಬೆಳೆ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಮನವಿ ತಿಳಿಸಿದರು.ಈ ಸಲ ಮಳೆ ಬೇಗ ಶುರುವಾಗಿದೆ. ಕಳೆದ ಒಂದು ವಾರದಿಂದ ಕ್ಷೇತ್ರದ ಬಹುತೇಕ ಕಡೆ ಮಳೆಯಾಗುತ್ತಿದೆ. ಕೆಲ ಹೋಬಳಿಗಳಲ್ಲಿ ಸರಾಸರಿ ಮಳೆಯಾಗಿದೆ. ಅನೇಕ ಕಡೆ ಮಳೆಯಾದ ಕಾರಣ ಹೊಲಗಳಲ್ಲಿ ನೀರು ನಿಂತಿದೆ. ತೇವಾಂಶ ಹೆಚ್ಚಿದೆ. ಅನೇಕ ರೈತರು ಹೊಲ ಹದ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ರೈತರು ಯಾವುದೇ ಕಾರಣಕ್ಕೂ ಹೆದರಬಾರದು. ಇನ್ನೂ ಸಾಕಷ್ಟು ಸಮಯವಿದೆ. ಜೂನ್ ಎರಡು, ಮೂರನೇ ವಾರದವರೆಗೆ ಬಿತ್ತನೆ ಮಾಡಬಹುದು. ಎಲ್ಲರೂ ತಯಾರಿ ಮಾಡಿಕೊಳ್ಳಿ. ಎಲ್ಲರಿಗೂ ಅಗತ್ಯ ಬೀಜ, ಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲರೂ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬೀಜ, ಗೊಬ್ಬರ ಪಡೆಯಬೇಕು ಎಂದು ತಿಳಿಸಿದರು.‘ಈ ವರ್ಷ ತಾಲೂಕಿನಲ್ಲಿ ಮುಂಗಾರು ಮಳೆ ಒಂದು ವಾರ ಮುಂಚಿತವಾಗಿ ಆಗಮಿಸಿದೆ. ಮಳೆ ಸ್ವಲ್ಪ ವಿರಾಮ ನೀಡಿದರೆ ಬಿತ್ತನೆಗೆ ಅನುಕೂಲ ಆಗಲಿದೆ. ಕೃಷಿ ಇಲಾಖೆಯಿಂದ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಮುಸುಕಿನ ಜೋಳ ಮತ್ತು ನೆಲಗಡಲೆ ಬೆಳೆಗಳ ಬೀಜಗಳನ್ನು ದಾಸ್ತಾನು ಮಾಡಲಾಗಿದೆ. ಬಿತ್ತನೆ ಬೀಜದ ಕೊರತೆ ಆಗದಂತೆ ಗಮನಹರಿಸಲು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರು ಪ್ರಮಾಣಿಕೃತ ಮತ್ತು ಗುಣಮಟ್ಟದ ಬಿತ್ತನೆ ಬೀಜಗಳನ್ನು ಪಡೆಯಬೇಕು’ ಎಂದರು.ರೈತರು ಹಾಗೂ ಸೈನಿಕರು ದೇಶದ ಎರಡು ಕಣ್ಣು. ಜೈ ಜವಾನ್, ಜೈ ಕಿಸಾನ್. ಇವರಿಬ್ಬರೂ ಚೆನ್ನಾಗಿದ್ದಾಗಲೇ ದೇಶ ಚೆನ್ನಾಗಿ ಇರಲು ಸಾಧ್ಯ. ಭಾರತದಲ್ಲಿ ಇಂದು ೧೪೫ ಕೋಟಿ ಜನರಿದ್ದಾರೆ. ಎಲ್ಲರಿಗೂ ಆಹಾರ ಭದ್ರತೆ ಬೇಕು. ಇದಕ್ಕೆ ಕೃಷಿ ಚೆನ್ನಾಗಿರಬೇಕು. ಕೃಷಿ ಏರುಪೇರಾದರೆ ದೇಶದ ವ್ಯವಸ್ಥೆಯೇ ಬುಡಮೇಲಾಗುತ್ತದೆ. ಅಷ್ಟೊಂದು ಪ್ರಾಧಾನ್ಯತೆ ಕೃಷಿಗೆ ಇದೆ. ಅದಕ್ಕಾಗಿಯೇ ಕೃಷಿ ಭಾರತದ ಬೆನ್ನೆಲುಬು ಎನ್ನುತ್ತಾರೆ.ಸಹಾಯಕ ಕೃಷಿ ನಿರ್ದೇಶಕ ಮೋಹನ್ ಮಾತನಾಡಿ ಆಧುನಿಕ ತಂತ್ರಜ್ಞಾನದ ಬಳಕೆ, ಮಿಶ್ರ ಬೇಸಾಯ, ತೋಟಗಾರಿಕೆ ಸೇರಿ ವಿವಿಧ ಬೆಳೆಗಳ ಮೂಲಕ ಒಂದೆರಡು ಎಕರೆ ಭೂಮಿಯಲ್ಲೂ ಲಕ್ಷಾಂತರ ಆದಾಯ ಗಳಿಸಬಹುದು. ಈ ಬಗ್ಗೆ ಯುವಕರು ಚಿತ್ತ ಹರಿಸಬೇಕು, ಕೃಷಿಯಲ್ಲಿರುವ ಖುಷಿ, ಸಮಾಧಾನ, ಆರೋಗ್ಯ ಮತ್ತು ಆದಾಯ ಯಾವುದರಲ್ಲೂ ಇಲ್ಲ. ಆದರೆ ಇದಕ್ಕೆ ಶ್ರಮ ಅವಶ್ಯಕತೆಯಿದೆ ಭೂಮಿ ಬಂಗಾರ ಕೊಡುತ್ತದೆ ಎಂಬ ಮಾತು ನಿಜವಿದೆ ಎಂದರು.ಕೃಷಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಸಕರನ್ನು ಸನ್ಮಾನಿಸಿದರು. ಇಲಾಖೆಯ ಸಿಬ್ಬಂಧಿ, ಇದೇ ಸಂದರ್ಭದಲ್ಲಿ, ಪಂಚಾಯಿತಿ ಅಧ್ಯಕ್ಷೆ ಸುನೀತಾ ಮಹೇಶ್, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಪ್ರಭಾಕರ ರೆಡ್ಡಿ, ಸೇವಾ ಮಿತ್ರ ರೈತ ಉತ್ಪಾದನ ಕೇಂದ್ರ ವೆಂಕಟ ರೆಡ್ಡಿ, ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಮುನಿಲಕ್ಷ್ಮಮ್ಮ ಆರ್ ಆರ್ ರೆಡ್ಡಿ, ನಾಗೇಂದ್ರ, ಜೆ ಎಸ್ ನವೀನ್. ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.