ಗಜೇಂದ್ರಗಡ: ಸಾಮಾಜಿಕ ಪಿಡುಗಾಗಿರುವ ಮಾದಕ ದ್ರವ್ಯ ಮತ್ತು ಅಕ್ರಮ ಕಳ್ಳ ಸಾಗಾಣಿಕೆಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಸಾರಿರುವ ಸಮರಕ್ಕೆ ಪ್ರತಿಯೊಬ್ಬರು ಕೈಜೋಡಿಸಲು ಮುಂದಾಗಬೇಕು ಎಂದು ಪಿಎಸ್‌ಐ ಸೋಮನಗೌಡ ಗೌಡ್ರ ಹೇಳಿದರು.ಜಿಲ್ಲಾ ಪೊಲೀಸ್, ಗಜೇಂದ್ರಗಡ ಪೊಲೀಸ್ ಠಾಣೆ ಹಾಗೂ ಸ್ಥಳೀಯ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳೊಂದಿಗೆ ಪಟ್ಟಣದಲ್ಲಿ ಸೋಮವಾರ ನಡೆದ ಮಾದಕ ದ್ರವ್ಯ ಮತ್ತು ಅಕ್ರಮ ಕಳ್ಳ ಸಾಗಾಣಿಕೆಯ ವಿರೋಧಿ ದಿನಾಚರಣೆಯ ಜಾಗೃತಿ ಜಾಥಾದಲ್ಲಿ ಮಾತನಾಡಿದರು.
ದೇಶದ ಸಂಪತ್ತಾಗಿರುವ ಯುವ ಸಮೂಹವು ನಿರಂತರ ವಿದ್ಯಾಭ್ಯಾಸದ ಕಡೆಗೆ ಗಮನ ನೀಡಿದರೆ ಉತ್ತಮ ಬದುಕನ್ನು ಕಂಡುಕೊಳ್ಳಲು ಸಾಧ್ಯವಿದೆ. ಆದರೆ ಅತಿಯಾದ ಮೊಬೈಲ್ ಬಳಕೆ ಹಾಗೂ ಟಿವಿ ವೀಕ್ಷಣೆಯಿಂದಾಗಿ ಆಧುನಿಕ ಜೀವನ ಶೈಲಿಗೆ ಮಾರುಹೋಗುವ ಪರಿಣಾಮ ತಮಗೆ ಅರಿವಿಲ್ಲದಂತೆ ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗುತ್ತಿರುವ ವರದಿಗಳಿವೆ. ಇತ್ತ ದೊಡ್ಡ ಸಾಮಾಜಿಕ ಪಿಡುಗಾಗಿರುವ ಅಕ್ರಮ ಕಳ್ಳ ಸಾಗಣೆಯ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಈಗಾಗಲೇ ಅನೇಕ ಕಾನೂನುಗಳು ಜಾರಿಯಲ್ಲಿವೆ. ಹೀಗಾಗಿ ಯುವ ಸಮೂಹ ವಿವಿಧ ಆಮಿಷಗಳ ಬಲೆಗೆ ತುತ್ತಾಗಿ ಶೋಷಿತರಾಗುವುದನ್ನು ತಪ್ಪಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದ ಅವರು, ಪಟ್ಟಣದಲ್ಲಿ ಈಗಾಗಲೇ ಕೆಲ ವರ್ಷಗಳಿಂದ ಶಾಲಾ, ಕಾಲೇಜುಗಳಲ್ಲಿ ಮಾದಕ ದ್ರವ್ಯ ಮತ್ತು ಅಕ್ರಮ ಕಳ್ಳ ಸಾಗಾಣಿಕೆಯ ವಿರೋಧಿ ದಿನದ ಜಾಗೃತಿಯನ್ನು ಮೂಡಿಸುವ ಮೂಲಕ ಯುವ ಸಮೂಹ ಮತ್ತು ಸಮಾಜವನ್ನು ಜಾಗೃತಗೊಳಿಸುವ ಕಾರ್ಯವನ್ನು ಇಲಾಖೆ ಮಾಡುತ್ತಿದೆ. ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ ಅಥವಾ ಅಕ್ರಮ ಚಟುವಟಿಕೆಗಳು ನಡೆಯುವ ಬಗ್ಗೆ ಅನುಮಾನ ವ್ಯಕ್ತವಾದಲ್ಲಿ ತಕ್ಷಣವೇ ಪೊಲೀಸ್ ಇಲಾಖೆಯ ಗಮನಕ್ಕೆ ತರಲು ಜನೆತೆ ಮುಂದಾದಾಗ ಮಾತ್ರ ಸದೃಢ ಸಮಾಜದ ನಿರ್ಮಾಣದ ಕನಸು ಈಡೇರಲು ಸಾಧ್ಯವಾಗುವುದರ ಜತೆಗೆ ಅಕ್ರಮ ಕೃತ್ಯಗಳಿಗೆ ಕಡಿವಾಣ ಹಾಕಬಹುದಾಗಿದೆ ಎಂದರು.ಇದಕ್ಕೂ ಮುನ್ನ ಪಟ್ಟಣದ ದುರ್ಗಾ ವೃತ್ತದಿಂದ ಆರಂಭವಾದ ಜಾಗೃತಿ ಜಾಥಾವು ಇಲ್ಲಿನ ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತದ ಮಾರ್ಗವಾಗಿ ಕಾಲಕಾಲೇಶ್ವರ ವೃತ್ತದಲ್ಲಿ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಮಾದಕ ದ್ರವ್ಯ ಮತ್ತು ಅಕ್ರಮ ಕಳ್ಳ ಸಾಗಾಣಿಕಯ ವಿರುದ್ಧದ ಘೋಷಣೆಗಳನ್ನು ಕೂಗುವ ಮೂಲಕ ಜಾಗೃತಿ ಮೂಡಿಸಿದರು.
ಈ ವೇಳೆ ಎಎಸ್‌ಐ ಎಸ್.ಬಿ. ದಾಡಾಬಾಯಿ, ಸಿಬ್ಬಂದಿಗಳಾದ ಉಮೇಶ ಲಮಾಣಿ, ವಿ.ಡಿ. ಪಾಟೀಲ, ಎಂ.ಬಿ. ಮೇಟಿ, ನಿಂಗಪ್ಪ ನಿಂಗಾಪೂರ, ಮಹೇಂದ್ರಕುಮಾರ ಪವರ್ತಗೌಡರ, ಮಲ್ಲಮ್ಮ ಕೊಠಗಿ, ರಜಿಯಾಬೇಗಂ ಸುಲ್ತಾನ, ಅನ್ನದಾನೇಶ್ವರ ಕಾಲೇಜಿನ ಉಪನ್ಯಾಸಕರಾದ ಸಂಗಮೇಶ ವಸ್ತçದ, ಬಿ.ಬಿ.ಸೂಡಿ, ವಿ.ಎಂ. ಸಾಲಿಮಠ, ವಿ.ಎನ್. ಗಂಜಿಗೌಡರ, ಗೋಪಿ ರಾಯಬಾಗಿ ಸೇರಿ ಇತರರು ಇದ್ದರು.