ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸಿ: ನಿತೇಶ್

KannadaprabhaNewsNetwork | Published : Apr 29, 2024 1:31 AM

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಚಿಕ್ಕೋಡಿ, ಬೆಳಗಾವಿ ಲೋಕಸಭಾ ಮತ ಕ್ಷೇತ್ರಗಳ ಚುನಾವಣೆ ಮೇ 7ರಂದು ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನದ ಸಮಯ ನಿಗದಿಪಡಿಸಲಾಗಿದೆ. ಎಲ್ಲ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಚಿಕ್ಕೋಡಿ, ಬೆಳಗಾವಿ ಲೋಕಸಭಾ ಮತ ಕ್ಷೇತ್ರಗಳ ಚುನಾವಣೆ ಮೇ 7ರಂದು ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನದ ಸಮಯ ನಿಗದಿಪಡಿಸಲಾಗಿದೆ. ಎಲ್ಲ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಕೋಟೆ ಕೆರೆಯಲ್ಲಿ ಮಂಗಳವಾರ ಬೋಟಿಂಗ್ ಮುಖಾಂತರ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು. ಸಂವಿಧಾನ ನೀಡಿದ ಮತದಾನದ ಹಕ್ಕನ್ನು ಪ್ರತಿ ಮತದಾರರು ಚಲಾಯಿಸಬೇಕು. ಈಗಾಗಲೇ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿಯಿಂದ ಬಹಳಷ್ಟು ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ರಾಹುಲ್ ಶಿಂಧೆ ಮಾತನಾಡಿ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳಲ್ಲಿ ಮತದಾನ ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಮ್ಮ ಮತ ನಮ್ಮ ಹಕ್ಕು, ಎರಡು ಮತ ಕ್ಷೇತ್ರದ ಮತದಾರರು ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ದೇಶ ಕಟ್ಟುವಲ್ಲಿ ಪಾತ್ರ ವಹಿಸಬೇಕು ಎಂದು ತಿಳಿಸಿದರು.

ಚುನಾವಣೆ ಪರ್ವ ದೇಶದ ಗರ್ವ, ಮತದಾನ ನಿಮ್ಮ ಹಕ್ಕು ಹಾಗೂ ನಿಮ್ಮ ಜವಾಬ್ದಾರಿ, ನೈತಿಕ ಮತದಾನ ಮಾಡಿ, ನನ್ನ ಮತ ನನ್ನ ಹಕ್ಕು, ನಿಮ್ಮ ಮತ ನಿಮ್ಮ ಭವಿಷ್ಯ, ಮತ ಚಲಾವಣೆ ನಿಮ್ಮ ಹಕ್ಕು, ನಿಮ್ಮ ಮತ ಅಮೂಲ್ಯ ತಪ್ಪದೇ ಮತ ಚಲಾಯಿಸಿ ಎಂಬ ವಿವಿಧ ಜಾಗೃತಿ ಫಲಕಗಳನ್ನು ಬೋಟಿಂಗ್ ಮೂಲಕ ಪ್ರದರ್ಶಿಸಲಾಯಿತು.

ಜಿಪಂ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ ದಿವಿಟರ, ಯೋಜನಾ ನಿರ್ದೇಶಕ ಕೃಷ್ಣರಾಜು, ಲೆಕ್ಕಾಧಿಕಾರಿ ಗಂಗಾ ಹಿರೇಮಠ್, ಮಹಾನಗರ ಪಾಲಿಕೆ ಸಿಬ್ಬಂದಿ, ಪೌರ ಕಾರ್ಮಿಕರು, ಜಿಪಂ ಸಿಬ್ಬಂದಿ ಮತದಾನ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

Share this article