ಎಲ್ಲರೂ ಕಠಿಣ ಅಭ್ಯಾಸ ಮಾಡಿ ಉನ್ನತ ಹುದ್ದೆ ಪಡೆಯಿರಿ

KannadaprabhaNewsNetwork |  
Published : Jul 26, 2025, 12:30 AM IST
 ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ  ಡಾ. ನಾಗಲಕ್ಷ್ಮಿ ಚೌಧರಿ ಅವರು  ಹನೂರು ಭಾಗದ ವಿವಿಧ ಕಾಡಂಚಿನ ಗ್ರಾಮಗಳಿಗೆ ಭೇಟಿ ನೀಡಿ ಜನರಿಂದಅಹವಾಲುಗಳನ್ನು ಆಲಿಸಿದರು. | Kannada Prabha

ಸಾರಾಂಶ

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹನೂರು ಭಾಗದ ವಿವಿಧ ಕಾಡಂಚಿನ ಗ್ರಾಮಗಳಿಗೆ ಭೇಟಿ ನೀಡಿ ಜನರಿಂದ ಅಹವಾಲುಗಳನ್ನು ಆಲಿಸಿದರು. ಜೀರಿಗೆಗದ್ದೆಯ ಆಶ್ರಮ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಹನೂರು ಭಾಗದ ವಿವಿಧ ಕಾಡಂಚಿನ ಗ್ರಾಮಗಳಿಗೆ ಭೇಟಿ ನೀಡಿ ಜನರಿಂದ ಅಹವಾಲುಗಳನ್ನು ಆಲಿಸಿದರು. ಜೀರಿಗೆಗದ್ದೆಯ ಆಶ್ರಮ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಹನೂರು ಭಾಗದ ಹೊಸದೊಡ್ಡಿ ಗ್ರಾಮಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ಆಗಮಿಸುತ್ತಿದ್ದಂತೆ ಸಂಭ್ರಮದಿಂದ ಸ್ಥಳೀಯ ಜನತೆ ಬರ ಮಾಡಿಕೊಂಡರು. ಅಧ್ಯಕ್ಷೆ ಅಲ್ಲಿನ ಜನರ ಕುಂದು ಕೊರತೆಗಳನ್ನ ಆಲಿಸಿದರು. ಇದೇ ವೇಳೆ ವಿಧವಾ ವೇತನ, ಅಂಗವಿಕಲರ ವೇತನ, ಆಧಾರ್ ಕಾರ್ಡ್ ಮಾಡಿಕೊಡಲು ಜನರು ಮನವಿ ಮಾಡಿದರು. ಅಹವಾಲು ಆಲಿಸಿ ಈ ಎಲ್ಲಾ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಸೂಕ್ತ ಪರಿಹಾರ ಹಾಗೂ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ತಿಳಿಸಿದರು.

ಬಳಿಕ ಜೀರಿಗೆಗದ್ದೆ ಗ್ರಾಮಕ್ಕೆ ಆಗಮಿಸಿದ ಆಯೋಗದ ಅಧ್ಯಕ್ಷೆಯನ್ನು ಸಾಂಪ್ರದಾಯಿಕ ಅರಣ್ಯ ವಾಸಿಗಳ ವಾದ್ಯದೊಂದಿಗೆ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಜೀರಿಗೆ ಗದ್ದೆಯ ಆಶ್ರಮ ಶಾಲೆಗೆ ಭೇಟಿ ನೀಡಿದ ಅವರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೀರಿಗೆ ಗದ್ದೆಯ ಮಾದಮ್ಮ ಅವರನ್ನು ಸನ್ಮಾನಿಸಿದರು. ನಂತರ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಆದಿವಾಸಿ ನಾಯಕರಾದ ಬಿರ್ಸಾ ಮುಂಡಾ, ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಆಶ್ರಮ ಶಾಲೆ ಮಕ್ಕಳು ಸಂವಿಧಾನ ಪೀಠಿಕೆ ವಾಚನ ಮಾಡಿದರು. ಇದನ್ನು ಕಂಡು ಪ್ರಶಂಸೆ ವ್ಯಕ್ತಪಡಿಸಿದ ಅಧ್ಯಕ್ಷರು ಆದಿವಾಸಿ ಮಕ್ಕಳು ಇಷ್ಟು ಚೆನ್ನಾಗಿ ಸಂವಿಧಾನ ಪೀಠಿಕೆ ವಾಚಿಸಿರುವುದು ಅತ್ಯಂತ ಹೆಮ್ಮೆ ಹಾಗೂ ಮೆಚ್ಚುಗೆಯ ವಿಷಯವಾಗಿದೆ ಎಂದರು.

ಇದೇ ವೇಳೆ ಮಕ್ಕಳೊಂದಿಗೆ ಸಂವಾದ ನಡೆಸಿದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಯಾವುದೇ ಕಾರಣಕ್ಕೂ ವಿದ್ಯಾಭ್ಯಾಸದಿಂದ ವಂಚಿತರಾಗಬಾರದು. ಪ್ರತಿಯೊಬ್ಬರು ಹೆಚ್ಚು ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಕಾಡಿನ ಮಕ್ಕಳು ಯಾರಿಗೂ ಕಡಿಮೆ ಇಲ್ಲ. ನಿಗಮಗೆ ಎಲ್ಲಾ ಅವಕಾಶಗಳು ಇವೆ. ಗಂಡು ಹೆಣ್ಣು ಮಕ್ಕಳು ಎನ್ನದೇ ಪ್ರತಿಯೊಬ್ಬರು ವಿದ್ಯಾಭ್ಯಾಸ ಪಡೆಯಬೇಕು. ಇದರಿಂದ ನನ್ನಂತೆಯೇ ನೀವೂ ಸಹ ಉನ್ನತ ಅಧಿಕಾರ ಪಡೆಯಬಹುದು. ಇದಕ್ಕಿಂತಲೂ ಹೆಚ್ಚಿನ ಅವಕಾಶಗಳನ್ನು ಪಡೆಯಲು ಶಿಕ್ಷಣದಿಂದ ಮಾತ್ರ ಸಾಧ್ಯವಾಗಲಿದೆ ಎಂದು ಮಕ್ಕಳಿಗೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಸ್ಥಳೀಯರು ಮೂಲ ಸೌಕರ್ಯಗಳನ್ನು ಒದಗಿಸುವಂತೆ ಕೋರಿದರು. ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅಧ್ಯಕ್ಷರಾದ ಡಾ. ನಾಗಲಕ್ಷ್ಮಿ ಚೌಧರಿ ಅವರು ವಸತಿ ಸೌಲಭ್ಯ, ನರೇಗಾ ಅಡಿ ಉದ್ಯೋಗ ಜನರಿಗೆ ಅಗತ್ಯವಾದ ದಾಖಲೆಗಳು, ಇನ್ನಿತರ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವಂತೆ ತಾಕೀತು ಮಾಡಿದರು. ತಹಸೀಲ್ದಾರ್‌ ಚೈತ್ರಾ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಲಿಂಗಯ್ಯ, ಇನ್ನಿತರ ಅಧಿಕಾರಿಗಳು ಇದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಭಾರೀ ಮಳೆ: 15 ಜಿಲ್ಲೆಗೆ ಯೆಲ್ಲೋ ಅಲರ್ಟ್‌
ವರ್ಗಾವಣೆ ಬಳಿಕ ಪೊಲೀಸರು ವರದಿ ಮಾಡಿಕೊಳ್ಳದಿದ್ದರೆ ಸಂಬಳ ಕಟ್‌ : ವೈದ್ಯಕೀಯ ರಜೆಗೆ ಬ್ರೇಕ್