ದೇಶದ ಅಭಿವೃದ್ಧಿಗೆ ಎಲ್ಲರ ಸಹಭಾಗಿತ್ವ ಅಗತ್ಯ: ವೀರೇಶ್ ಕುಮಾರ್

KannadaprabhaNewsNetwork |  
Published : Aug 16, 2025, 12:00 AM IST
ವಿರೇಶ್ ಕುಮಾರ್ ರಾಷ್ಟçಧ್ವಜಾರೋಹಣ ಮಾಡಿದರು | Kannada Prabha

ಸಾರಾಂಶ

ಸ್ವಾತಂತ್ರ್ಯ ನಂತರ ಭಾರತ ದೇಶವು ಎಲ್ಲಾ ಕ್ಷೇತ್ರದಲ್ಲೂ ಸಾರ್ವಭೌಮತ್ವ ಸಾಧಿಸಿದ್ದು, ಕೃಷಿ, ಆರೋಗ್ಯ, ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಅಂತರಿಕ್ಷಾ, ಆರ್ಥಿಕವಾಗಿಯೂ ಭಾರತ ಸದೃಢವಾಗಿದೆ ಎಂದು ಉಪ ವಿಭಾಗಾಧಿಕಾರಿ ವೀರೇಶ್ ಕುಮಾರ್ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸಾಗರ

ಸ್ವಾತಂತ್ರ್ಯ ನಂತರ ಭಾರತ ದೇಶವು ಎಲ್ಲಾ ಕ್ಷೇತ್ರದಲ್ಲೂ ಸಾರ್ವಭೌಮತ್ವ ಸಾಧಿಸಿದ್ದು, ಕೃಷಿ, ಆರೋಗ್ಯ, ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಅಂತರಿಕ್ಷಾ, ಆರ್ಥಿಕವಾಗಿಯೂ ಭಾರತ ಸದೃಢವಾಗಿದೆ ಎಂದು ಉಪ ವಿಭಾಗಾಧಿಕಾರಿ ವೀರೇಶ್ ಕುಮಾರ್ ಅಭಿಪ್ರಾಯಪಟ್ಟರು.

ಪಟ್ಟಣದ ನೆಹರು ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಸರ್ವಾಂಗೀಣ ಅಭಿವೃದ್ದಿಗೆ ಎಲ್ಲರ ಸಹಭಾಗಿತ್ವ ಅಗತ್ಯ ಎಂದು ಹೇಳಿದರು.

ವರ್ತಮಾನದಲ್ಲಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿರುವ ಭಾರತವು ಮುಂದಿನ ದಿನಗಳಲ್ಲಿ ವಿಶ್ವದ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆ ನಿಚ್ಚಳವಾಗಿದೆ. ಕರ್ನಾಟಕ ರಾಜ್ಯವು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ದಿ ಸಾಧಿಸುತ್ತಿದ್ದು ಜನಸಾಮಾನ್ಯರ ಆರ್ಥಿಕ ದೃಢತೆ ಹೆಚ್ಚಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಸ್ವಾತಂತ್ರö್ಯಕ್ಕಾಗಿ ಹಗಲಿರುಳು ಶ್ರಮಿಸಿದ ನಮ್ಮ ಹಿರಿಯರನ್ನು ನೆನಪಿಸಿಕೊಳ್ಳುವ ಮೂಲಕ ಅವರ ತ್ಯಾಗ ಬಲಿದಾನವನ್ನು ಸದಾ ಸ್ಮರಿಸುವಂತಾಗಬೇಕು ಎಂದು ಹೇಳಿದರು.

ಶಾಸಕ ಗೋಪಾಲಕೃಷ್ಣ ಬೇಳೂರು, ಜಗತ್ತಿನಲ್ಲಿ ಸರ್ವ ಜನಾಂಗಗಳ ಶಾಂತಿಯ ತೋಟವೆಂದರೆ ಭಾರತ ಮಾತ್ರ. ಹಲವು ಜಾತಿ, ಧರ್ಮಗಳಿದ್ದರೂ ನಾವೆಲ್ಲ ಒಂದೇ ಮನಸ್ಸಿನಿಂದ ಭಾರತವನ್ನು ಕಟ್ಟುವ ಕೆಲಸ ಮಾಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸಾಮಾನ್ಯ ವ್ಯಕ್ತಿಯನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಅನೇಕ ಯೋಜನೆ ಜಾರಿಗೆ ತಂದಿದೆ. ಸಾಗರ ವಿಧಾನಸಭಾ ಕ್ಷೇತ್ರ ಸರ್ವಾಂಗೀಣ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಸುಮಾರು ೧೪ ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತ ರಂಗಮಂದಿರ, ನೆಹರೂ ಮೈದಾನದ ಅಭಿವೃದ್ದಿಯ ಜೊತೆಗೆ ತಾಲ್ಲೂಕಿನಲ್ಲಿ ೨೩೫ ಕಾಲುಸಂಕ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ. ದಿನದ ೨೪ ಗಂಟೆ ನೀರು ಪೂರೈಕೆ ಮಾಡಲು ೪೫ ಕೋಟಿ ರು. ಬಿಡುಗಡೆ ಹಂತದಲ್ಲಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಬಾರದು:

ಇದಕ್ಕೂ ಮೊದಲು ಪಟ್ಟಣದ ಗಣಪತಿ ಕೆರೆ ದಂಡೆಯಲ್ಲಿ ನಗರಸಭೆ ವತಿಯಿಂದ ಶಾಶ್ವತ ಧ್ವಜಸ್ತಂಭದಲ್ಲಿ ಬೃಹತ್ ಧ್ವಜಾರೋಹಣ ನಡೆಯಿತು. ಶಾಸಕ ಗೋಪಾಲಕೃಷ್ಣ ಬೇಳೂರು ಧ್ವಜಾರೋಹಣ ಮಾಡಿ ಮಾತನಾಡಿ, ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಬಾರದು. ಭಾರತವು ಜಾತ್ಯತೀತ ರಾಷ್ಟ್ರವಾಗಿದ್ದು ಪರಸ್ಪರ ಸಾಮರಸ್ಯದ ಮೂಲಕ ದೇಶದ ಅಭಿವೃದ್ದಿಗೆ ನಾವೆಲ್ಲಾ ಕೊಡುಗೆ ನೀಡಬೇಕು. ದೇಶವು ಅಭಿವೃದ್ಧಿಯನ್ನು ವೇಗವಾಗಿ ಸಾಧಿಸುತ್ತಿದೆ. ರಾಜ್ಯ ಸರ್ಕಾರ ಸಹ ಅಭಿವೃದ್ದಿ ಜತೆಗೆ ಎಲ್ಲ ವರ್ಗದವರಲ್ಲಿ ಆರ್ಥಿಕ ಶಕ್ತಿ ತುಂಬುವ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಮೈತ್ರಿ ವಿ. ಪಾಟೀಲ್ ಮಾತನಾಡಿದರು. ಉಪಾಧ್ಯಕ್ಷೆ ಸವಿತಾ ವಾಸು, ಎ.ಎಸ್.ಪಿ. ಡಾ.ಬೆನಕಪ್ರಸಾದ್, ತಾಪಂ ಕಾರ್ಯನಿರ್ವಾಹಣಾಧಿಕಾರಿ ಗುರುಕೃಷ್ಣ ಶೆಣೈ, ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ, ಪೌರಾಯುಕ್ತ ಎಚ್.ಕೆ.ನಾಗಪ್ಪ ಹಾಜರಿದ್ದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!