ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲಾ ಮಂಡಿ ಹಮಾಲಿ ಮತ್ತು ಕೂಲಿ ಕಾರ್ಮಿಕರ ಸಂಘ ಹಾಗೂ ಅಂತರಸನಹಳ್ಳಿ ತರಕಾರಿ ಮಾರುಕಟ್ಟೆ ಹಮಾಲಿ ಕೂಲಿ ಕಾರ್ಮಿಕರ ಸಂಘದ ಆಶ್ರಯದಲ್ಲಿ ಗುರುವಾರ ನಗರದ ಎಪಿಎಂಸಿ ಯಾರ್ಡಿನ ಸಂಘದ ಕಚೇರಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬಸವ ಜಯಂತಿ ಹಮ್ಮಿಕೊಂಡು ಮಹನೀಯರ ಕೊಡುಗೆ ಸ್ಮರಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿದ ಎಪಿಎಂಸಿ ಕಾರ್ಯದರ್ಶಿ ಬಿ.ಎಲ್. ಕೃಷ್ಣಪ್ಪ ಮಾತನಾಡಿ, ಡಾ. ಅಂಬೇಡ್ಕರ್ ಅವರು ವಿಶ್ವವೇ ಮೆಚ್ಚಿದ ಶ್ರೇಷ್ಠ ಸಂವಿಧಾನವನ್ನು ನಮಗೆ ಕೊಟ್ಟು ಎಲ್ಲರೂ ಸಮಾನವಾಗಿ ಬಾಳುವ ಅವಕಾಶ ಕಲ್ಪಿಸಿದ್ದಾರೆ. ಅವರ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.ಹಮಾಲಿ ಮತ್ತು ಕೂಲಿ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಸಮಾಜದಲ್ಲಿ ಸ್ಥಾನಮಾನ, ಗೌರವ ಹೆಚ್ಚುತ್ತದೆ. ಹಮಾಲಿಗಳ ಸಂಘದವರು ಪ್ರತಿ ವರ್ಷ ಹಮಾಲಿಗಳ ಮಕ್ಕಳಿಗೆ ಪಠ್ಯಪರಿಕರ ವಿತರಿಸಿ ಅವರ ಶಿಕ್ಷಣವನ್ನು ಪ್ರೋತ್ಸಾಹಿಸಬೇಕು. ಅಲ್ಲದೆ, ಕನಿಷ್ಠ ವರ್ಷಕ್ಕೊಮ್ಮೆಯಾದರೂ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿ ಹಮಾಲಿಗಳ ಆರೋಗ್ಯ ತಪಾಸಣೆ, ಚಿಕಿತ್ಸೆ ಒದಗಿಸಲು ನೆರವಾಗಬೇಕು ಎಂದು ತಿಳಿಸಿದರು.ನಿವೃತ್ತ ಪೊಲೀಸ್ ಇನ್ಸ್ ಪೆಕ್ಟರ್ ಎಸ್. ಮುನಿರಾಜು ಮಾತನಾಡಿ, ಅಂಬೇಡ್ಕರ್ ಈ ದೇಶದಲ್ಲಿ ಹುಟ್ಟದಿದ್ದರೆ ನಮ್ಮ ಪರಿಸ್ಥಿತಿ ಹೇಗಿರುತ್ತಿತ್ತು ಎಂಬದನ್ನು ಚಿಂತನೆ ಮಾಡಿ, ಅವರು ಕೊಟ್ಟ ಸಂವಿಧಾನದಿಂದ ನಾವೆಲ್ಲಾ ಸ್ವಾಭಿಮಾನದಿಂದ ಬಾಳಲು ಸಾಧ್ಯವಾಗಿದೆ. ಈ ಮೂಲಕ ಅಂಬೇಡ್ಕರ್ ಸಾಮಾಜಿಕ ಕ್ರಾಂತಿ ಮಾಡಿದ ಹರಿಕಾರರು ಎಂದರು.ಹಮಾಲಿಗಳು ದುಶ್ಚಟಗಳಿಗೆ ಬಲಿಯಾಗಬಾರದು, ತಮ್ಮ ಆರೋಗ್ಯ, ಕುಟುಂಬದ ಸೌಖ್ಯದ ಬಗ್ಗೆ ಗಮನ ಹರಿಸಬೇಕು. ದುಡಿಯುವ ಹಣದಲ್ಲಿ ಒಂದಷ್ಟು ಉಳಿತಾಯ ಮಾಡಬೇಕು. ಇಂದಿನ ಪರಿಸ್ಥಿತಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಸವಾಲಾಗಿದೆ. ಆರೋಗ್ಯಸೇವೆ ದುಬಾರಿಯಾಗಿದೆ. ಆರೋಗ್ಯವಿಮೆ ಮಾಡಿಸಿಕೊಳ್ಳಿ, ಉಳಿತಾಯ ಯೋಜನೆಗಳಲ್ಲಿ ತಮ್ಮ ದುಡಿಮೆ ಹಣ ತೊಡಗಿಸಿದರೆ ಕಷ್ಟ ಕಾಲಕ್ಕೆ ಸಹಾಯಕ್ಕೆ ಬರುತ್ತದೆ ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಿಕ್ಕಹನುಮಂತಯ್ಯ ಮಾತನಾಡಿ, ಕೂಲಿ ಕಾರ್ಮಿಕರು, ಶೋಷಿತರ ಪಾಲಿಗೆ ಡಾ. ಅಂಬೇಡ್ಕರ್ ಅವರು ದೇವರ ರೂಪಿಯಾಗಿದ್ದಾರೆ. ಅವರು ಕೊಟ್ಟ ಸಂವಿಧಾನದಲ್ಲಿ ನಾವೆಲ್ಲಾ ಸ್ವಾಭಿಮಾನದಿಂದ ಬಾಳುವಂತಹ ಶಕ್ತಿ ತಂದುಕೊಟ್ಟಿದ್ದಾರೆ. ಎಲ್ಲರೂ ಸಮಾನವಾಗಿ, ಸ್ವಾಭಿಮಾನದಿಂದ ಗೌರವದಿಂದ ಬಾಳುವಂತಹ ಸಮ ಸಮಾಜ ನಿರ್ಮಾಣಕ್ಕೆ ನೆರವಾಗಿದ್ದಾರೆ ಎಂದರು.ಸಂಘದ ಸಹ ಕಾರ್ಯದರ್ಶಿ ಎಂ.ಡಿ. ರಾಮಚಂದ್ರ ಮಾತನಾಡಿ, ಅಂಬೇಡ್ಕರ್ ಅವರು ಶೋಷಿತರ ಪರವಾದ ಹೋರಾಟ, ಸಂವಿಧಾನ ರಚನೆ ಮಾಡದಿದ್ದರೆ ಅನೇಕ ಸಮುದಾಯಗಳು ಇನ್ನೂ ಗುಲಾಮಗಿರಿಯಲ್ಲೇ ನರಳಬೇಕಾಗಿತ್ತು. ಇಂತಹ ಅಂಬೇಡ್ಕರ್ ಅವರು ಕೊಟ್ಟ ಕೊಡುಗೆಗಳನ್ನು ಅನುಸರಿಸಿಕೊಂಡು ಸದಾ ಅವರನ್ನು ಸ್ಮರಿಸಬೇಕು ಎಂದು ಹೇಳಿದರು.ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ ಬಿ.ಎಲ್. ಚಂದ್ರಕೀರ್ತಿ, ವರ್ತಕರಾದ ನಾಗರಾಜು, ಬಲರಾಮಶೆಟ್ಟಿ, ಪ್ರಸನ್ನ ಚನ್ನಬಸವ, ಈಶ್ವರ ಗುಪ್ತ, ರೇವಂತು, ರೈಟರ್ ರಾಮಣ್ಣ, ಬಾಬು, ರಘು, ಸಂಘದ ಉಪಾಧ್ಯಕ್ಷ ಮೂರ್ತಿ, ಕಾರ್ಯದರ್ಶಿ ಕೆ.ಹುಚ್ಚಹನುಮಯ್ಯ, ಖಜಾಂಚಿ ತರಕಾರಿ ಮಾರುಕಟ್ಟೆ ನಾಗರಾಜು, ಸಂಘದ ನಿರ್ದೇಶಕರು ಭಾಗವಹಿಸಿದ್ದರು.ಈ ವೇಳೆ ಮಹಿಳೆಯರಿಗೆ ಬಳೆ, ಕುಂಕುಮ, ಸೀರೆ ವಿತರಿಸಲಾಯಿತು. ಕಾರ್ಯಕ್ರಮಕ್ಕೆ ಮೊದಲು ಎಪಿಎಂಸಿ ಯಾರ್ಡ್ ನ ಪ್ರಮುಖ ರಸ್ತೆಗಳಲ್ಲಿ ಡಾ. ಅಂಬೇಡ್ಕರ್ ಹಾಗೂ ಬಸವಣ್ಣ ಭಾವಚಿತ್ರಗಳನ್ನು ಮೆರವಣಿಗೆ ಮಾಡಲಾಯಿತು.