ಪ್ರತಿಯೊಬ್ಬರೂ ಆರೋಗ್ಯವಾಗಿರಬೇಕು ಎಂಬುದು ಶೃಂಗೇರಿ ಶ್ರೀ ಮಠದ ಆಶಯ: ಕೃಷ್ಣ ಮೂರ್ತಿ

KannadaprabhaNewsNetwork |  
Published : Aug 08, 2024, 01:50 AM ISTUpdated : Aug 08, 2024, 09:12 AM IST
ನರಸಿಂಹರಾಜಪುರ ತಾಲೂಕು ಬ್ರಾಹ್ಮಣ ಮಹಾ ಸಭಾದ ಆಶ್ರಯದಲ್ಲಿ ಶೃಂಗೇರಿ ಮಠದಿಂದ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಶೃಂಗೇರಿ ಮಠದ ಶ್ರೀಗಳ ಆಪ್ತ  ಕಾರ್ಯದರ್ಶಿ ಕೃಷ್ಣಮೂರ್ತಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಚಿನೈನ ಅಭಿನವ ಕ್ಲಿನಿಕ್ ನ ಡಾ. ಎ.ಜಿ.ರಮೇಶ್,ತಾಲೂಕು ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಕೊನೋಡಿ ಗಣೇಶ್ ಇದ್ದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಪ್ರತಿಯೊಬ್ಬರೂ ಆರೋಗ್ಯವಾಗಿರಬೇಕು ಎಂಬುದು ಶೃಂಗೇರಿ ಶ್ರೀ ಮಠದ ಆಶಯವಾಗಿದೆ ಎಂದು ಶೃಂಗೇರಿ ಮಠದ ಶ್ರೀಗಳ ಆಪ್ತ ಕಾರ್ಯದರ್ಶಿ ಕೃಷ್ಣಮೂರ್ತಿ ತಿಳಿಸಿದರು.

 ನರಸಿಂಹರಾಜಪುರ :  ಪ್ರತಿಯೊಬ್ಬರೂ ಆರೋಗ್ಯವಾಗಿರಬೇಕು ಎಂಬುದು ಶೃಂಗೇರಿ ಶ್ರೀ ಮಠದ ಆಶಯವಾಗಿದೆ ಎಂದು ಶೃಂಗೇರಿ ಮಠದ ಶ್ರೀಗಳ ಆಪ್ತ ಕಾರ್ಯದರ್ಶಿ ಕೃಷ್ಣಮೂರ್ತಿ ತಿಳಿಸಿದರು.

ಬುಧವಾರ ಅಗ್ರಹಾರದ ತಾಲೂಕು ಬ್ರಾಹ್ಮಣ ಮಹಾ ಸಭಾದ ಕಚೇರಿ ಸಭಾಂಗಣದಲ್ಲಿ ಶೃಂಗೇರಿ ಮಠ ಹಾಗೂ ತಾಲೂಕು ಬ್ರಾಹ್ಮಣ ಮಹಾ ಸಭಾದ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಶೃಂಗೇರಿ ಭಾರತೀ ತೀರ್ಥ ಸ್ವಾಮೀಜಿ ಪೀಠಾರೋಹಣ ಮಾಡಿ 50 ವರ್ಷ ತುಂಬಿದ ನೆನಪಿನಲ್ಲಿ ಸುವರ್ಣ ಭಾರತಿ ಯೋಜನೆಯಡಿ ಶೃಂಗೇರಿ ಮಠದಿಂದ ಇಲ್ಲಿನ ಬ್ರಾಹ್ಮಣ ಮಹಾ ಸಭಾದ ಸಹಕಾರದೊಂದಿಗೆ ಉಚಿತ ವೈದ್ಯಕೀಯ ಶಿಬಿರ ಏರ್ಪಡಿಸಲಾಗಿದೆ. ಬ್ರಾಹ್ಮಣ ಮಹಾ ಸಭಾದವರಿಗೆ ಶ್ರೀ ಮಠದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು 1 ಲಕ್ಷ ರು.ನೀಡುತ್ತಿದ್ದೇವೆ ಎಂದರು.

ಮುಖ್ಯ ಅತಿಥಿಯಾಗಿದ್ದ ಚಿನೈನ ಅಭಿನವ ಐ ಕ್ಲಿನಿಕ್ ನ ಡಾ.ಎ.ಜಿ.ರಮೇಶ್‌ ಮಾತನಾಡಿ, ಕಳೆದ ತಿಂಗಳು 26, 27 ಹಾಗೂ 28 ರಂದು ವೈದ್ಯರ ತಂಡ ಆಗಮಿಸಿ ಪೂರ್ವಭಾವಿಯಾಗಿ ಪ್ರಾಥಮಿಕ ಶಿಬಿರ ನಡೆಸಿ 450 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಕಣ್ಣು, ದಂತ, ಚರ್ಮರೋಗ, ಜನರಲ್‌ ಚೆಕಪ್‌, ಹೃದಯಕ್ಕೆ ಸಂಬಂಧಪಟ್ಟ ಖಾಯಿಲೆ, ಮಧು ಮೇಹ ಮುಂತಾದ ರೋಗಗಳ ಬಗ್ಗೆ ತಪಾಸಣೆ ಮಾಡಲಾಗಿತ್ತು.ಇಂದು ಆ ರೋಗಿಗಳಿಗೆ ಸಂಬಂಧಪಟ್ಟಂತೆ ಚಿನೈನಿಂದ 14 ತಜ್ಞ ವೈದ್ಯರು, ಅಮೆರಿಕಾದ ತಜ್ಞ ವೈದ್ಯರು ಹಾಗೂ 6 ತಾಂತ್ರಿಕ ಸಿಬ್ಬಂದಿ ಆಗಮಿಸಿದ್ದಾರೆ. ಕಾಯಿಲೆಗಳ ಪರೀಕ್ಷಿಸಲು ಎಲ್ಲಾ ತರದ ಪರಿಕರಗಳನ್ನು ತಂದಿದ್ದೇವೆ. ಶಸ್ತ್ರ ಚಿಕಿತ್ಸೆ ಅಗತ್ಯವಿದ್ದವರಿಗೆ ಈ ಭಾಗದ ದೊಡ್ಡ ಆಸ್ಪತ್ರೆಗಳಿಗೆ ಕಳಿಸಲಾಗುವುದು. ಅಗತ್ಯವಿದ್ದವರಿಗೆ ಔಷದಿ ಬರೆದುಕೊಡುತ್ತೇವೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಕೊನೋಡಿ ಗಣೇಶ್ ಮಾತನಾಡಿ, ಆರೋಗ್ಯವೇ ಭಾಗ್ಯವಾಗಿದ್ದು ಜನರಿಗೆ ಅನುಕೂಲವಾಗಲಿ ಎಂದು ಶೃಂಗೇರಿ ಮಠದ ಸಹಕಾರದೊಂದಿಗೆ ವೈದ್ಯಕೀಯ ತಪಾಸಣೆ ಶಿಬಿರ ಏರ್ಪಡಿಸಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಶೃಂಗೇರಿ ಮಠದಿಂದ ತಾಲೂಕು ಬ್ರಾಹ್ಮಣ ಮಹಾ ಸಭಾಕ್ಕೆ 1 ಲಕ್ಷ ರು. ದೇಣಿಗೆಯ ಚೆಕ್‌ ನ್ನು ಶೃಂಗೇರಿ ಮಠದ ಕೃಷ್ಣಮೂರ್ತಿಗಳು ಹಸ್ತಾಂತರಿಸಿದರು. ತಾಲೂಕು ಬ್ರಾಹ್ಮಣ ಮಹಾ ಸಭಾದಿಂದ ಶೃಂಗೇರಿ ಮಠದ ಶ್ರೀಗಳ ಆಪ್ತ ಕಾರ್ಯದರ್ಶಿ ಕೃಷ್ಣಮೂರ್ತಿಗಳನ್ನು ಸನ್ಮಾನಿಸಲಾಯಿತು. ಎಂ.ವಿ.ರಾಜೇಂದ್ರಕುಮಾರ್ ಸ್ವಾಗತಿಸಿದರು. ಎಂ.ಆರ್‌.ರವಿಶಂಕರ್‌ ವಂದಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ