ಡೆಂಘೀ ನಿಯಂತ್ರಣಕ್ಕೆ ಎಲ್ಲರೂ ಸಹಕರಿಸಿ

KannadaprabhaNewsNetwork |  
Published : May 17, 2025, 01:58 AM IST
ಪೋಟೋ, 16ಎಚ್‌ಎಸ್‌ಡಿ4: ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಕೀಟಜನ್ಯ ರೋಗಗಳ ನಿಯಂತ್ರಣ ವಿಭಾಗ, ಜಿಲ್ಲಾಸ್ಪತ್ರೆ ಸಹಯೋಗದೊಂದಿಗೆ ರಾಷ್ಟ್ರೀಯ ಡೆಂಗಿ ದಿನ ಅಂಗವಾಗಿ ಜಾಗೃತಿ ಜಾಥಾಕ್ಕೆ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್  ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. | Kannada Prabha

ಸಾರಾಂಶ

ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ರಾಷ್ಟ್ರೀಯ ಡೆಂಘೀ ದಿನ ಅಂಗವಾಗಿ ಜಾಗೃತಿ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮುಂಗಾರು ಮಳೆ ಪ್ರಾರಂಭವಾಗಲಿದ್ದು ಡೆಂಘೀ ನಿಯಂತ್ರಣಕ್ಕೆ ಎಲ್ಲರೂ ಸಹಕರಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಹೇಳಿದರು.

ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಕೀಟಜನ್ಯ ರೋಗಗಳ ನಿಯಂತ್ರಣ ವಿಭಾಗ, ಜಿಲ್ಲಾಸ್ಪತ್ರೆ ಸಹಯೋಗದೊಂದಿಗೆ ರಾಷ್ಟ್ರೀಯ ಡೆಂಘೀ ದಿನ ಅಂಗವಾಗಿ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಾರ್ವಜನಿಕ ಜಾಗೃತಿಗಾಗಿ ರಾಷ್ಟ್ರೀಯ ಡೆಂಘೀ ದಿನ ಆಚರಿಸಲಾಗುತ್ತಿದೆ. ಈ ವರ್ಷದ ಧ್ಯೇಯವಾಕ್ಯ ಡೆಂಘೀ ಸೋಲಿಸಲು ಹೆಜ್ಜೆಗಳು ಪರಿಶೀಲಿಸಿ, ಸ್ವಚ್ಛಗೊಳಿಸಿ, ಮುಚ್ಚಿಡಿ ಎಂಬುದಾಗಿದ್ದು, ಎಲ್ಲ ಹಂತಗಳಲ್ಲಿಯೂ ಚಟುವಟಿಕೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಕಳೆದ ವರ್ಷ 929 ಡೆಂಘೀ ಪ್ರಕರಣಗಳು ಜಿಲ್ಲೆಯಾದ್ಯಂತ ಪತ್ತೆಯಾಗಿದ್ದವು. ಈ ವರ್ಷ ಮೇ15 ರವರೆಗೆ 43 ಪ್ರಕರಣಗಳು ಕಂಡುಬಂದಿವೆ. ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಆದಾಗ್ಯೂ ಸಹ ಮುಂಜಾಗ್ರತಾ ಕ್ರಮ ಜಾರಿಯಲ್ಲಿರಬೇಕು. ಇಲಾಖೆಯಾಗಲಿ, ಸಾರ್ವಜನಿಕರಾಗಲಿ ನಿರ್ಲಕ್ಷ್ಯತೋರುವುದು ಬೇಡ ಎಂದು ಹೇಳಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಾಶಿ ಮಾತನಾಡಿ, ನಗರ ಪ್ರದೇಶಗಳಲ್ಲಿ ಡೆಂಘೀ ಪ್ರಕರಣಗಳು ಹೆಚ್ಚು ಕಂಡು ಬರುತ್ತಿದ್ದು, ಪ್ರತಿ ಶುಕ್ರವಾರ ಮತ್ತು ಮಂಗಳವಾರ ನಗರ ಲಾರ್ವ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಅಲ್ಲಲ್ಲಿ ಆರೋಗ್ಯ ಶಿಕ್ಷಣವನ್ನು ನೀಡಲಾಗುತ್ತದೆ. ಗುಂಪು ಸಭೆಗಳು, ತಾಯಂದಿರ ಸಭೆಗಳು ನಡೆಸಿ ಕರಪತ್ರಗಳನ್ನು ವಿತರಿಸಿ ಡೆಂಘೀ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಮನೆಮನೆಗಳಲ್ಲಿ ನೀರಿನ ಸಂಗ್ರಹ ಪರಿಕರಗಳ ಸ್ವಚ್ಛತೆ, ಒಣ ದಿನ ಆಚರಣೆ, ಮುಂಜಾನೆ ಮತ್ತು ಮುಸ್ಸಂಜೆಯಲ್ಲಿ ಸೊಳ್ಳೆ ಬತ್ತಿ ಉರಿಸುವ ಬಗ್ಗೆ, ಮನೆಯ ಕಿಟಕಿಗಳಿಗೆ ಜಾಲರ ಅಳವಡಿಕೆ, ಸೊಳ್ಳೆ ಪರದೆ ಉಪಯೋಗಿಸುವ ಬಗ್ಗೆ, ಘನ ತ್ಯಾಜ್ಯ ವಸ್ತುಗಳ ಸರಿಯಾದ ಕ್ರಮದಲ್ಲಿ ವಿಲೇವಾರಿ ಮಾಡುವ ಬಗ್ಗೆ ಮಾಹಿತಿ ಶಿಕ್ಷಣ ನೀಡಲಾಗುತ್ತಿದೆ ಎಂದರು.

ಜಾಥಾ ಕಾರ್ಯಕ್ರಮವು ಜಿಲ್ಲಾ ಆಸ್ಪತ್ರೆಯಿಂದ ಪ್ರಾರಂಭವಾಗಿ ಜೋಗಿಮಟ್ಟಿ ರಸ್ತೆ, ಕರುವಿನಕಟ್ಟೆ ಸರ್ಕಲ್‍ನಲ್ಲಿ ಮಾನವ ಸರಪಳಿ ನಿರ್ಮಿಸಿ, ರಂಗಯ್ಯನ ಬಾಗಿಲು ಮೂಲಕ ಪುನಃ ಜಿಲ್ಲಾ ಆಸ್ಪತ್ರೆ ತಲುಪಿತು. ನರ್ಸಿಂಗ್ ವಿದ್ಯಾರ್ಥಿಗಳು ಜಾಥಾದಲ್ಲಿ ಡೆಂಘೀ ನಿಯಂತ್ರಣ ನಮ್ಮೆಲ್ಲರ ಜವಾಬ್ದಾರಿ ಎಂಬ ಘೋಷಣೆ ಕೂಗಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ರವೀಂದ್ರ, ನಿವಾಸಿ ವೈದ್ಯಾಧಿಕಾರಿ ಡಾ.ಆನಂದ ಪ್ರಕಾಶ್, ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಾದ ಡಾ.ಸಿ.ಒ.ಸುಧಾ, ಡಾ.ರೇಖಾ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ರಾಜ್ಯಮಟ್ಟದಿಂದ ಆಗಮಿಸಿದ ಆರೋಗ್ಯ ಶಿಕ್ಷಣಾಧಿಕಾರಿ ಶಿವರಾಜ್, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ಸುರೇಶ್ ಬಾಬು, ಮಲೇರಿಯಾ ವಿಭಾಗದ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಪಾಂಡು, ಮಲ್ಲಿಕಾರ್ಜುನ್, ನಾಗರಾಜ್, ಮಳಲಿ ಶ್ರೀನಿವಾಸ್, ತುರುವನೂರು ಶ್ರೀನಿವಾಸ್, ಗುರುಮೂರ್ತಿ, ನಂದೀಶ್, ಗಂಗಾಧರ್, ರುದ್ರಮುನಿ, ಆಶಾ ಕಾರ್ಯಕರ್ತೆಯರು, ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!