ಹೊಸಕೋಟೆ: ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಹಾಗೂ ಆರೋಗ್ಯ ಸೇವೆ ಪಡೆಯುವುದು ದುಬಾರಿಯಾಗಿದೆ, ಇವರೆಡು ಹೊರೆಯಾಗದಂತೆ ಕಡ್ಡಾಯವಾಗಿ ಸಿಗಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು.
ಸರ್ಕಾರಿ ಶಾಲೆಯಲ್ಲಿರುವ ಶಿಕ್ಷಕರು ಕೆನೆಯ ಪದರದಂತೆ ಎಂದು ನಾನು ಭಾವಿಸಿದ್ದೇನೆ. ಅದರಂತೆ ನೀವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಖಾಸಗಿ ಶಾಲೆಯಷ್ಟೇ ಗುಣಮಟ್ಟದ ಶಿಕ್ಷಣವನ್ನು ಕಲಿಸುವುದರ ಮೂಲಕ ಪೋಷಕರ ಮನಸ್ಸನ್ನು ಗೆದ್ದರೆ ದಾಖಲಾತಿ ಪ್ರಮಾಣ ತನ್ನಿಂತಾನೆ ಹೆಚ್ಚಳವಾಗುತ್ತದೆ. ಆದ್ದರಿಂದ ಪ್ರತಿ ವರ್ಷ ಉತ್ತಮ ಫಲಿತಾಂಶ ಕೊಡುವ ಮೂಲಕ ಸರ್ಕಾರಿ ಶಾಲೆಗಳ ಮೇಲಿನ ವಿಶ್ವಾಸವನ್ನು ಪೋಷಕರಿಗೆ ಹೆಚ್ಚಿಸಬೇಕು ಎಂದು ಸಲಹೆ ಮಾಡಿದರು.
ಮೇ ದಕ್ಷಿಣ್ ಫೌಂಡ್ರಿ ಪ್ರೈವೇಟ್ ಲಿಮಿಟೆಡ್ ಕಂಪನಿ ಸಿಎಸ್‌ಆರ್ ಅನುದಾನದಲ್ಲಿ ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಹಲವಾರು ರೀತಿಯಲ್ಲಿ ಕಳೆದ 10 ವರ್ಷಗಳಿಂದ ಶ್ರಮಿಸುತ್ತಿದೆ. 25 ಲಕ್ಷ ವೆಚ್ಚದಲ್ಲಿ ಶಾಲಾ ಕೊಠಡಿ ನಿರ್ಮಾಣ, ಅಂಗನವಾಡಿ, ಆರೋಗ್ಯ ಕೇಂದ್ರ, ರಂಗಮಂದಿರ ಹೀಗೆ ಹಲವಾರು ಅಭಿವೃದ್ಧಿ ಕಾಮಗಾರಿಯನ್ನು ದಕ್ಷಿಣ್ ಫೌಂಡ್ರಿ ಕಂಪನಿ ನೀಡಿರುವುದು ಪ್ರಶಂಸನೀಯ ಎಂದು ಹೇಳಿದರು.ಹೊಸಕೋಟೆ ತಾಲೂಕಿನಲ್ಲಿ ಶಿಕ್ಷಣ ಫೌಂಡೇಷನ್ 97 ಶಾಲೆಗಳನ್ನು ಗುರುತಿಸಿ ವಿಶೇಷ ಕಲಿಕಾ ಸಾಮಗ್ರಿ ಜೊತೆಗೆ ವಿವಿಧ ಹೊಸ ಯೋಜನೆಗಳನ್ನು ಹಮ್ಮಿಕೊಂಡಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿ ಫಲಿತಾಂಶದಲ್ಲಿ ಖಾಸಗಿ ಶಾಲೆಗಳಿಗಿಂತ ಉತ್ತಮ ಫಲಿತಾಂಶ ಪಡೆಯಲಿದೆ ಎಂದು ಶಾಸಕ ಶರತ್ ಬಚ್ಚೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್ ಮಾತನಾಡಿ, ತಾಲೂಕಿನ ಸಾಕಷ್ಟು ಶಾಲೆಗಳಲ್ಲಿ ಹೊರರಾಜ್ಯದ ಮಕ್ಕಳೇ ವ್ಯಾಸಂಗ ಮಾಡುತ್ತಿದ್ದು, ನಮ್ಮ ಗ್ರಾಮಗಳ ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಸಿಎಸ್‌ಆರ್ ಅನುದಾನದಲ್ಲಿ ಜಿಕೆಬಿಎಂಎಸ್ ಶಾಲೆಯಲ್ಲಿ 1 ಕೋಟಿ ವೆಚ್ಚದಲ್ಲಿ 10 ಕೊಠಡಿ ಸೇರಿದಂತೆ ಬೀರಹಳ್ಳಿ, ನಂದಗುಡಿ, ಮಲ್ಲಿಮಾನಪುರ, ಪಿಲ್ಲಗುಂಪೆ ಗ್ರಾಮಗಳಲ್ಲಿ ಶಾಲೆಗಳನ್ನು ಸಿಎಸ್‌ಆರ್ ನಿಧಿಯಡಿ ಅಭಿವೃದ್ಧಿ ಮಾಡಲಾಗುತ್ತಿದೆ ಎಂದು ತಿಳಿಸಿದರು.