ಮುಂಡಗೋಡ: ಪ್ರತಿಯೊಬ್ಬರು ತಮ್ಮ ಆಸ್ತಿಯ ಅಧಿಕೃತ ದಾಖಲೆ ಪಡೆದುಕೊಂಡು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ತಮ್ಮದೇ ಸ್ವಂತ ಆಸ್ತಿ ಇದ್ದರೂ ಅಧಿಕೃತ ದಾಖಲೆ ಇಲ್ಲದ ಕಾರಣ ಸಾಲ ಸವಲತ್ತು ಪಡೆಯಲಾಗದೇ ಸಾಕಷ್ಟು ತೊಂದರೆ ಅನುಭವಿಸಿದ ಜನರ ಸಮಸ್ಯೆಗೆ ಪರಿಹಾರ ಒದಗಿಸುವ ದೃಷ್ಟಿಯಿಂದ ಸರ್ಕಾರ ಇ- ಖಾತಾ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಜನರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದರು.
ಬಹಳ ಕಾಲದಿಂದ ಕಾಯುತ್ತಿದ್ದ ಫಲಾನುಭವಿಗಳಿಗೆ ಒಳ್ಳೆಯ ಕಾಲ ಬಂದಿದೆ. ಇನ್ನು ಮುಂದೆ ತಮ್ಮ ಆಸ್ತಿ ದಾಖಲೆ ಸರಿ ಇಲ್ಲ ಎಂದು ಯಾರು ಕೂಡ ಕೊರಗುವ ಅವಶ್ಯಕತೆ ಇಲ್ಲ. ಮನೆ ಕಟ್ಟಬಹುದು, ಸಾಲ ಪಡೆಯಬಹುದು. ಮಾರಾಟ ಮಾಡಬಹುದು. ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದರು.ಕಣ್ಣಿನ ತೊಂದರೆ ಇರುವವರಿಗೆ ಉಚಿತವಾಗಿ ಕನ್ನಡಕ ನೀಡುವ ಸರ್ಕಾರದ ಯೋಜನೆ ಶ್ಲಾಘನೀಯವಾಗಿದೆ. ಅಗ್ಗದ ದರದಲ್ಲಿ ಔಷದ ಪೂರೈಸುವ ಜನೌಷಧ ಕೇಂದ್ರವನ್ನು ತೆರೆಯಲಾಗಿದೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಮುಂಡಗೋಡ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶಾಸಕ ಶಿವರಾಮ ಹೆಬ್ಬಾರ ಅರ್ಹ ಫಲಾನುಭವಿಗಳಿಗೆ ಬಿ, ಇ-ಖಾತಾ ಪಟ್ಟಾ ವಿತರಿಸಿದರು.