ಎಲ್ಲರಲ್ಲೂ ಕ್ರೀಡಾ ಮನೋಭಾವ ಇರಬೇಕು: ಶಾಸಕ ಎಸ್.ಎನ್.ಚನ್ನಬಸಪ್ಪ

KannadaprabhaNewsNetwork |  
Published : Aug 30, 2025, 01:00 AM IST
ಪೋಟೋ: 29ಎಸ್‌ಎಂಜಿಕೆಪಿ05ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಮೇಜರ್ ಧ್ಯಾನ್‌ಚಂದ್‌ರವರ ಜನ್ಮ ದಿನಾಚರಣೆಯ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ಎಸ್‌.ಎನ್‌.ಚನ್ನಬಸಪ್ಪ ಮಾತನಾಡಿದರು.   | Kannada Prabha

ಸಾರಾಂಶ

ಜೀವನದಲ್ಲಿ ಪ್ರತಿಯೊಬ್ಬರೂ ಕ್ರೀಡಾ ಮನೋಭಾವವನ್ನು ಬೆಳಿಸಿಕೊಳ್ಳಬೇಕು. ಕ್ರೀಡೆಗೆ ಹೆಚ್ಚಿನ ಮಾನ್ಯತೆಯನ್ನು ನೀಡುವ ಮೂಲಕ ಈ ದೇಶವನ್ನು ಸದೃಢವಾಗಿ ಕಟ್ಟುವಂತಹ ಕೆಲಸ ಮಾಡಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜೀವನದಲ್ಲಿ ಪ್ರತಿಯೊಬ್ಬರೂ ಕ್ರೀಡಾ ಮನೋಭಾವವನ್ನು ಬೆಳಿಸಿಕೊಳ್ಳಬೇಕು. ಕ್ರೀಡೆಗೆ ಹೆಚ್ಚಿನ ಮಾನ್ಯತೆಯನ್ನು ನೀಡುವ ಮೂಲಕ ಈ ದೇಶವನ್ನು ಸದೃಢವಾಗಿ ಕಟ್ಟುವಂತಹ ಕೆಲಸ ಮಾಡಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ನಗರದ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಮೇಜರ್ ಧ್ಯಾನ್‌ಚಂದ್‌ರವರ ಜನ್ಮ ದಿನಾಚರಣೆಯ ಪ್ರಯುಕ್ತ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಧ್ಯಾನ್‌ಚಂದ್‌ರವರು ಕ್ರೀಡೆಗೆ ದೊಡ್ಡ ಶಕ್ತಿ ತುಂಬಿದ್ದು, ಇಂದಿನ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದ್ದಾರೆ. ಹಾಕಿ ಎಂದರೆ ಸಾಕು ತಕ್ಷಣ ಧ್ಯಾನ್‌ಚಂದ್ ನೆನಪಾಗುತ್ತಾರೆ. ಧ್ಯಾನ್‌ಚಂದ್ ಅವರಿಗೆ ಬೇರೆ ಬೇರೆ ದೇಶಗಳಲ್ಲಿ ಅನೇಕ ಅವಕಾಶಗಳಿದ್ದರು ಕೂಡ ನಾನು ಭಾರತ ದೇಶಕ್ಕಾಗಿ ಆಡುತ್ತೇನೆ ತಂಡಕ್ಕಾಗಿ ಅಲ್ಲ ಎಂಬ ಧ್ಯೇಯದೊಂದಿಗೆ ತಮ್ಮ ಇಡೀ ಕ್ರೀಡಾ ಜೀವನವನ್ನು ಕಳೆದರು ಎಂದು ಸ್ಮರಿಸಿದರು.

ಕ್ರೀಡೆ ಬರೀ ವೈಯಕ್ತಿಕ ಆಟ ಮಾತ್ರವಲ್ಲ. ತಂಡವನ್ನು ಮುನ್ನಡೆಸಿಕೊಂಡು ಆಡುವ ಆಟವೂ ಆಗಿದ್ದು, ತಂಡವನ್ನು ಗೆಲ್ಲಿಸುವ ಇಚ್ಛಾಶಕ್ತಿಯನ್ನು ಕ್ರೀಡಾಪಟುಗಳು ಹೊಂದಿರಬೇಕು. ಆದ್ದರಿಂದ ಕ್ರೀಡಾಪಟುಗಳು ಟೀಂ ಸ್ಪಿರಿಟ್ ಇಟ್ಟುಕೊಂಡು ಕೆಲಸ ಮಾಡಬೇಕು. ಒಗ್ಗಟ್ಟಾಗಿ ಒಂದು ಬಲವಾದ ಉದ್ದೇಶಕ್ಕಾಗಿ ಆಡಿದರೆ ಮಾತ್ರ ಗೆಲುವು ಸಾಧ್ಯ ಎಂದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಧ್ಯಾನ್‌ಚಂದ್ ಅವರ ಮೂಲ ಹೆಸರು ಧ್ಯಾನ್ ಸಿಂಗ್. ಹುಣ್ಣಿಮೆಯ ದಿನಗಳಂದು ಚಂದ್ರನ ಬೆಳಕಲ್ಲಿ ಹಾಕಿ ಅಭ್ಯಾಸ ಮಾಡುತ್ತಿದ್ದರು. ಆ ಕಾರಣಕ್ಕಾಗಿ ಅವರ ಕೋಚ್ ಅವರಿಗೆ ಧ್ಯಾನ್‌ಚಂದ್ ಎಂಬ ಹೆಸರು ಇಟ್ಟರು ಎಂದು ತಿಳಿಸಿದರು.

ಧ್ಯಾನ್‌ಚಂದ್‌ರು ಬಾಲ್ಯದಿಂದಲೂ ಹಾಕಿ ಕ್ರೀಡೆಯ ಬಗ್ಗೆ ಅತಿ ಆಸಕ್ತಿ ಹೊಂದಿದ್ದು, ಮರದ ಕೊಂಬೆಯನ್ನು ಮುರಿದು ಅದನ್ನೇ ಹಾಕಿ ಸ್ಟಿಕ್ ಮಾಡಿಕೊಂಡು ಆಟ ಆಡುತ್ತಿದ್ದರು. 16ನೇ ವಯಸ್ಸಿನಲ್ಲಿ ಅವರು ಮಿಲಿಟರಿಗೆ ಸೇರಿಕೊಂಡಾಗಲೂ ಕೂಡ ಹಾಕಿ ಆಡುವುದನ್ನು ನಿಲ್ಲಿಸಲಿಲ್ಲ ಎಂದರು.

ಒಲಪಿಂಕ್‌ಗೆ ಹೊಗುವ ಸಂದರ್ಭದಲ್ಲಿ ಧ್ಯಾನ್‌ಚಂದ್ ಅವರ ಬಳಿ ಹಣ ಇರಲಿಲ್ಲ. ಆಗ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಾಲ ಕೊಡುತ್ತದೆ ಹಾಗೂ ಬೆಂಗಾಳ್ ಅಸೊಸಿಯೇಷನ್ ಸಹ ಸಹಕಾರ ನೀಡುತ್ತದೆ. ಕಷ್ಟಗಳ ನಡುವೆಯೂ ಛಲ ಬಿಡದೆ ಧ್ಯಾನ್‌ಚಂದ್ ದೇಶಕ್ಕೆ ಕೀರ್ತಿ ತರಲು ಆಡುತ್ತಾರೆ. ಒಟ್ಟು 180 ಅಂತಾರಾಷ್ಟ್ರೀಯ ಪಂದ್ಯಾವಳಿಗಳನ್ನು ಆಡಿದ ಅವರು, 456 ಗೋಲ್ ಹೊಡೆದಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ನಾವು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಸದೃಢರಾಗಿರಬೇಕು. ಇತ್ತೀಚೆಗೆ ರಾಜ್ಯದಲ್ಲಿ ಹೃದಯಾಘಾತಗಳ ಸಂಖ್ಯೆ ಹೆಚ್ಚುತ್ತಿದೆ. ದೈಹಿಕವಾಗಿ ಸದೃಢವಾಗಿಲ್ಲದಿರುವುದು ಇದಕ್ಕೆ ಕಾರಣವಾಗಿದೆ. ಪ್ರತಿ ದಿನ 3,333 ಹೆಜ್ಜೆಗಳನ್ನಿಡುವುದರಿಂದ ಹೃದಯವನ್ನು ಆರೋಗ್ಯವಾಗಿ ಇಟ್ಟುಕೊಳ್ಳಬಹುದು ಎಂದು ಸಲಹೆ ನೀಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯ ನಿರ್ದೇಶಕ ರೇಖ್ಯಾನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.

ನೆಹರು ಯುವ ಕೇಂದ್ರದ ಸ್ನೇಹಲತಾ, ಇಲಾಖೆಯ ಸಿಬ್ಬಂದಿ ವರ್ಗದವರು, ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ