ಬ್ಯಾಡಗಿ: ಜ್ಯೋತಿಯು ತಾನುರಿದು ಪರರಿಗೆ ಬೆಳಕು ನೀಡುವಂತೆ ಪ್ರತಿಯೊಬ್ಬರು ಸಾಮಾಜಿಕ ಸೇವೆಯ ಮೂಲಕ ಪರೋಪಕಾರಿ ಗುಣ ಬೆಳೆಸಿಕೊಂಡು ಬದುಕಿನಲ್ಲಿ ಸ್ವಾಮರಸ್ಯ ಜೀವನ ನಡೆಸಬೇಕಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಪಟ್ಟಣದ ಕದರಮಂಡಲಗಿ ರಸ್ತೆಯ ಶಿರಡಿ ಸಾಯಿಬಾಬಾ ಮಂದಿರದ ೮ನೇ ವರ್ಷದ ಕಾರ್ತಿಕೋತ್ಸವ ಅಂಗವಾಗಿ ಜರುಗಿದ ಇಷ್ಟಲಿಂಗ ಪೂಜಾ, ಶಿವದೀಕ್ಷೆ ಹಾಗೂ ಧರ್ಮಸಭೆ ಉದ್ದೇಶಿಸಿ ಗುರುವಾರ ಮಾತನಾಡಿದರು. ಎಲ್ಲರ ಜೀವನದಲ್ಲಿ ಕಷ್ಟಗಳು ಬರುವುದು ಸಹಜ, ಮನುಷ್ಯ ಹೇಗೆ ಬದುಕಬೇಕೆಂಬುದನ್ನು ಕಲಿಸುತ್ತದೆ. ನಷ್ಟ ಯಾರನ್ನು ನಂಬಬೇಕೆಂಬುದನ್ನು ಕಲಿಸುತ್ತದೆ. ಕಷ್ಟಗಳು ಎದುರಾಗದಿದ್ದರೆ ಜೀವನದ ಮೌಲ್ಯ ಏನೆಂದು ತಿಳಿಯದು. ನಂಬಿಕೆ ಸ್ನೇಹ ವಾತ್ಸಲ್ಯ ವಿಶ್ವಾಸ ಇವು ಮಾನವ ಜೀವನದ ಅತಿ ದೊಡ್ಡ ಆಸ್ತಿ. ಇವುಗಳನ್ನು ಯಾವಾಗಲೂ ಕಳೆದುಕೊಳ್ಳಬಾರದು. ಯಾವಾಗ ಏನಾಗುವುದೋ ಯಾರಿಗೂ ಗೊತ್ತಿಲ್ಲ. ಏನನ್ನೂ ನಾವು ತೆಗೆದುಕೊಂಡು ಹೋಗುವುದಿಲ್ಲ. ಬದುಕಿರುವಷ್ಟು ದಿನ ಒಳ್ಳೆಯವರ ಸ್ನೇಹ ಸಂಬಂಧವನ್ನು ಉಳಿಸಿಕೊಳ್ಳಬೇಕು. ಗಳಿಸಿದ ಸಂಪತ್ತು, ಪಡೆದ ಅಧಿಕಾರ, ಏರಿದ ಅಂತಸ್ತು, ಸಂತಸ ಸಂಭ್ರಮ ಎಲ್ಲವೂ ಸ್ಥಿರವಲ್ಲ. ಮಾಡಿದ ಸತ್ಕಾರ್ಯ ಗಳಿಸಿಕೊಂಡ ಅನುಭವ ಶಾಶ್ವತ. ದೇವರು ಮತ್ತು ಧರ್ಮದಲ್ಲಿ ನಂಬಿಕೆಯನ್ನಿಟ್ಟು ಬಾಳಬೇಕು. ಆಧುನಿಕ ಒತ್ತಡಗಳ ಬದುಕಿನಲ್ಲಿ ನಾವು ಧರ್ಮಾಚರಣೆ, ಸಂಸ್ಕೃತಿಯಿಂದ ದೂರ ಸರಿಯಬಾರದು. ಪರಂಪರೆ, ಸಂಸ್ಕೃತಿ, ಧರ್ಮ ಇವುಗಳು ಉಳಿದಾಗ ಮಾತ್ರ ಮಾನವ ಜೀವನ ಉನ್ನತಿ ಸಾಧ್ಯ. ಅಶಾಂತಿಯಿಂದ ತತ್ತರಿಸುತ್ತಿರುವ ಜೀವ ಜಗತ್ತಿಗೆ ಧರ್ಮವೊಂದೇ ಆಶಾಕಿರಣ. ಧರ್ಮದ ಆದರ್ಶ ಮೌಲ್ಯಗಳನ್ನು ಬೆಳೆಸುವ ಉಳಿಸಿಕೊಂಡು ಬರುವ ಭಾವನೆ ಎಲ್ಲರಲ್ಲಿ ಬೆಳೆದು ಬರಬೇಕಾಗಿದೆ ಸಾಯಿ ಮಂದಿರದಲ್ಲಿ ಧರ್ಮ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಾಕಿಕೊಂಡು ಸುತ್ತಲಿನ ಭಕ್ತರನ್ನು ಧರ್ಮ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ ಎಂದರು.
ಡಾ. ಗುರುಪಾದಯ್ಯ ಸಾಲಿಮಠ ಹಾಗೂ ಸಾಯಿಮಂದಿರ ಧರ್ಮದರ್ಶಿ ಮಂಜಯ್ಯಶಾಸ್ತ್ರೀಗಳು ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.