ಮಾತೃಭಾಷೆ ಕನ್ನಡವನ್ನು ಎಲ್ಲರೂ ಪ್ರೀತಿಸಿ: ಶಾಸಕ ಶಿವರಾಮ ಹೆಬ್ಬಾರ

KannadaprabhaNewsNetwork |  
Published : Jun 23, 2024, 02:02 AM IST
ಫೋಟೋ ಜೂ.೨೨ ವೈ.ಎಲ್.ಪಿ. ೦೨ | Kannada Prabha

ಸಾರಾಂಶ

, ನಮ್ಮ ಮಾತೃಭಾಷೆಯ ಕುರಿತು ಕನ್ನಡಿಗರಾದ ನಮಗೇ ಪ್ರೀತಿ ಇರದಿದ್ದರೆ, ಮತ್ತಾರು ಕನ್ನಡವನ್ನು ಪ್ರೀತಿಸಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಪಾಲಕರು ತಮ್ಮ ಮಕ್ಕಳು ಇಂಗ್ಲೀಷಿನಲ್ಲಿಯೇ ಮಾತನಾಡಬೇಕೆಂದು ಬಯಸುತ್ತಾರೆ. ಆದರೆ, ಬದುಕಿಗೆ ಮತ್ತು ವ್ಯವಹಾರಕ್ಕೆ ಇಂಗ್ಲೀಷ್ ಭಾಷೆ ಅಗತ್ಯವಾಗಿದ್ದರೂ, ನಮ್ಮ ಮಾತೃಭಾಷೆಯ ಕುರಿತು ಕನ್ನಡಿಗರಾದ ನಮಗೇ ಪ್ರೀತಿ ಇರದಿದ್ದರೆ, ಮತ್ತಾರು ಕನ್ನಡವನ್ನು ಪ್ರೀತಿಸಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಯಲ್ಲಾಪುರ ಕ.ಸಾ.ಪ. ಘಟಕಗಳ ಸಹಯೋಗದಲ್ಲಿ ಪಟ್ಟಣದ ಟಿ.ಎಂ.ಎಸ್. ಸಭಾಭವನದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. ೧೦೦ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.

ಅನ್ಯರಾಜ್ಯಗಳಲ್ಲಿ ಕಂಡುಬರುವ ಅವರ ಭಾಷೆಯ ಕುರಿತಾದ ಅಭಿಮಾನ ಮತ್ತು ವ್ಯಾಮೋಹ ನಮ್ಮ ರಾಜ್ಯದಲ್ಲಿ ಕಾಣದು. ಕನ್ನಡಕ್ಕೆ ದೊರಕಿದಷ್ಟು ಜ್ಞಾನಪೀಠ ಪ್ರಶಸ್ತಿ ಬೇರೆ ಭಾಷೆಗೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಕನ್ನಡವೆಂದರೆ ವಿಶ್ವವೇ ಗುರುತಿಸಿದ ಭವಿಷ್ಯದ ಭಾಷೆ ಎಂಬುದನ್ನು ನಾವು ಮರೆಯಬಾರದು. ನಮ್ಮ ಪಾಲಕರು ತಮ್ಮ ಮಕ್ಕಳನ್ನು ಇಂಗ್ಲೀಷ್ ಶಾಲೆಗೆ ಕಳಿಸಲು ಉತ್ಸುಕರಾಗಿರುವುದು ಮಕ್ಕಳ ಪ್ರತಿಭೆಯ ವಿಕಾಸಕ್ಕೆ ಮಾರಕವೂ ಹೌದು. ಅನೇಕ ವಿದ್ಯಾರ್ಥಿಗಳು ೯೯ ಅಂಕ ಪಡೆದು, ಪದವಿ ಮುಗಿಸಿ ಉದ್ಯೋಗದ ಸಂದರ್ಶನಕ್ಕೆ ಬಂದಾಗ ಕೇಳುವ ಯಾವ ಪ್ರಶ್ನೆಗೂ ಉತ್ತರಿಸಲಾಗದೇ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನದ ಅರಿವನ್ನೂ ಮೂಡಿಸದಿರುವ ಪಾಲಕರು ತಮ್ಮ ಮಕ್ಕಳಿಗೆ ದೇಶದ ಸ್ಥಿತಿಗತಿಗಳ ಎಲ್ಲ ಸಂಗತಿಗಳ ಬಗೆಗೆ ಮನವರಿಕೆ ಮಾಡಿಕೊಡಬೇಕು. ಅಂಕಕ್ಕಿಂತಲೂ ಸಾಮಾನ್ಯ ಜ್ಞಾನವೇ ಬದುಕಿಗೆ ಶ್ರೀರಕ್ಷೆಯಾಗುತ್ತದೆ ಎಂದರು.

ಪ್ರತಿಭಾ ಪುರಸ್ಕಾರ ನೆರವೇರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಮಾತನಾಡಿ, ತಾಲೂಕಿನಲ್ಲಿ ಕಳೆದೆರಡು ವರ್ಷಗಳಿಂದ ಕನ್ನಡ ಭಾಷಾ ವಿಷಯದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆದ ದಾಖಲೆ ಫಲಿತಾಂಶ ಸಮಾಧಾನಕರವಾಗಿದೆ. ಕನ್ನಡ ಕಲಿತವರು ಉಳಿದೆಲ್ಲ ಭಾಷೆಗಳಲ್ಲಿಯೂ ಪರಿಣಿತರಾಗಬಹುದೆಂಬ ಕಲ್ಪನೆಯಿದ್ದು, ಮಾತೃಭಾಷೆಯಲ್ಲಿ ಹಿರಿಮೆಯನ್ನು ಸಾಧಿಸಬಹುದು. ಸಂಪರ್ಕ ಮತ್ತು ಸಂವಹನಕ್ಕಾಗಿ ಇಂಗ್ಲೀಷ್ ಅಥವಾ ಹಿಂದಿ ಭಾಷೆಗಳನ್ನು ಕಲಿಯುವುದು ಸ್ವೀಕೃತವಾದರೂ ಕನ್ನಡದ ಕುರಿತು ಅಸಡ್ಡೆ ತೋರುವ ಅಥವಾ ಕೀಳರಿಮೆ ಬೆಳೆಸಿಕೊಳ್ಳುವ ಮನೋಭಾವ ಒಳ್ಳೆಯದಲ್ಲ. ಭಾಷೆ ಉಳಿಯಲು ಬದುಕು ಮುಖ್ಯವಾಗಿದ್ದು, ಪ್ರತಿಯೊಬ್ಬರಿಗೂ ಮಾತೃಭಾಷೆಯ ಕುರಿತು ವ್ಯಾಮೋಹವಿರಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಯಾವುದೇ ಭಾಷೆಯ ಕುರಿತಾಗಿ ಅವಹೇಳನ ಒಳ್ಳೆಯದಲ್ಲ. ಆದರೆ, ಮಾತೃಭಾಷೆ ಕನ್ನಡದ ಕುರಿತಾಗಿ ಅಭಿಮಾನ ಹೊಂದಿರಬೇಕು. ಇತ್ತೀಚೆಗೆ ಇಂಗ್ಲೀಷ್ ಮಾತನಾಡುವುದನ್ನು ಶೋಕಿ ಎಂದುಕೊಳ್ಳಲಾಗಿದೆ. ಕನ್ನಡದ ಅಸ್ಮಿತೆಗಾಗಿ ೧೦೫ ವರ್ಷಗಳ ಹಿಂದೆ ಸ್ಥಾಪನೆಗೊಂಡ ಕಸಾಪ ಅನೂಚಾನವಾಗಿ ಕನ್ನಡದ ಬಗೆಗೆ ಅತ್ಯಂತ ಪ್ರಾಮಾಣಿಕ ಕಾರ್ಯಗಳನ್ನು ಮಾಡುತ್ತಿದೆ. ಸ್ಥಳೀಯ ಸಂಪನ್ಮೂಲ ಕ್ರೋಢೀಕರಿಸಿ, ಇಂದಿನ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಜಿಲ್ಲಾ ಖಜಾಂಚಿ ಮುರ್ತುಜಾ ಹುಸೇನ್ ಸಾಂದರ್ಭಿಕ ಮಾತನಾಡಿದರು. ಪ್ರೌಢಶಾಲಾ ಸ.ಶಿ. ಸಂಘದ ಅಧ್ಯಕ್ಷ ಅಜಯ ನಾಯಕ, ನಾಟಕಕಾರ ಟಿ.ವಿ. ಕೋಮಾರ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಜಿ.ಎನ್. ಭಟ್ಟ ಸ್ವಾಗತಿಸಿದರು. ಘಟಕಾಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಕೇಬಲ್ ನಾಗೇಶ ನಿರ್ವಹಿಸಿದರು. ಗೌ.ಕಾರ್ಯದರ್ಶಿ ಸಂಜೀವಕುಮಾರ ಹೊಸ್ಕೇರಿ ವಂದಿಸಿದರು.ಕಾರ್ಯಕ್ರಮದಲ್ಲಿ ೨೦೨೩-೨೪ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇ. ೧೦೦ ಅಂಕ ಗಳಿಸಿದ ೩೪ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ