ಪ್ರತಿಯೊಬ್ಬರೂ ವಿದ್ಯೆಯನ್ನು ಹಿಂಬಾಲಿಸಿ, ಸಂಪತ್ತನ್ನಲ್ಲ: ಜಿ.ಕೆ.ಸತೀಶ್

KannadaprabhaNewsNetwork |  
Published : Sep 08, 2025, 01:00 AM IST
ಪೋಟೋ: 06ಎಚ್‌ಒಎಸ್‌01ಹೊಸನಗರದ ಈಡಿಗ ಸಭಾ ಭವನದಲ್ಲಿ ಮಾಜಿ ರಾಷ್ಟ್ರಪತಿ ಭಾರತರತ್ನ ಡಾ. ಎಸ್. ರಾಧಾಕೃಷ್ಣನ್ ಅವರ 137ನೇ ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಾಲಾ ಮುಖ್ಯಸ್ಥರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಯುಗಯುಗಗಳಿಗೆ ಅನುಗುಣವಾಗಿ ಶಿಕ್ಷಣ ಕ್ಷೇತ್ರದಲ್ಲಿನ ಬೋಧನಾ ಪದ್ದತಿಯ ಶೈಲಿ ಬದಲಾಗುತ್ತಿದೆ. ಶಿಕ್ಷಣಾರ್ಥಿ ತನ್ನ ಸಾಧನೆಗೆ ಗುರುವಿನ ಜೊತೆಗೆ ಸ್ಪಷ್ಟ ಗುರಿ ಹೊಂದುವುದು ಅಗತ್ಯವಾಗಿದೆ ಎಂದು ಶಿವಮೊಗ್ಗ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಜಿ.ಕೆ.ಸತೀಶ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹೊಸನಗರ

ಯುಗಯುಗಗಳಿಗೆ ಅನುಗುಣವಾಗಿ ಶಿಕ್ಷಣ ಕ್ಷೇತ್ರದಲ್ಲಿನ ಬೋಧನಾ ಪದ್ದತಿಯ ಶೈಲಿ ಬದಲಾಗುತ್ತಿದೆ. ಶಿಕ್ಷಣಾರ್ಥಿ ತನ್ನ ಸಾಧನೆಗೆ ಗುರುವಿನ ಜೊತೆಗೆ ಸ್ಪಷ್ಟ ಗುರಿ ಹೊಂದುವುದು ಅಗತ್ಯವಾಗಿದೆ ಎಂದು ಶಿವಮೊಗ್ಗ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಜಿ.ಕೆ.ಸತೀಶ್ ತಿಳಿಸಿದರು.

ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಸಮಗ್ರ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಈಡಿಗ ಸಭಾ ಭವನದಲ್ಲಿ ಮಾಜಿ ರಾಷ್ಟ್ರಪತಿ ಭಾರತರತ್ನ ಡಾ. ಎಸ್. ರಾಧಾಕೃಷ್ಣನ್ ಅವರ 137ನೇ ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಅನ್ನದಾನಕ್ಕೂ ಮಿಗಿಲಾದ ದಾನವೆಂದರೆ ಅದು ವಿದ್ಯಾದಾನ ಮಾತ್ರವೇ. ಗುರು ಜ್ಞಾನದ ಸಂಕೇತ. ಇಡೀ ಸಮಾಜವು ವಿದ್ಯೆಯನ್ನು ಹಿಂಬಾಲಿಸಬೇಕೇ ಹೊರತು ಸಂಪತ್ತನಲ್ಲ. ಸಮಾಜದಲ್ಲಿ ಗುರುವಿಗೆ ವಿಶೇಷ ಸ್ಥಾನವಿದ್ದು, ಅದು ಹೆತ್ತವರ ನಂತರದ ಸ್ಥಾನವಾಗಿದೆ. ಗುರುವಿನ ಶಕ್ತಿ ಸ್ಪರ್ಶಮಣಿಗಿಂತಲೂ ಮೇಲಾಗಿದ್ದು, ಆತನ ಒಂದು ಸಂದೇಶ ಇಡೀ ಸಮಾಜವನ್ನೇ ಬದಲಾಯಿಸಬಹುದು ಎಂದರು.

ಪ್ರತಿಯೊಬ್ಬರ ಮಸ್ತಕದಲ್ಲಿ ಯುಕ್ತಿ ಇದ್ದಲ್ಲಿ ಮಾತ್ರವೇ ಜ್ಞಾನಾರ್ಜನೆ ಸಾಧ್ಯ ಎಂದ ಅವರು, ಶಿಕ್ಷಕರಿಗೆ ನಿರಂತರ ಅಧ್ಯಯನ ಅತಿ ಮುಖ್ಯವಾಗಿದ್ದು, ಅವರ ನಗು ಮಕ್ಕಳನ್ನು ತಮ್ಮತ್ತ ಸೆಳೆಯುವ ಅಸ್ತ್ರವಾಗಲೆಂದು ಆಶಿಸಿದರು.

ಶಿಕ್ಷಣ ಇಲಾಖೆಯಲ್ಲಿ ತುಂಬಿರುವ ಹೂಳು ತೆಗೆಯುವ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕಿದೆ. ಇದಕ್ಕೆ ಅಧ್ಯಯನ, ಸಂಶೋಧನೆಯ ಅಗತ್ಯವಿದೆ. ರಾಜ್ಯದಲ್ಲಿ ಈಗಾಗಲೇ ಸುಮಾರು 700 ಸರ್ಕಾರಿ ಶಾಲೆಗಳ ಬಾಗಿಲು ಮುಚ್ಚಿವೆ. ಸುಮಾರು 3500ಕ್ಕೂ ಹೆಚ್ಚು ಶಾಲೆಗಳು ಏಕೋಪಧ್ಯಾಯ ಶಾಲೆಗಳಾಗಿ ಕಾರ್ಯ ನಿರ್ವಹಿಸುತ್ತಿದೆ. ಇದು ಹೀಗೆಯೇ ಮುಂದುವರಿದಲ್ಲಿ ಇನ್ನಷ್ಟು ಸರ್ಕಾರಿ ಶಾಲೆಗಳು ಖಾಯಂ ಬಂದ್ ಆಗುವ ದಿನಗಳು ದೂರವಿಲ್ಲ. ನೈಜ್ಯ ಶಿಕ್ಷಣ ಹಾಗೂ ಅಗತ್ಯ ಸೌಲಭ್ಯ ನೀಡಿದಲ್ಲಿ ಮಾತ್ರವೇ ಸಂವಿಧಾನದ ಮೂಲ ಆಶಯಕ್ಕೆ ಮಹತ್ವ ನೀಡಿದಂತೆ ಆಗುವುದು ಎಂದರು.

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಬಿ. ಚಿದಂಬರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾಲೂಕಿನಲ್ಲಿ ಭೌಗೋಳಿಕವಾಗಿ ಹಲವಾರು ಗಣನೀಯ ಸವಾಲುಗಳಿದ್ದರೂ ಎಲ್ಲವನ್ನು ಮೆಟ್ಟಿ ಶೈಕ್ಷಣಿಕವಾಗಿ ರಾಜ್ಯಮಟ್ಟದಲ್ಲಿ ಹೆಸರುಗಳಿಸಲು ಸಹಕರಿಸಿದ ಇಡೀ ಶಿಕ್ಷಕ ವೃಂದ ಅಭಿನಂದನರ್ಹ ಎಂದರು.

ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗರಾಜ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಡಯೆಟ್ ಉಪ ನಿರ್ದೇಶಕ (ಅಭಿವೃದ್ದಿ) ಹೆಚ್.ಆರ್. ಕೃಷ್ಣಮೂರ್ತಿ, ತಾ.ಪಂ. ಇಒ ನರೇಂದ್ರ ಕುಮಾರ್, ಪ್ರಭಾರಿ ಬಿಇಒ ಚೇತನ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸೋಮಶೇಖರ, ಪಿ.ಎಂ. ಪೋಷನ್ ಶಕ್ತಿ ನಿರ್ಮಾಣ್ ಯೋಜನೆಯ ಸಹಾಯಕ ನಿರ್ದೇಶಕ ಶೇಷಾಚಲ ನಾಯ್ಕ, ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಂಗಸ್ವಾಮಿ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ರೇಣುಕೇಶ್, ಶಿಕ್ಷಕರ ಸಂಘದ ರಮೇಶ್ ಕುಮಾರ್, ಲಿಲ್ಲಿ ಡಿಸೋಜಾ, ರಾಜುಶೆಟ್ಟಿ, ಕತ್ರಿಕೊಪ್ಪ ಪುಟ್ಟಸ್ವಾಮಿ ಪ್ರಭಾರಿ ತಾಲೂಕು ದೈಹಿಕ ಶಿಕ್ಷಕ ಪರಿವೀಕ್ಷಕ ವಿನಯ್ ಹೆಗ್ಡೆ ಕರ್ಕಿ ಮೊದಲಾದವರು ಇದ್ದರು.

ಇದೇ ವೇಳೆ ನಿವೃತ್ತ ಶಿಕ್ಷಕರಿಗೆ, ತಾಲೂಕು ಉತ್ತಮ ಶಿಕ್ಷಕರಿಗೆ, ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ತಾಲೂಕಿನ 19 ಶಾಲಾ ಮುಖ್ಯಸ್ಥರಿಗೆ ಸನ್ಮಾನ ನಡೆಯಿತು.

ಸಭೆಗೆ ಗೈರಾಗಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಗೋಪಾಲಕೃಷ್ಣ ಬೇಳೂರು, ಆರಗ ಜ್ಞಾನೇಂದ್ರ ಹಾಗೂ ಪರಿಷತ್ತಿನ ಸದಸ್ಯ ಎಸ್.ಎಲ್ ಭೋಜೆಗೌಡ ಅವರ ಸಂದೇಶವನ್ನು ಶಿಕ್ಷಕರು ವಾಚಿಸಿದರು.

ಬಿಇಒ ಚೇತನ ಸ್ವಾಗತಿಸಿ, ಶಿಕ್ಷಕ ಪ್ರವೀಣ್ ಹಾಗೂ ರೇಖಾ ಕುಲಾಲ್ ನಿರೂಪಿಸಿ, ಕಾರ್ಯಕ್ರಮದ ನೋಡಲ್ ಅಧಿಕಾರಿ ಕರಿಬಸಪ್ಪ ವಂದಿಸಿದರು.

PREV

Recommended Stories

ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌