ಕನ್ನಡಪ್ರಭ ವಾರ್ತೆ ತುಮಕೂರು
ಕಿರು ಧಾನ್ಯಗಳ ಬೆಳೆಯುವುದು, ಬಳಕೆ ಮಾಡುವುದು, ಅವುಗಳ ಮಾರುಕಟ್ಟೆ ಕುರಿತಂತೆ ರೈತರಿಗೆ ಮತ್ತು ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ ಎರಡು ದಿನಗಳ ಕಿರುಧಾನ್ಯ ಹಬ್ಬ ಮತ್ತು ವಿಚಾರ ಸಂಕಿರಣ ಏರ್ಪಡಿಸಿದ್ದು, ಸಾವಿರಾರು ಜನರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ರಮೇಶ್ ತಿಳಿಸಿದರು.ಜಿಲ್ಲಾಡಳಿತ, ಜಿಪಂ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ನಗರದ ಸರಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ 2 ದಿನಗಳ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಹಾಗೂ ಸಿರಿಧಾನ್ಯ ಉತ್ಪಾದಕರು ಮತ್ತು ಮಾರುಕಟ್ಟೆದಾರರ ರಾಜ್ಯಮಟ್ಟದ ಕಾರ್ಯಾಗಾರದ ಸಮಾರೋಪ ಭಾಷಣ ಮಾಡಿದರು.
ಅತಿ ಹೆಚ್ಚು ನಾರಿನ ಅಂಶ ಮತ್ತು ಪೋಷಕಾಂಶಗಳನ್ನು ಒಳಗೊಂಡಿರುವ, ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿಯೂ ಬೆಳೆಯಬಹುದಾದ ಕಿರುಧಾನ್ಯಗಳನ್ನು ಬೆಳೆಯಲು ಜನರು ಮುಂದಾಗಬೇಕೆಂದು ಸಲಹೆ ನೀಡಿದರು.ಕಿರುಧಾನ್ಯ ಬೆಳೆ ಬೆಳೆಯಲು ಉತ್ತೇಜಿಸುವ ಸಲುವಾಗಿ ರೈತ ಸಿರಿ ಯೋಜನೆಯಡಿ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರು.ಗಳ ಪ್ರೋತ್ಸಾಹ ಧನವನ್ನು ನೀಡಲಾಗುವುದು. ರೈತರಿಗೆ ಮಾಹಿತಿ ನೀಡುವ ಸಲುವಾಗಿ 52 ಮಳಿಗೆಗಳನ್ನು ತೆರೆದು ವಿವಿಧ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ರೈತರಿಗೋಸ್ಕರ ಆಹಾರ ತಜ್ಞರಾದ ಡಾ.ರಾಧಾ ಕಿರುಧಾನ್ಯಗಳ ಬಳಕೆ ಹಾಗೂ ಅವುಗಳಿಂದ ಆರೋಗ್ಯದ ಮೇಲಾಗುವ ಒಳ್ಳೆಯ ಪರಿಣಾಮಗಳ ಕುರಿತು ವಿವರಣೆ ನೀಡಿದರು.
ಜಿಕೆವಿಕೆಯ ಡಾ.ರಮೇಶ್ ಅವರು, ಕಿರುಧಾನ್ಯ ಬೆಳೆಯಲು ಅಗತ್ಯವಿರುವ ಮಣ್ಣಿನ ಹವಾಗುಣ, ತಾಂತ್ರಿಕ ಅಂಶಗಳ ಕುರಿತು ಮಾತನಾಡಿದರೆ, ಜೀನಿ ಸಂಸ್ಥೆಯ ದಿಲೀಪ್ ಅವರು, ಕಿರುಧಾನ್ಯಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಹಾಗೂ ಮಾರುಕಟ್ಟೆಯ ಕುರಿತು ವಿವರ ನೀಡಿದರು. ಸೊಡೆಕ್ಸ್ ಸಂಸ್ಥೆಯಿಂದ ಕಿರುಧಾನ್ಯಗಳ ಸಂಸ್ಕರಣೆ ಮತ್ತು ದಾಸ್ತಾನು ಕುರಿತು ಮಾಹಿತಿ ನೀಡಲಾಯಿತು.ಪ್ರೊ.ಶಶಿಕಾಂತ ಅವರು, ಕಿರುಧಾನ್ಯಗಳ ಬಳಕೆಯಿಂದ ಮನುಷ್ಯನ ಆರೋಗ್ಯದ ಮೇಲಾಗುವ ಒಳ್ಳೆಯ ಪರಿಣಾಮಗಳ ಕುರಿತು ಮಾಹಿತಿ ಹಂಚಿಕೊಂಡರು. ರೈತರನ್ನು ತಲುಪುವ ನಿಟ್ಟಿನಲ್ಲಿ ಇದೊಂದು ಒಳ್ಳೆಯ ಪ್ರಯತ್ನವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರಮೇಶ್ ತಿಳಿಸಿದರು.
ಶಿಕ್ಷಕರು, ಸಿರಿಧಾನ್ಯ ಬೆಳೆಗಾರರು ಹಾಗೂ ಸಿರಿಧಾನ್ಯ ಉದ್ದಿಮೆದಾರರಾದ ರಘು ಗೋಪಾಲನಹಳ್ಳಿ ಮಾತನಾಡಿ, ಸಿರಿಧಾನ್ಯ ಇಂದು ಕೇವಲ ಹೊಟ್ಟೆ ತುಂಬಿಸಿಕೊಳ್ಳಲು ಬೆಳೆಯುವ ಬೆಳೆಯಾಗಿಲ್ಲ. ಸಿರಿಧಾನ್ಯ ಬೆಳೆಯುವುದು ಉದ್ಯಮವಾಗಿ ರೂಪಾಂತರಗೊಳ್ಳುತ್ತಿದೆ. ಹಾಗಾಗಿ ರೈತರು ಹೊಸ ತಂತ್ರಜ್ಞಾನದ ಮೂಲಕ ಸಿರಿಧಾನ್ಯ ಬೆಳೆಗಳನ್ನು ಸಂಸ್ಕರಿಸಿ, ಉತ್ಕೃಷ್ಟ ಗುಣಮಟ್ಟದ ಪ್ಯಾಕಿಂಗ್ ಮಾಡುವುದರಿಂದ ದೊಡ್ಡ ದೊಡ್ಡ ಕಂಪನಿಗಳ ಜೊತೆ ಪೈಪೋಟಿ ಮಾಡಬಹುದಾಗಿದೆ ಎಂದರು.ಸಿರಿಧಾನ್ಯಗಳನ್ನು ಕಾಳಿನ ರೂಪದಲ್ಲಿ ಮಾರಾಟ ಮಾಡುವುದಕ್ಕಿಂತ ಪೌಡರ್ ರೂಪದಲ್ಲಿ ಮಾರಾಟ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು. ಪೌಡರ್ ಮಾಡಲು ಬೇಕಾದ ಮಿಷನರಿ ಕೊಳ್ಳಲು ಸರಕಾರದಿಂದ ವಿವಿಧ ಹಂತದ ಸಹಾಯಧನ ದೊರೆಯಲಿದೆ. ರೈತರು ಇದನ್ನು ಬಳಸಿಕೊಂಡು, ಸಿರಿಧಾನ್ಯಗಳನ್ನು ತಾವು ಬಳಸಿ, ಇತರರಿಗೂ ಮಾರಾಟ ಮಾಡಿ ಲಾಭಗಳಿಸುವಂತೆ ಸಲಹೆ ನೀಡಿದರು.
ಇದೇ ವೇಳೆ ಎರಡು ದಿನಗಳ ಸಿರಿಧಾನ್ಯ ಹಬ್ಬದಲ್ಲಿ ಮಳಿಗೆ ತೆರೆದಿದ್ದ ವಿವಿಧ ಉತ್ಪಾದಕ ಸಂಸ್ಥೆಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಜಿಲ್ಲೆಯ ಎಲ್ಲಾ ತಾಲೂಕು ಕೃಷಿ ಇಲಾಖೆ ಉಪನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು, ನಿವೃತ್ತ ನಿರ್ದೇಶಕ ಪ್ರೊ.ಶಶಿಕಾಂತ್,ರಘು, ಎಪಿಒ ಗಿರೀಶ್ ಮತ್ತಿತರರು ಉಪಸ್ಥಿತರಿದ್ದರು.