ತಂಬಾಕು ಸೇವನೆಯಿಂದ ಎಲ್ಲರೂ ದೂರವಿರಿ: ಆಯಿಷಾಬಿ ಮಾಜೀದ್

KannadaprabhaNewsNetwork |  
Published : Jun 01, 2024, 12:46 AM IST
೩೧ವೈಎಲ್‌ಬಿ೨:ಯಲಬುರ್ಗಾದ ಗವಿಸಿದ್ದೇಶ್ವರ ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜನಲ್ಲಿ ಶುಕ್ರವಾರ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಕಾನೂನು ಅರಿವು-ನೆರವು  ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

ಯಲಬುರ್ಗಾ ಪಟ್ಟಣದ ಗವಿಸಿದ್ದೇಶ್ವರ ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜಿನಲ್ಲಿ ಶುಕ್ರವಾರ ವಿಶ್ವ ತಂಬಾಕುರಹಿತ ದಿನಾಚರಣೆ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ನಡೆಯಿತು.

ಯಲಬುರ್ಗಾ: ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಹೀಗಾಗಿ ಈ ಸೇವನೆಯಿಂದ ಪ್ರತಿಯೊಬ್ಬರೂ ಮುಕ್ತರಾಗಬೇಕು ಎಂದು ಸಿವಿಲ್ ಶ್ರೇಣಿ ನ್ಯಾಯಾಧೀಶರಾದ ಆಯಿಷಾಬಿ ಮಾಜೀದ್ ಹೇಳಿದರು.

ಪಟ್ಟಣದ ಗವಿಸಿದ್ದೇಶ್ವರ ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜಿನಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕು ಆರೋಗ್ಯ ಇಲಾಖೆ, ಜನನಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ತರಲಕಟ್ಟಿ (ಗವಿಸಿದ್ದೇಶ್ವರ ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜು) ಪೊಲೀಸ್ ಇಲಾಖೆ, ಅಭಿಯೋಜನಾ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ತಂಬಾಕುರಹಿತ ದಿನಾಚರಣೆ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸೇವಿಸುವ ತಂಬಾಕಿನಲ್ಲಿ ವಿಷಕಾರಿ ಅಂಶಗಳು ಇದ್ದರೂ ಅದನ್ನೆ ನಿತ್ಯ ಸೇವನೆ ಮಾಡುತ್ತಾ ಬಹಳಷ್ಟು ಜನರು ಸಾಕಷ್ಟು ಕಾಯಿಲೆಯಿಂದ ಬಳಲುತ್ತಾ ನರಳಾಡುತ್ತಿದ್ದಾರೆ. ಇಷ್ಟೆಲ್ಲ ಅರಿವು ಇದ್ದರೂ ಆರೋಗ್ಯ ಹಾಳು ಮಾಡಿಕೊಳ್ಳುವುದು ಎಷ್ಟು ಸರಿ? ಕ್ಯಾನ್ಸರ್‌ನಂತಹ ಕಾಯಿಲೆಗೆ ಗುರಿಯಾಗುತ್ತಾರೆ, ಆಗ ಯಾವ ವೈದ್ಯರಾಗಲಿ ಏನೂ ಮಾಡಲು ಸಾಧ್ಯವಿಲ್ಲ. ಮನುಷ್ಯ ಆರೋಗ್ಯವಾಗಿದ್ದರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು. ಅದನ್ನು ಗಮನದಲ್ಲಿಟ್ಟುಕೊಂಡು ದುಶ್ಚಟಗಳಿಂದ ದೂರವಿರಬೇಕು ಎಂದರು.

ತಾಲೂಕು ಆರೋಗ್ಯ ಅಧಿಕಾರಿ ಡಾ. ರಚನಾ ಮಾತನಾಡಿ, ತಂಬಾಕು ಸೇವನೆಯಿಂದ ಶ್ವಾಸಕೋಶದ ತೊಂದರೆ, ಕ್ಷಯರೋಗ, ಅಸ್ತಮಾ, ಕೆಮ್ಮು, ಕ್ಯಾನ್ಸರ್ ಮುಂತಾದ ಕಾಯಿಲೆಗಳು ನಮ್ಮನ್ನು ಆವರಿಸುತ್ತೇವೆ. ಇದರಿಂದ ದಿನದಿಂದ ದಿನಕ್ಕೆ ಆರೋಗ್ಯ ಕ್ಷೀಣಿಸಿ ಸಾವು ಸನ್ನಿಹಿತವಾಗುತ್ತದೆ ಎಂದರು.

ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ ಹಾಗೂ ಸಹಾಯಕ ಸರ್ಕಾರಿ ಅಭಿಯೋಜಕ ರವಿ ಹುಣಿಸಿಮರದ ಮಾತನಾಡಿ, ದುಶ್ಚಟಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತೇವೆ. ಇತರ ಕಾಯಿಲೆಗಳಿಗೆ ದಾರಿಮಾಡಿ ಕೊಡುತ್ತದೆ ಎಂದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪ್ರಕಾಶ ಬೇಲೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ದುಶ್ಚಟಗಳಿಂದ ಎಷ್ಟು ದೂರ ಇರುತ್ತೇವೆಯೋ ಅಷ್ಟು ಆರೋಗ್ಯವಂತರಾಗಿ ಇರಬಹುದು. ತಂಬಾಕು ಸೇವನೆ ಮಾರಕ ರೋಗವಾಗಿದೆ ಎಂದರು.

ಗವಿಸಿದ್ದೇಶ್ವರ ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜ ಅಧ್ಯಕ್ಷ ರಂಗನಾಥ ವೆಲ್ಮಕೊಂಡಿ, ವಕೀಲರ ಸಂಘದ ಕಾರ್ಯದರ್ಶಿ ಈರಣ್ಣ ಕೋಳೂರು, ಕಾಲೇಜಿನ ಪ್ರಾಚಾರ್ಯ ಪ್ರಾಣೇಶ ವೆಲ್ಮಕೊಂಡಿ, ನ್ಯಾಯಾಂಗ ಇಲಾಖೆ ಸಿಬ್ಬಂದಿ ರಾಘವೇಂದ್ರ ಕೋಳಿಹಾಳ, ವಿನಾಯಕ ರಂಗಾರಿ ಮತ್ತಿತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ