ಪರಿಸರದ ಸಂರಕ್ಷಣೆಗೆ ಪ್ರತಿಯೊಬ್ಬರೂ ಶ್ರಮಿಸಿ

KannadaprabhaNewsNetwork |  
Published : Jun 07, 2024, 12:31 AM IST
ಬೆಳಗಾವಿ ತಾಲೂಕಿನ ಹುದಲಿಯ ಬೆಳಗಾಂ ಶುಗರ್ಸ್ ಕಾರ್ಖಾನೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ನಡೆಯಿತು | Kannada Prabha

ಸಾರಾಂಶ

ಪರಿಸರ ರಕ್ಷಣೆ ಮಾಡುವಂತೆ ವನಮಹೋತ್ಸವ ಕಾರ್ಯಕ್ರಮ ಉದ್ಘಾಟನೆಯಲ್ಲಿ ಪ್ರದೀಪಕುಮಾರ ಇಂಡಿ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪರಿಸರ ದಿನಾಚರಣೆಯು ಕೇವಲ ಒಂದು ದಿನದ ಆಚರಣೆಯಾಗದೇ ಪೂರಕವಾದ ವಾತಾವರಣವನ್ನು ನಿರ್ಮಿಸುವ ಮೂಲಕ ಪರಿಸರದ ಸಂರಕ್ಷಣೆಗಾಗಿ ಪ್ರತಿಯೊಬ್ಬರು ನಿರಂತರವಾಗಿ ಶ್ರಮವಹಿಸಬೇಕಾಗಿದೆ ಎಂದು ಬೆಳಗಾಂ ಶುಗರ್ಸ್‌ ಕಾರ್ಖಾನೆ ಚೇರಮನ್‌ ಪ್ರದೀಪಕುಮಾರ ಇಂಡಿ ಹೇಳಿದರು.

ಬೆಳಗಾವಿ ತಾಲೂಕಿನ ಹುದಲಿಯ ಬೆಳಗಾಂ ಶುಗರ್ಸ್ ಕಾರ್ಖಾನೆ ಆವರಣದಲ್ಲಿ ಆಯೋಜಿಸಿದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಿಡ-ಮರಗಳನ್ನು ನಾಶಪಡಿಸುತ್ತಿರುವುದರಿಂದ ಅರಣ್ಯ ಸಂಪತ್ತು ಮಾಯವಾಗುತ್ತಿದೆ. ಇದರಿಂದಾಗಿ ಮಳೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದ್ದು, ಅಂತರ್ಜಲದ ಮಟ್ಟ ಕಡಿಮೆಯಾಗುತ್ತಿದೆ. ಅಲ್ಲದೇ ಜಾಗತಿಕವಾಗಿ ಹವಾಮಾನ ವೈಪರಿತ್ಯ ಉಂಟಾಗಿ ತಾಪಮಾನ ಹೆಚ್ಚಾಗುತ್ತಿದ್ದು, ಪ್ರಸಕ್ತ ವರ್ಷದಲ್ಲಿ ದೆಹಲಿಯಲ್ಲಿ ಅತ್ಯಧಿಕ 53.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಇದರಿಂದಾಗಿ ಜೀವರಾಶಿಗಳ ಮೇಲೆ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ನಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಹಸಿರುಗೊಳಿಸುವುದರಿಂದ ಮಾತ್ರ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದಾಗಿದೆ. ಈ ದಿಸೆಯಲ್ಲಿ ಎಲ್ಲರೂ ಪರಿಸರ ಸಂರಕ್ಷಣೆಯ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದರು.

ಪ್ರತಿಯೊಬ್ಬರು ತಮ್ಮ ತಮ್ಮ ಮನೆ, ಜಮೀನುಗಳಲ್ಲಿ ಸಸಿಗಳನ್ನು ನೆಟ್ಟು ಲಾಲನೆ-ಪಾಲನೆ ಮಾಡುವ ಮೂಲಕ ಅರಣ್ಯ ಸಂಪತ್ತನ್ನು ವೃದ್ಧಿಸುವ ನಿಟ್ಟಿನಲ್ಲಿ ಶ್ರಮಿಸಿ ಪರಿಸರ ಕಾಪಾಡಿಕೊಳ್ಳಬೇಕಾಗಿದೆ. ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ತ್ಯಜಿಸಬೇಕಾಗಿದೆ. ಮರಗಳನ್ನೇ ಅವಲಂಬಿಸಿ ಬದುಕುವ ಪಕ್ಷಿ ಸಂಕುಲ ಉಳಿಸಲು ಅವುಗಳಿಗೆ ಆಹಾರವಾಗಬಲ್ಲ ಹಣ್ಣಿನ ಗಿಡಗಳನ್ನು ಬೆಳೆಸುವತ್ತ ಗಮನಹರಿಸಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಉಪಾಧ್ಯಕ್ಷ ಎಲ್.ಆರ್.ಕಾರಗಿ, ಉಪಾಧ್ಯಕ್ಷ.ಎ.ಎಸ್.ರಾಣಾ, ಪ್ರಧಾನ ವ್ಯವಸ್ಥಾಪಕ ಎಸ್.ಆರ್.ಬಿರ್ಜೆ, ಸಹಾಯಕ ಪ್ರಧಾನ ವ್ಯವಸ್ಥಾಪಕ ಎನ್.ಬಿ ಚೌಗಲಾ, ಬಿ.ಎ.ಪಾಟೀಲ, ಹಿರಿಯ ವ್ಯವಸ್ಥಾಪಕ ವರ್ಗದವರು ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಕಾರ್ಖಾನೆಯ ಕಾರ್ಮಿಕರು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

-----------ನಮ್ಮ ಕಾರ್ಖಾನೆಯ ಆವರಣದಲ್ಲಿ ಈಗಾಗಲೇ ಸುಮಾರು 4000 ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿಯು ನಮ್ಮ ಕಾರ್ಖಾನೆಯ ಆವರಣದಲ್ಲಿ ಸುಮಾರು 1500 ವಿವಿಧ ತಳಿಯ ಗಿಡಗಳನ್ನು ನೆಟ್ಟು ಪೋಷಿಸಲಾಗುವುದು.

-ಪ್ರದೀಪಕುಮಾರ ಇಂಡಿ, ಬೆಳಗಾವಿ ಶುಗರ್ಸ್‌ ಕಾರ್ಖಾನೆ ಚೇರಮನ್‌.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ