ಜಲ ಮೂಲಗಳ ರಕ್ಷಣೆಗೆ ಎಲ್ಲರೂ ಮುಂದಾಗಬೇಕು

KannadaprabhaNewsNetwork | Published : Mar 11, 2024 1:25 AM

ಸಾರಾಂಶ

ಕೆರೆಗಳಲ್ಲಿ ನೀರಿದ್ದರೆ ಮಾತ್ರ ಕೊಳವೆ ಬಾವಿಗಳಲ್ಲಿಯೂ ನೀರು ಸಿಗಲು ಸಾಧ್ಯ. ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಆಸ್ತಿ, ಅಂತಸ್ತುಗಳನ್ನು ಸಂಪಾದನೆ ಮಾಡುವ ಬದಲು, ಅವರಿಗೆ ಕುಡಿಯುವ ನೀರಿನ ಭವಿಷ್ಯಕ್ಕಾಗಿ ಕೆರೆ, ಕುಂಟೆ, ಕಾಲುವೆ ರಕ್ಷಿಸೋಣ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಕುಡಿಯುವ ನೀರಿನ ಜಲ ಮೂಲಗಳಾದ ಕೆರೆ, ಕುಂಟೆ, ಕಾಲುವೆಗಳನ್ನು ಸಂರಕ್ಷಿಸಿಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕೆಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ಹೇಳಿದರು.

ಚಿಂತಾಮಣಿ ನಗರಕ್ಕೆ ಹೊಂದಿಕೊಂಡಿರುವ ಮಾಳಪಲ್ಲಿ ಕೆರೆಯನ್ನು ಅಭಿವೃದ್ದಿಪಡಿಸಲು ೪೬ ಲಕ್ಷ ರೂ ವೆಚ್ಚದಲ್ಲಿ ವೇಲ್‌ಲ್ಯಾಬ್ಸ್, ವಿಮಾಸ್ಸ್, ಡಿಸಿಬಿ ಬ್ಯಾಂಕ್, ಪ್ರೆಂಡ್ಸ್ ಆಪ್ ಲ್ಯಾಕ್ಸ್, ಇಂಡಿಯಾ ಕೇರ್ ಪೌಂಡೇಶನ್ ಮತಿತ್ತರ ಸ್ವಯಂಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಾಳಪಲ್ಲಿ ಕೆರೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೆರಿಸಿ ಮಾತನಾಡಿದರು.

ತಿಳಿವಳಿಕೆ ಇದ್ದರೂ ನಿರ್ಲಕ್ಷ್ಯತನ

ಜನತೆಗೆ ಕೆರೆಗಳ ಬಗ್ಗೆ ಹೆಚ್ಚಿನ ತಿಳಿವಳಿಕೆ ಇದೆ. ಆದರೆ ಅಷ್ಟೇ ನಿರ್ಲಕ್ಷ್ಯತನವೂ ಇರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ವಿಶ್ವಬ್ಯಾಂಕ್‌ನ ಸಹಯೋಗದೊಂದಿಗೆ ಜಲಸಂವರ್ಧನೆ ಯೋಜನೆಯಡಿ ನಮ್ಮ ಭಾಗದಲ್ಲಿ ಕೆರೆಗಳ ಅಭಿವೃದ್ದಿಗೆ ಮುಂದಾಗಿದ್ದನ್ನು ಸ್ಮರಿಸಿದರು.

ಇಂದು ರೈತರು, ನಾವೆಲ್ಲಾ ಕೊಳವೆ ಬಾವಿಗಳನ್ನೇ ನಂಬಿಕೊಂಡು ವ್ಯವಸಾಯ ಮಾಡುತ್ತಿದ್ದೇವೆ. ಕೆರೆಗಳಲ್ಲಿ ನೀರಿದ್ದರೆ ಮಾತ್ರ ಕೊಳವೆ ಬಾವಿಗಳಲ್ಲಿಯೂ ನೀರು ಸಿಗಲು ಸಾಧ್ಯವಾದ್ದರಿಂದ ನಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಆಸ್ತಿ, ಅಂತಸ್ತುಗಳನ್ನು ಸಂಪಾದನೆ ಮಾಡುವ ಬದಲು, ಅವರ ಮುಂದಿನ ಕುಡಿಯುವ ನೀರಿನ ಭವಿಷ್ಯಕ್ಕಾಗಿ ಕೆರೆ, ಕುಂಟೆ, ಕಾಲುವೆಗಳನ್ನು ಸಂರಕ್ಷಿಸಿಕೊಳ್ಳಲು ಮುಂದಾಗಬೇಕೆಂದರು.

ಕೆರೆಗಳ ಅಭಿವೃದ್ಧಿಗೆ ಅನುದಾನ

ನಮ್ಮ ನಗರದ ಸುತ್ತಮುತ್ತಲ ಭಾಗದಲ್ಲಿನ ಕೆರೆಗಳನ್ನು ಕೂಡ ಸಂರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ನೆಮ್ಮಲ್ಲರ ಮೇಲಿರುವುದರ ಹಿನ್ನೆಲೆಯಲ್ಲಿ ನಗರದ ನೆಕ್ಕುಂದಿ ಕೆರೆಯ ನೀರಿನ ಸಾಮರ್ಥ್ಯವನ್ನು ಹೆಚ್ಚಿಸಿ ಮತ್ತಷ್ಟು ಅಭಿವೃದ್ದಿಪಡಿಸಲು ೩೫ ಕೋಟಿ ರೂ ಹಣ ಬಿಡುಗಡೆಯಾಗಿದೆ. ಕನ್ನಂಪಲ್ಲಿ ಕೆರೆಯ ನೀರಿನ ಸಾಮರ್ಥ್ಯವನ್ನು ಹೆಚ್ಚಿಸಲು ೩೫ ಕೋಟಿ ಹಣ ಮಂಜೂರಾಗಿದೆ. ಇದರ ಜೊತೆಗೆ ಸಣ್ಣ ನೀರಾವರಿ ಇಲಾಖೆಯಿಂದ ಭಕ್ತರಹಳ್ಳಿ ಅರಸಿಕೆರೆಯಲ್ಲಿ ಕೇವಲ ೩೭ ಎಂಎಲ್‌ಡಿ ನೀರಿನ ಸಂಗ್ರಹ ಸಾಮರ್ಥ್ಯವಿದ್ದು ಕೆರೆಯಲ್ಲಿ ಹೂಳು ತುಂಬಿಕೊಡಿದ್ದು, ಕೆರೆಯಿಂದ ನಾನೂರು ಮೀಟರ್ ಅಂತರದಲ್ಲಿ ಇನ್ನೊಂದು ಕೆರೆ ನಿರ್ಮಾಣ ಮಾಡಲು ೩೫ ಕೋಟಿ ರೂ ವೀಶೇಷ ಅನುದಾನದಲ್ಲಿ ಅಭಿವೃದ್ದಿಪಡಿಸಲಾಗುವುದೆಂದರು.

ಈ ಸಂದರ್ಭದಲ್ಲಿ ಮುಖಂಡರಾದ ಮುನಿಶಾಮಿರೆಡ್ಡಿ, ಡಿಸಿಬಿ ಬ್ಯಾಂಕ್‌ನ ರಮೇಶ್‌ಬಾಬು, ವಿಷ್ಣುಪೋಲೆಪಲ್ಲಿ, ಇಂಡಿಯಾ ಕೆರೆ ಪೌಂಡೇಷನ ಮೀನಾ, ವೇಲ್ ಲ್ಯಾಬ್ಸ್ ನ ರಾಜೇಶ್, ಫ್ರೇಂಡ್ಸ್ ಆಪ್ ಲೇಕ್‌ನ ರಾಮಪ್ರಸಾದ್, ಮೇಲುಕೋಟೆ ಮಂಜು, ನಗರಸಭೆ ಪೌರಾಯುಕ್ತ ಚಲಪತಿ, ಡಿಸಿಸಿ ಬ್ಯಾಂಕ್‌ನ ಮಾಜಿ ನಿರ್ದೇಶಕ ನಾಗಿರೆಡ್ಡಿ, ಜಿಲ್ಲಾ ಪಂಚಾಯಿತಿಯ ಪ್ರಸಾದ್, ಮತಿತ್ತರರು ಉಪಸ್ಥಿತರಿದ್ದರು.

Share this article