ಸಂವಿಧಾನದ ಆಶಯಗಳನ್ನು ಎಲ್ಲರೂ ಅರಿಯಿರಿ: ಮುಂಡರಗಿ ನಾಗರಾಜ

KannadaprabhaNewsNetwork |  
Published : Nov 27, 2024, 01:03 AM IST
ಬಳ್ಳಾರಿಯಲ್ಲಿ ಮಂಗಳವಾರ ಜರುಗಿದ ‘ಸಂವಿಧಾನ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್ ಮಾತನಾಡಿದರು.  | Kannada Prabha

ಸಾರಾಂಶ

ಸಂವಿಧಾನದ ಪೀಠಿಕೆ, ಆಶಯಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು.

ಬಳ್ಳಾರಿ: ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿದ ದೇಶವಾಗಿದ್ದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಪೀಠಿಕೆ, ಆಶಯಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಹೇಳಿದರು.

ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ನಲ್ಲಚೆರುವು ಪ್ರದೇಶದ ಮಹರ್ಷಿ ವಾಲ್ಮೀಕಿ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಲು 2 ವರ್ಷ, 11 ತಿಂಗಳು, 18 ದಿನ ಅವಧಿ ತೆಗೆದುಕೊಂಡಿದ್ದರು. ಭಾರತದ ಸಂವಿಧಾನವು ರಚನಾ ಸಭೆಯಲ್ಲಿ ಅಂಗೀಕೃತಗೊಂಡು ಇಂದಿಗೆ 75 ವರ್ಷವಾಗಿದ್ದು, ನಾವೆಲ್ಲರೂ ಬಾಬಾ ಸಾಹೇಬರನ್ನು ಗೌರವದಿಂದ ಸ್ಮರಿಸಬೇಕು ಎಂದು ಅವರು ತಿಳಿಸಿದರು.

ಸಂವಿಧಾನ ಪುಸ್ತಕವನ್ನು ಪ್ರತಿಯೊಬ್ಬರೂ ಓದಬೇಕು. ಸಂವಿಧಾನದ ಪೀಠಿಕೆ, ಆಶೋತ್ತರಗಳನ್ನು ಜನರಿಗೆ ತಿಳಿಸಲು ಗ್ರಾಪಂ ಮಟ್ಟದಲ್ಲಿಯೂ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಸರ್ಕಾರವು ‘ಸಂವಿಧಾನ ಓದು’ ಕಿರು ಪುಸ್ತಕಗಳನ್ನು ಮುದ್ರಿಸಿ ಮನೆ ಬಾಗಿಲಿಗೆ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಬಳ್ಳಾರಿ ನಗರದ ಡಾ.ರಾಜ್‌ಕುಮಾರ್ ಉದ್ಯಾನವನದಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಸರ್ಕಾರದಿಂದ ಅನುಮೋದಿತ (ಅಂದಾಜು 10*12 ಅಡಿ ಅಳತೆಯ) ಭಾರತ ಸಂವಿಧಾನ ಪೀಠಿಕೆಯನ್ನು ಗ್ರಾನೈಟ್ ಕಲ್ಲಿನಲ್ಲಿ ಕೆತ್ತಿಸಿ 26ನೇ ಜನವರಿ 2025ರಂದು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಮಾತನಾಡಿ, ದೇಶದಲ್ಲಿ ಸಂವಿಧಾನವು ಸವೋಚ್ಛ ಕಾನೂನು ಆಗಿದೆ. ಸಂವಿಧಾನವು ಮಹಾನ್ ವ್ಯಕ್ತಿಗಳ ಪರಿಶ್ರಮದಿಂದ ಲಭಿಸಿದೆ. ಸಂವಿಧಾನದಲ್ಲಿ ಎಲ್ಲಾ ಸಿದ್ಧಾಂತ ಅಡಗಿದ್ದು, ನಮಗೆ ಎಲ್ಲಾ ಬಗೆಯ ಸ್ವಾತಂತ್ರ್ಯ ಸಿಕ್ಕಿದೆ ಎಂದರೆ ಅದು ಸಂವಿಧಾನದಿಂದ ಮಾತ್ರ. ಹಾಗಾಗಿ ಪ್ರತಿದಿನ ಸಂವಿಧಾನವನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂವಿಧಾನದ ಆಶಯಗಳ ಕುರಿತು ಉಪನ್ಯಾಸ ನೀಡಿದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಹಾಗೂ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಹೊನ್ನೂರು ಅಲಿ, ಭಾರತವು ಸರ್ವಧರ್ಮೀಯರನ್ನು ಒಳಗೊಂಡ ದೇಶವಾಗಿದೆ. ಸಂವಿಧಾನದಡಿ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ನಾವೆಲ್ಲರೂ ಸಮಾನರು ಎಂದು ಸಂವಿಧಾನದ ಪ್ರಸ್ತಾವನೆ ಬಿಂಬಿಸುತ್ತದೆ ಎಂದು ತಿಳಿಸಿದರು.

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಹುಟ್ಟಿನಿಂದ ಸಾಯುವವರೆಗೂ ಎಲ್ಲಾ ರಂಗಗಳಲ್ಲಿ ಸಮಾನತೆಗಾಗಿ ಹೋರಾಡಿದವರಾಗಿದ್ದರು ಎಂದರು.

ಕಲ್ಯಾಣ ಕರ್ನಾಟಕ ಇತಿಹಾಸ ರಚನಾ ಸಮಿತಿ ತಜ್ಞ ಡಾ.ರಾಜೇಂದ್ರ ಪ್ರಸಾದ್.ಎನ್.ಎಲ್ ಅವರು ಸಂವಿಧಾನ ಕುರಿತು ಮಾತನಾಡಿದರು.

ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಸಂವಿಧಾನದ ಪೀಠಿಕೆ ಬೋಧಿಸಿದರು. ಇದೇ ವೇಳೆ ಶಾಲಾ ಮಕ್ಕಳಿಗೆ ‘ಸಂವಿಧಾನ ಓದು’ ಪುಸ್ತಕಗಳನ್ನು ಗಣ್ಯರು ವಿತರಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಗಣ್ಯರು ನಗರದ ಮೊದಲ ರೈಲ್ವೆ ಗೇಟ್ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ನಲ್ಲಚೇರುವು ಪ್ರದೇಶದ ಡಾ.ಬಾಬು ಜಗನಜೀವನ ರಾಂ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದರು. ಬಳಿಕ ವಾಲ್ಮೀಕಿ ಮುಂಭಾಗ ಬಸ್‌ಗಳಿಗೆ ಸಂವಿಧಾನದ ಪ್ರಸ್ತಾವನೆಯ ಭಿತ್ತಿಚಿತ್ರ ಅಂಟಿಸಲಾಯಿತು. ಸಂವಿಧಾನ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಸಹಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ.ಮಲ್ಲಿಕಾರ್ಜುನ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಮಮತಾ.ಪಿ., ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಶಿವಾಜಿರಾವ್ ಸೇರಿದಂತೆ ಮಹಾನಗರ ಪಾಲಿಕೆಯ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ವಸತಿ ನಿಲಯಗಳ ಪಾಂಶುಪಾಲರು, ನಿಲಯ ಪಾಲಕರು, ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬಳ್ಳಾರಿಯಲ್ಲಿ ಮಂಗಳವಾರ ಜರುಗಿದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್ ಮಾತನಾಡಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ