ಕನ್ನಡಪ್ರಭ ವಾರ್ತೆ ರಾಮದುರ್ಗ: ವಿಶ್ವಗುರು ಬಸವಣ್ಣನವರ ವಚನಗಳಂತೆ ಎಲ್ಲ ಸಮಾಜಗಳ ಜನರನ್ನು ಸಮನಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಒಂದಾಗಬೇಕು. ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ನೆರವು ನೀಡುವದಾಗಿ ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.ಶನಿವಾರ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪನಾ ದಿನಾಚರಣೆ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದ ಸಂಘಟನೆ ಜೊತೆಗೆ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಅಗತ್ಯ ಸಹಾಯ ಮಾಡಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ ಮಾತನಾಡಿ, ಸರ್ಕಾರದ ಸೌಲಭ್ಯಕ್ಕಾಗಿ ಸಮಾಜದ ಸಂಘಟನೆ ಅಗತ್ಯವಿದ್ದು, ಪ್ರತಿಯೊಬ್ಬರು ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಸಮಾಜಕ್ಕೆ ಅನ್ಯಾಯವಾದ ಸಮಯದಲ್ಲಿ ನ್ಯಾಯ ದೊರೆಯಬೇಕಾದರೆ ಸಂಘಟನೆ ಅಗತ್ಯವಿದೆ. ಸಮಾಜದ ಪ್ರತಿ ಕಾರ್ಯಕ್ಕೂ ಸ್ಪಂದಿಸುವುದಾಗಿ ತಿಳಿಸಿದರು.ಸಾಹಿತಿ ಡಾ.ಸಂಗಮನಾಥ ಲೋಕಾಪೂರ ಮಾತನಾಡಿ, ಬಸವಣ್ಣನವರ ಸಮಸಮಾಜದ ವಾರಸುದಾರರು ಬಣಜಿಗರಾಗಿದ್ದು, ಬಸವಣ್ಣನವರ ಅನುಭವ ಮಂಟಪದಂತೆ ಎಲ್ಲ ಸಮಾಜಗಳ ಜೊತೆಗೆ ಮೊದಲಿನಿಂದಲೂ ಉತ್ತಮ ಭಾಂದವ್ಯ ಹೊಂದಿದ ಸಮಾಜ. ಸಮಾಜದ ಮುಖಂಡರು ಎಲ್ಲ ರಂಗಗಳಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದರು.ಬಾದಮಿ ಚಾಲುಕ್ಯರ ಕಾಲದಿಂದ ಅಲ್ಲದೆ ವೇದಗಳ ಸಮಯದಲ್ಲಿಯೂ ಬಣಜಿಗ ಸಮಾಜ ಅಸ್ತಿತ್ವದಲ್ಲಿತ್ತು ಎನ್ನಲು ಶಾಸನಗಳು ಲಭ್ಯವಾಗಿವೆ. ರಾಜ್ಯದ ವಿರಕ್ತಮಠಗಳ ಸ್ಥಾಪನೆ, ಅವುಗಳ ಅಭಿವೃದ್ಧಿ ಜೊತೆ ಜೊತೆಗೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡುವಲ್ಲಿ ಬಣಜಿಗ ಸಮಾಜದ ಕೊಡುಗೆ ಅಪಾರವಾಗಿದೆ ಎಂದರು.