ಮುಡಾ ಸೈಟ್‌ ಹಂಚಿಕೆಯಲ್ಲಿ ಸಾಕಷ್ಟು ಅಕ್ರಮ: ಇ.ಡಿ.

KannadaprabhaNewsNetwork | Published : Dec 4, 2024 12:31 AM

ಸಾರಾಂಶ

ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷಗಳ ನಡುವೆ ಭಾರೀ ರಾಜಕೀಯ ಸಮರಕ್ಕೆ ಕಾರಣವಾಗಿದ್ದ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಗರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.
ಪಿಟಿಐ ನವದೆಹಲಿಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಹಾಗೂ ವಿರೋಧ ಪಕ್ಷಗಳ ನಡುವೆ ಭಾರೀ ರಾಜಕೀಯ ಸಮರಕ್ಕೆ ಕಾರಣವಾಗಿದ್ದ ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಗರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಅವರಿಗೆ 14 ನಿವೇಶನಗಳ ಹಸ್ತಾಂತರದ ಹಿಂದೆ ಹಲವಾರು ಅವ್ಯವಹಾರಗಳು ನಡೆದಿರುವುದಕ್ಕೆ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಬಹಿರಂಗಪಡಿಸಿದೆ.ಇದೇ ವೇಳೆ, ಮುಡಾದಿಂದ ಬೇನಾಮಿ ಹಾಗೂ ಇನ್ನಿತರೆ ವ್ಯವಹಾರಗಳ ಮೂಲಕ 1095 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಇದರ ಮೌಲ್ಯ ಬರೋಬ್ಬರಿ 700 ಕೋಟಿ ರು. ಎಂದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಹೇಳಿದೆ.

ಈ ಸಂಬಂಧ ಇತ್ತೀಚೆಗೆ ಕರ್ನಾಟಕ ಲೋಕಾಯುಕ್ತ ಇಲಾಖೆಗೆ ಇ.ಡಿ. ಪತ್ರ ಬರೆದಿದೆ.ಇ.ಡಿ. ಹೇಳೋದೇನು?‘ಪಾರ್ವತಿ ಅವರಿಗೆ ಭೂ ಹಸ್ತಾಂತರದಲ್ಲಿ ಶಾಸನಬದ್ಧ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ. ಸಾಕ್ಷ್ಯ ತಿರುಚುವಿಕೆಯ ಪುರಾವೆ ಲಭಿಸಿವೆ. ಕಚೇರಿ ಕಾರ್ಯವಿಧಾನಗಳ ಉಲ್ಲಂಘನೆ ಆಗಿದೆ. ಕೆಲವು ವ್ಯಕ್ತಿಗಳ ಪರ ಲಾಬಿ ನಡೆಸಲಾಗಿದೆ ಹಾಗೂ ಪ್ರಭಾವ ಬಳಸಲಾಗಿದೆ ಮತ್ತು ಫೋರ್ಜರಿ ಸಹಿಗಳ ಸಾಕ್ಷ್ಯಗಳು ನಮ್ಮ ತನಿಖೆ ವೇಳೆ ಪತ್ತೆಯಾಗಿವೆ’ ಎಂದು ಇ.ಡಿ. ತಿಳಿಸಿದೆ.ಸಿದ್ದರಾಮಯ್ಯ ಅವರ ಆಪ್ತ ಸಹಾಯಕರಲ್ಲಿ ಒಬ್ಬರಾದ ಎಸ್‌.ಜಿ. ದಿನೇಶ್ ಕುಮಾರ್ ಅಲಿಯಾಸ್‌ ಸಿ.ಟಿ. ಕುಮಾರ್ ಅವರು ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ‘ಅನಾವಶ್ಯಕ ಪ್ರಭಾವ’ ಬೀರಿದ್ದರು ಎಂಬುದಕ್ಕೆ ಸಾಕ್ಷ್ಯ ಲಭಿಸಿದೆ.

ಪಾರ್ವತಿ ಹಾಗೂ ಇತರರ ಕ್ರಮ:.:‘ಸೈಟ್ ಹಂಚಿಕೆಯಲ್ಲಿ ಶಾಸನಬದ್ಧ ಮಾರ್ಗಸೂಚಿಗಳನ್ನು ಉಲ್ಲಂಘಿಸಿ 14 ಸೈಟ್‌ಗಳನ್ನು ಪಾರ್ವತಿ ಅವರಿಗೆ ಕಾನೂನುಬಾಹಿರವಾಗಿ ಹಂಚಲಾಗಿದೆ ಎಂದು ಸ್ಪಷ್ಟವಾಗಿ ಗಮನಿಸಬಹುದು’ ಎಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಕಳುಹಿಸಲಾದ ಇತ್ತೀಚಿನ ಸಂವಹನದಲ್ಲಿ ಲೋಕಾಯುಕ್ತ ಇಲಾಖೆಗೆ ಇ.ಡಿ. ಮಾಹಿತಿ ನೀಡಿದೆ.ಈ ನಡುವೆ, ‘ಮುಡಾ ಕೇಸು ಬರೀ ಪಾರ್ವತಿ ಪ್ರಕರಣದೊಂದಿಗೆ ಅಂತ್ಯವಾಗಲಿಲ್ಲ, 700 ಕೋಟಿ ರು.ಗೂ ಅಧಿಕ ಮಾರುಕಟ್ಟೆ ಮೌಲ್ಯ ಹೊಂದಿರುವ ಒಟ್ಟು 1,095 ಸೈಟ್‌ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ’ ಎಂದು ಇ.ಡಿ. ಹೇಳಿದೆ. ಈ ಸಂಬಂಧ ತನಿಖಾ ವರದಿ ತನಗೆ ಲಭಿಸಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.‘ಹೆಚ್ಚಿನ ಹಂಚಿಕೆಗಳನ್ನು ಭೂಮಿ ಕಳೆದುಕೊಳ್ಳುವವರ ಸೋಗಿನಲ್ಲಿ ಬೇನಾಮಿ ಅಥವಾ ಡಮ್ಮಿ ಹೆಸರಿನಲ್ಲಿ ಮಾಡಲಾಗಿದೆ.

ಆದರೆ, ಈ ಅಕ್ರಮ ಹಂಚಿಕೆಯ ಫಲಾನುಭವಿಗಳು ರಿಯಲ್ ಎಸ್ಟೇಟ್ ಉದ್ಯಮಿಗಳು ಮತ್ತು ಪ್ರಭಾವಿ ವ್ಯಕ್ತಿಗಳಾಗಿದ್ದಾರೆ’ ಎಂದು ಇ.ಡಿ. ಅರೋಪಿಸಿದೆ.‘ಪಾರ್ವತಿ ಅವರಿಗೆ ಈ ಸೈಟುಗಳ ಹಂಚಿಕೆ ಮಾಡಿದಾಗ, ಅವರ ಮಗ ಯತೀಂದ್ರ ಅವರು ವರುಣ ಕ್ಷೇತ್ರದ ಶಾಸಕರಾಗಿದ್ದರು ಮತ್ತು ಆದ್ದರಿಂದ ಪದನಿಮಿತ್ತವಾಗಿ ಮುಡಾ ಮಂಡಳಿಯ ಸದಸ್ಯರಾಗಿದ್ದರು. ಈ ಅವಧಿಯಲ್ಲಿ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು’ ಎಂದು ಅದು ಮಾಹಿತಿ ನೀಡಿದೆ.ಇನ್ನು ಭೂಮಿಯ ಡಿ-ನೋಟಿಫಿಕೇಶನ್ ಪ್ರಕ್ರಿಯೆಯು ಯಾವುದೇ ತಾರ್ಕಿಕ ಅಥವಾ ಚರ್ಚೆ ಅಥವಾ ದಾಖಲೆಗಳ ವಿಶ್ಲೇಷಣೆ ಅನ್ನು ಆಧರಿಸಿಲ್ಲ.

ಸಿದ್ದರಾಮಯ್ಯ ಅವರ ಪಿಎ ಎಸ್‌.ಜಿ. ದಿನೇಶ್‌ ಕುಮಾರ್‌ ಅಲಿಯಾಸ್‌ ಸಿ.ಟಿ. ಕುಮಾರ್‌ ಮುಡಾ ಕಚೇರಿಯಲ್ಲಿ ‘ಅನಾವಶ್ಯಕ’ ಪ್ರಭಾವ ಬೀರಿದ್ದಾರೆ ಎಂದಿರುವ ಇ.ಡಿ., ಪಾರ್ವತಿ ಅವರಿಗೆ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿ ಅವರು ನಕಲಿ ಸಹಿ ಮಾಡಿ ಪ್ರಭಾವ ಬೀರಿದ್ದರು ಎಂಬುದನ್ನು ಪತ್ತೆ ಹಚ್ಚಿದೆ.ಮಾರಾಟಕ್ಕೂ ಮುನ್ನ ಸೈಟ್‌ ಹಂಚಿಕೆ:ಸೈಟ್‌ಗಳನ್ನು ‘ತಪ್ಪು ವಿಷಯ’ ಉಲ್ಲೇಖಿಸಿ ಮತ್ತು ‘ಪ್ರಭಾವ’ ಆಧರಿಸಿ ಕಾನೂನುಬಾಹಿರವಾಗಿ ಡಿ-ನೋಟಿಫೈ ಮಾಡಲಾಗಿದೆ. ನಿವೇಶನಗಳಲ್ಲಿ ಮುಡಾ ಅದಾಗಲೇ ಕೆಲವು ನಿರ್ಮಾಣಗಳನ್ನು ಕೈಗೊಂಡಿದ್ದರೂ ಈ ಸೈಟುಗಳನ್ನು ಸಿಎಂ ಅವರ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರು ‘ಕೃಷಿ ಜಮೀನು’ ಎಂದು ತೋರಿಸಿ ಖರೀದಿ ಮಾಡಿದ್ದಾರೆ.

ಮಲ್ಲಿಕಾರ್ಜುನ ಸ್ವಾಮಿಗೆ ಕೃಷಿ ಜಮೀನಿನ ಮಾಲೀಕ ದೇವರಾಜು ಈ ಜಮೀನು ಮಾರಾಟ ಮಾಡುವ ಮುನ್ನವೇ ಸೈಟು ಮಂಜೂರು ಮಾಡಲಾಗಿತ್ತು ಎಂದು ಇ.ಡಿ. ತಿಳಿಸಿದೆ.‘ಪರಿಹಾರವಾಗಿ ನಿವೇಶನಗಳನ್ನು ಹಂಚಿಕೆ ಮಾಡಲು ಕಾನೂನುಬದ್ಧ ನಿಬಂಧನೆಗಳ ಉಲ್ಲಂಘನೆ ಕೇವಲ ಒಂದೇ ಕೇಸಲ್ಲಿ (ಪಾರ್ವತಿ ಪ್ರಕರಣ) ನಡೆದಿಲ್ಲ. ರಿಯಲ್ ಎಸ್ಟೇಟ್ ಉದ್ಯಮಿಗಳು, ಪ್ರಭಾವಿ ವ್ಯಕ್ತಿಗಳು ಮತ್ತು ಮುಡಾ ಅಧಿಕಾರಿಗಳ ನಡುವೆ ಆಳವಾದ ನಂಟಿದೆ. ಇದು ಮುಡಾ ಅಧಿಕಾರಿಗಳು ಈ ಭೂ ಅಕ್ರಮ ಎಸಗಲು ಕಾರಣವಾಹಿದೆ’ ಎಂದಿದೆ. ಮುಡಾದಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ, ಹಂಚಿಕೆ ಪತ್ರಗಳನ್ನು ನೀಡಲು ಮುಡಾ ಬಳಸುವ ಹೆಚ್ಚಿನ ಭದ್ರತೆಯ ಬಾಂಡ್ ಪೇಪರ್‌ಗಳು (5000ರಲ್ಲಿ 1,946 ಪೇಪರ್‌ಗಳು) ಕಾಣೆಯಾಗಿರುವುದು ಕಂಡುಬಂದಿದೆ.

ಮುಡಾ ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಅವರ ಆಪ್ತ ಸಹಾಯಕ ಪ್ರಶಾಂತ್ ರಾಜು ಎಂಬ ವ್ಯಕ್ತಿ ಈ ಬಾಂಡ್ ಪೇಪರ್‌ಗಳನ್ನು ಹಿಂಪಡೆದಿದ್ದಾರೆ. ಅಕ್ರಮ ಹಂಚಿಕೆ ಪತ್ರಗಳನ್ನು ಜಿ.ಟಿ. ದಿನೇಶ್‌ಕುಮಾರ್‌ ಮೂಲಕ ನೀಡಲು ಈ ಹೈ-ಸೆಕ್ಯುರಿಟಿ ಬಾಂಡ್ ಪೇಪರ್‌ಗಳನ್ನು ಬಳಸಿರುವ ಸೂಚನೆ ತನಿಖೆಯಿಂದ ಕಂಡುಬಂದಿದೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.ಮೈಸೂರು ತಾಲೂಕಿನ ಕಸಬಾ ಹೋಬಳಿಯ ಕೆಸರೆ ಗ್ರಾಮದ ಸರ್ವೆ ನಂಬರ್ 464ರ 3.16 ಎಕರೆ ಜಮೀನನ್ನು ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಲು ಕೈಗೊಂಡಿರುವ ಸಂಪೂರ್ಣ ಪ್ರಕ್ರಿಯೆ ನೆಪಮಾತ್ರವಾಗಿದೆ. ಇದು ಸ್ಥಳದಲ್ಲಿನ ವಾಸ್ತವಿಕತೆಗೆ ದೂರವಾಗಿದೆ ಎಂದು ಲೋಕಾಯುಕ್ತಕ್ಕೆ ಇ.ಡಿ. ಮಾಹಿತಿ ನೀಡಿದೆ.‘ಸ್ಥಳೀಯ ಪ್ರದೇಶದ ಕಂದಾಯ ಆಡಳಿತಾಧಿಕಾರಿಗಳಾದ ಗ್ರಾಮ ಲೆಕ್ಕಿಗರು, ಸರ್ವೇಯರ್, ಕಂದಾಯ ನಿರೀಕ್ಷಕರು, ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವಿಕತೆಯ ಪರಿಶೀಲನೆ ನಡೆಸಿದ್ದರು. ಆದರೆ ಸ್ಥಳದಲ್ಲಿ ಮುಡಾದಿಂದ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿರುವುದನ್ನು ನಮೂದಿಸಲು ವಿಫಲರಾಗಿದ್ದಾರೆ.

ಯಾವುದೇ ಅನಧಿಕೃತ ನಿರ್ಮಾಣ ಸ್ಥಳದಲ್ಲಿ ನಡೆಯುತ್ತಿಲ್ಲ ಎಂದು ಅವರು ವರದಿ ಮಾಡಿದ್ದಾರೆ. ಆದರೆ ಇದು ‘ಉಪಗ್ರಹ ಚಿತ್ರಗಳು’ ಮತ್ತು ಮುಡಾದ ದಾಖಲೆಗಳು ತೋರಿಸಿದ ಸ್ಥಳೀಯ ಸಂಗತಿಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ. ಭೂಪರಿವರ್ತನೆ ಪ್ರಕ್ರಿಯೆ ನಡೆದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿದ್ದರು ಎಂಬುದನ್ನೂ ಗಮನಿಸಬೇಕು’ ಎಂದು ಇ.ಡಿ. ಹೇಳಿದೆ.ವೈಟ್ನರ್‌ನಿಂದ ಸಾಕ್ಷ್ಯ ನಾಶ:‘2014ರ ಜೂನ್ 14ರಂದು ಪಾರ್ವತಿ ಅವರು ಮುಡಾಕ್ಕೆ ಸಲ್ಲಿಸಿದ ಪರಿಹಾರ ಪತ್ರದಲ್ಲಿ, ಅಧಿಕೃತ ದೃಢೀಕರಣ ಇಲ್ಲದೇ ವಾಕ್ಯವನ್ನು ಅಳಿಸಲು ವೈಟ್ನರ್ ಬಳಸಿದ್ದಾರೆ. ಇದರಿಂದ ಸಾಕ್ಷಾಧಾರಗಳ ತಿರುಚುವಿಕೆ ಸುಳಿವು ಲಭಿಸಿದೆ. ಪಾರ್ವತಿ ಅವರ ಕಡತದ ಪ್ರಕ್ರಿಯೆಯನ್ನು ಸಾಮಾನ್ಯ ಕಾರ್ಯವಿಧಾನವನ್ನು ಉಲ್ಲಂಘಿಸಿ ಮಾಡಲಾಗಿದೆ ಮತ್ತು ಆಗಿನ ಮುಡಾ ಆಯುಕ್ತರು ಸ್ವತಃ ಸೈಟ್‌ಗಳನ್ನು ಆಯ್ಕೆ ಮಾಡಿ ಹಂಚಿದ್ದಾರೆ’ ಎಂದು ಇ.ಡಿ. ಆರೋಪಿಸಿದೆ.‘ನಿವೇಶನ ಹಂಚಿಕೆಯ ಪ್ರಸ್ತಾವನೆಯನ್ನು ನಿವೇಶನ ಹಂಚಿಕೆ ವಿಭಾಗವು ಮಾಡಿಲ್ಲ. ಅದನ್ನು ಮುಡಾದ ಅಂದಿನ ಆಯುಕ್ತ ಡಿ.ಬಿ. ನಟೇಶ್ ಅವರ ಸ್ವಂತ ಇಚ್ಛೆಯ ಮೇರೆಗೆ ನೇರವಾಗಿ ಕೈಗೆತ್ತಿಕೊಂಡರು.

ಇದು ಅನಪೇಕ್ಷಿತ ಪಕ್ಷಪಾತವನ್ನು ಸೂಚಿಸುತ್ತದೆ’ ಎಂದು ಇ.ಡಿ. ಪ್ರತಿಪಾದಿಸಿದೆ.‘ಡಿ-ನೋಟಿಫಿಕೇಶನ್, ಜಮೀನು ಖರೀದಿ ಮತ್ತು ಕೃಷಿಯೇತರ ಉದ್ದೇಶಗಳಿಗಾಗಿ ಭೂ ಪರಿವರ್ತನೆಯನ್ನು ಮುಡಾದಿಂದ ಅಭಿವೃದ್ಧಿಪಡಿಸಲಾಗುತ್ತಿರುವ ಲೇಔಟ್‌ನಲ್ಲಿ ಪ್ರಧಾನ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮಾಡಲಾಗಿದೆ. ನಂತರ ಅದನ್ನು ನಂತರ ಪಾರ್ವತಿಗೆ ಉಡುಗೊರೆಯಾಗಿ ನೀಡಲಾಗಿದೆ. ಪ್ರಭಾವದ ಮೂಲಕ ಭೂಸ್ವಾಧೀನ ಮಾಡಿಕೊಂಡು ಇದು ‘ಕಾಣಿಕೆ ರೂಪದಲ್ಲಿ ಪಡೆದ ಕಳಂಕರಹಿತ ಜಮೀನು’ ಎಂದು ಬಿಂಬಿಸಲಾಗಿದೆ’ ಎಂದು ಇ.ಡಿ. ಆರೋಪಿಸಿದೆ.

Share this article