ಮಾಜಿ ಸಚಿವ ಡಿ.ಸಿ.ತಮ್ಮಣ್ಣ ರಿಂದ ಕ್ಷೇತ್ರ ನಿರ್ಲಕ್ಷ್ಯ, ಅಭಿವೃದ್ಧಿ ಕುಂಠಿತ: ಕೆ.ಎಂ.ಉದಯ್

KannadaprabhaNewsNetwork |  
Published : Jan 26, 2025, 01:32 AM IST
25ಕೆಎಂಎನ್ ಡಿ23 | Kannada Prabha

ಸಾರಾಂಶ

ಮದ್ದೂರು ಪುರಸಭೆ ವ್ಯಾಪ್ತಿ ಕೈಗೊಂಡ 70 ಕೋಟಿ ರು. ವೆಚ್ಚದ ಯುಜಿಡಿ ಸಂಪರ್ಕದ ಕಾಮಗಾರಿ ಅದ್ವಾನ ಏನಾಗಿದೆ. ಇದು ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಚರ್ಚೆ ನಡೆಸುತ್ತಿರುವುದೇ ಉದಾಹರಣೆ. ಅನುದಾನ ಎಲ್ಲಿಗೆ ಹೋಯಿತು ಎಂಬುವುದೇ ತಮಗೂ ಗೊತ್ತಿಲ್ಲದ ವಿಚಾರ.

ಕನ್ನಡಪ್ರಭ ವಾರ್ತೆ ಮದ್ದೂರು

ಮದ್ದೂರು ಕ್ಷೇತ್ರಕ್ಕೆ ಅಗತ್ಯ ಅನುದಾನ ತರದೆ ಈ ಹಿಂದೆ ಅಧಿಕಾರದಲ್ಲಿದ್ದ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಸಂಪೂರ್ಣ ನಿರ್ಲಕ್ಷಿಸಿದ್ದರಿಂದ ಕ್ಷೇತ್ರವು ಅಭಿವೃದ್ಧಿಯಿಂದ ಕುಂಠಿತವಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಆರೋಪಿಸಿದರು.

ತಾಲೂಕಿನ ಕುದರಗುಂಡಿ ಗ್ರಾಮದಲ್ಲಿ ರಾಗಿ ಕಟಾವು ಯಂತ್ರಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಶಾಸಕರ ಅವಧಿಯಲ್ಲಿ ಕಳಪೆ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಎಲ್ಲಿಯೂ ಗುಣಮಟ್ಟದ ಕೆಲಸಗಳು ಆಗಿಲ್ಲ ಎಂದು ದೂರಿದರು ಅವರು, ಈ ಹಿಂದೆ ಅಧಿಕಾರ ನಡೆಸಿದ ಮಾಜಿ ಶಾಸಕರು ಯಾವುದೇ ಇಲಾಖೆಗೆ 10 ಲಕ್ಷ ರು. ಅನುದಾನ ತಂದಿರುವ ದಾಖಲೆಗಳಿದ್ದರೆ ತಮಗೆ ಕೊಡಿಸಿ ಎಂದು ಸವಾಲು ಹಾಕಿದರು.

ಕಳಪೆ ಕಾಮಗಾರಿಗಳನ್ನು ಕೈಗೊಂಡು ಕ್ಷೇತ್ರದ ಜನರ ದಿಕ್ಕು ತಪ್ಪಿಸಿದ್ದು ಗೊತ್ತಿದೆ. ರೈತರಿಗೆ ಉಪಯೋಗವಾಗುವಂತಹ ಯಾವುದೇ ಕಾಮಗಾರಿಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿದರು.

ಪುರಸಭೆ ವ್ಯಾಪ್ತಿ ಕೈಗೊಂಡ 70 ಕೋಟಿ ರು. ವೆಚ್ಚದ ಯುಜಿಡಿ ಸಂಪರ್ಕದ ಕಾಮಗಾರಿ ಅದ್ವಾನ ಏನಾಗಿದೆ. ಇದು ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಚರ್ಚೆ ನಡೆಸುತ್ತಿರುವುದೇ ಉದಾಹರಣೆ. ಅನುದಾನ ಎಲ್ಲಿಗೆ ಹೋಯಿತು ಎಂಬುವುದೇ ತಮಗೂ ಗೊತ್ತಿಲ್ಲದ ವಿಚಾರ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಬಜೆಟ್‌ನಲ್ಲಿ 112 ಕೋಟಿ ರು. ಬಿಡುಗಡೆಗೊಳಿಸಿದ ಪರಿಣಾಮವಾಗಿ ತಾವು ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಯುಜಿಡಿ ಸಂಪರ್ಕ ಕಾಮಗಾರಿ ಕೈಗೊಂಡ ಗುತ್ತಿಗೆದಾರ, ಎಂಜಿನಿಯರ್ ಹಾಗೂ ಮಾಜಿ ಶಾಸಕರು ಓಡಿ ಹೋಗಿದ್ದು, ಈಗ ಉತ್ತರ ಕೊಡುವವರು ಯಾರು ಇಲ್ಲವೆಂದು ಮಾರ್ಮಿಕವಾಗಿ ನುಡಿದರು.

ಕಳೆದ ಬಜೆಟ್‌ನಲ್ಲಿ ನೀಡಿರುವ ಅನುದಾನ ಮತ್ತು ಹಲವು ಇಲಾಖೆ ಸಚಿವರೊಟ್ಟಿಗೆ ಚರ್ಚಿಸಿ ಅಗತ್ಯವಿರುವ ಅನುದಾನವನ್ನು ಬಿಡುಗಡೆಗೊಳಿಸಿ ತಾವು ಕ್ಷೇತ್ರದಾದ್ಯಂತ ಅಭಿವೃದ್ಧಿ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಿದ್ದು, ಅಭಿವೃದ್ಧಿ ಸಹಿಸದ ಕೆಲವರು ಇಲ್ಲಸಲ್ಲದ ಟೀಕೆ ಮಾಡುತ್ತಿದ್ದಾರೆ. ಇದಕ್ಕೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದರು.

ಇದೇ ವೇಳೆ ಗ್ರಾಮದ ಕೆ.ಸಿ.ಪ್ರಶಾಂತ್ ಅವರ ಜಮೀನಿನಲ್ಲಿ ಕೃಷಿ ಇಲಾಖೆಯಿಂದ ನಡೆದ ರಾಗಿ ಕಟಾವು ಪ್ರಾತ್ಯಕ್ಷತೆಗೆ ಶಾಸಕರು ಚಾಲನೆ ನೀಡಿ, ಕೃಷಿ ಯಂತ್ರೋಪಕರಣ ಬಳಕೆ ಮಾಡಿಕೊಳ್ಳುವುದು, ಕೂಲಿ ಕಾರ್ಮಿಕರ ಕೊರತೆ ಮತ್ತು ಕಡಿಮೆ ವೆಚ್ಚದಲ್ಲಿ ಭತ್ತ, ರಾಗಿ ಕಟಾವು ಮಾಡಲು ಅನುಕೂಲವಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು ಕೃಷಿ ಇಲಾಖೆಯಿಂದ ಸಿಗುವ ಹಲವು ಯೋಜನೆ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬನೆ ಹೊಂದಬೇಕು ಎಂದರು.

ಕೃಷಿ ಇಲಾಖೆಯಿಂದ ಎಂ.ಎ.ರಾಜು ಅವರಿಗೆ 35 ಲಕ್ಷ ರು. ವೆಚ್ಚದ ರಾಗಿ ಹಾಗೂ ಭತ್ತ ಕಟಾವು ಯಂತ್ರವನ್ನು ವಿತರಿಸಿದ್ದು, ಸರ್ಕಾರದಿಂದ 12.5 ಲಕ್ಷ ರು. ಸಬ್ಸಿಡಿ ದೊರೆಯಲಿದೆ. ಒಂದೂವರೆ ಗಂಟೆಯಲ್ಲಿ ಒಂದು ಎಕರೆ ಭತ್ತ, ರಾಗಿಯನ್ನು ಕಟಾವು ಮಾಡಲಿದೆ. ಗಂಟೆಗೆ ನಾಲ್ಕುವರೆ ಸಾವಿರ ನಿಗಧಿ ಮಾಡಿರುವುದಾಗಿ ತಿಳಿಸಿದರು.

ಈ ವೇಳೆ ಗ್ರಾಪಂ ಸದಸ್ಯೆ ಚನ್ನಾಜಮ್ಮ, ಮುಖಂಡರಾದ ನಾಗರಾಜು, ಗಿರೀಶ್, ನವೀನ್, ಸಿದ್ದೇಗೌಡ, ಅರವಿಂದ್, ಶಿವಲಿಂಗಯ್ಯ, ಕೆ.ಬಿ.ಶಿವಣ್ಣ, ಸಹಾಯಕ ಕೃಷಿ ನಿರ್ದೇಶಕಿ ಪ್ರತಿಭಾ, ಅಧಿಕಾರಿಗಳಾದ ರೂಪ, ಗವಾಸ್ಕರ್ ಇತರರಿದ್ದರು.

PREV

Recommended Stories

ಬ್ರೇಕ್‌ ಫೇಲಾದ ಬಸ್‌ ಹಿಮ್ಮುಖ ಚಲಿಸಿದ್ದರಿಂದ 6 ಜನರ ಸಾವು
ಬಿಜೆಪಿಗಿಂತ 1 ದಿನ ಮೊದಲೇ ಜೆಡಿಎಸ್‌ ಧರ್ಮಸ್ಥಳ ಯಾತ್ರೆ