ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಹಣ ದುರ್ಬಳಕೆ । ಬಿಜೆಪಿ ಜಿಲ್ಲಾ ಘಟಕದಿಂದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಯಾದಗಿರಿಅಲ್ಪಸಂಖ್ಯಾತರಿಗೆಂದೇ ಬಜೆಟ್‌ನಲ್ಲಿ ಸಾವಿರಾರು ಕೋಟಿ ರು. ಅನುದಾನ ಪ್ರತ್ಯೇಕವಾಗಿ ತೆಗೆದಿರಿಸಲಾಗಿದೆ. ಆದರೂ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಆನುಷ್ಠಾನಕ್ಕೆ ಅದಕ್ಕೆ ಕೈಹಾಕದೆ, ದಲಿತರ ನಿಧಿಗೆ ಕನ್ನ ಹಾಕುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್.ಮಹೇಶ್ ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿದರು.
ನಗರದಲ್ಲಿ ಸೋಮವಾರ ಬಿಜೆಪಿ ಜಿಲ್ಲಾ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕೆಂಬ ಧಾವಂತದಲ್ಲಿ ಕಾಂಗ್ರೆಸ್ ಪಕ್ಷ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಈ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ಅಡಿಯಲ್ಲಿ ಅದರ ಹಣ ಬಳಸುವುದಾಗಿ ಹೇಳಿರಲಿಲ್ಲ. ಆದರೆ, ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಿದ ನಂತರ, ಪರಿಶಿಷ್ಟ ಜಾತಿ ಉಪ ಯೋಜನೆಯ 7718.15 ಕೋಟಿ ರು. ಮತ್ತು ಬುಡಕಟ್ಟು ಉಪ ಯೋಜನೆಯ 3430.85 ಕೋಟಿ ರು. ಒಟ್ಟು 11,144 ಕೋಟಿ ರು.ಗಳನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ದುರ್ಬಳಕೆ ಮಾಡಿಕೊಂಡಿದೆ ಎಂದು ಟೀಕಿಸಿದರು.ಆರಂಭದಲ್ಲಿ ದಲಿತರ ಮೀಸಲು ನಿಧಿಗೆ ಅನೈತಿಕವಾಗಿ ಕೈ ಹಾಕುವಾಗ ಮುಖ್ಯಮಂತ್ರಿಗಳು ಹಿಂಜರಿಕೆ ತೋರ್ಪಡಿಸಿದ್ದರು. ಇದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಸಮಾಜ ಕಲ್ಯಾಣ ಸಚಿವರೂ ಸೇರಿದಂತೆ ಕೆಲ ಸಚಿವರೂ ವಿರೋಧ ವ್ಯಕ್ತಪಡಿಸಿದ್ದರು, ಆದರೆ, ಕೆಲವೇ ತಿಂಗಳಲ್ಲಿ ಸರ್ಕಾರ ಸಂವೇದನೆ ಕಳೆದುಕೊಂಡು ದುರಹಂಕಾರದ ಸ್ಥಿತಿ ತಲುಪಿದೆ ಎಂದು ಕಿಡಿಕಾರಿದರು.
2024ರಲ್ಲಿ ಸರ್ಕಾರ ಎಸ್.ಸಿ.ಪಿ ನಿಧಿಯಿಂದ 9980.66 ಸಾವಿರ ಕೋಟಿ ರು. ಮತ್ತು ಟಿಎಸ್‌ಪಿ ನಿಧಿಯಿಂದ 4302.02 ಸಾವಿರ ಕೋಟಿ ರು. ಸೇರಿ ಒಟ್ಟು 14,282,68 ಸಾವಿರ ಕೋಟಿ ರು.ವನ್ನು ಗ್ಯಾರಂಟಿ ಅನುಷ್ಠಾನಕ್ಕಾಗಿ ದುರ್ಬಳಕೆ ಮಾಡಿಕೊಂಡು, ತಾನು ಮಾಡಿದ್ದೇ ಸರಿ ಎಂದು ವಾದಿಸುತ್ತಿದೆ, ಆದರೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಲ್ಲಿ ಕೇವಲ ಪರಿಶಿಷ್ಟ ಜಾತಿ, ಪಂಗಡದವರು ಮಾತ್ರ ಇಲ್ಲ, ಸವರ್ಣೀಯರು, ಹಿಂದುಳಿದವರು, ಅಲ್ಪಸಂಖ್ಯಾತರು ಎಲ್ಲರೂ ಇದ್ದಾರೆ. ಉಳಿದವರಿಗೆಲ್ಲ ಸರ್ಕಾರ ತನ್ನ ಖಜಾನೆಯಿಂದ ಹಣ ಕೊಡುತ್ತದೆ. ಆದರೆ ಎಸ್ಸಿ, ಎಸ್ಟಿ ಮಂದಿಯ ‘ದಲಿತರ ಮೀಸಲು ನಿಧಿ’ ಗೆ ಕನ್ನ ಹಾಕುತ್ತದೆ. ರಾಜ್ಯದ ಎಲ್ಲ ನಿಗಮಗಳು ಸರ್ಕಾರದ ಹಣಕಾಸಿನ ನೆರವಿಲ್ಲದೆ ಸೊರಗಿವೆ. ಯಾವ ನಿಗಮದಲ್ಲಿಯೂ ಯಾವ ಯೋಜನೆಯೂ ಜಾರಿಯಾಗುತ್ತಿಲ್ಲ. ಸಾರಿಗೆ ಸಂಬಳಕ್ಕೂ ಕಾಸಿಲ್ಲದೆ ದಿವಾಳಿ ಸ್ಥಿತಿಯಿದೆ ಎಂದು ಬೇಸರ ವ್ಯಕ್ತಪಡಿಸಿದರು.ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಈ ಬೇಜವಾಬ್ದಾರಿ, ದಲಿತ ವಿರೋಧಿ ನೀತಿಯನ್ನು ನಾವು ಒಪ್ಪುವುದಿಲ್ಲ. ಸದನದ ಹೊರಗೆ ಮತ್ತು ಒಳಗೆ ನಾವು ಗಂಭೀರ ಹೋರಾಟ ಮಾಡುತ್ತೇವೆ ಎಂದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ದೇವಿಂದ್ರನಾಥ, ಬಿಜೆಪಿ ಹಿರಿಯ ನಾಯಕಿ ನಾಗರತ್ನಾ ಕುಪ್ಪಿ, ಖಂಡಪ್ಪ ದಾಸನ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ಮೇಲಪ್ಪ ಗುಳಗಿ, ಪರುಶುರಾಮ ಕುರಕುಂದಿ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ಸಿದ್ದಣ್ಣಗೌಡ ಕಾಡಂನೊರ, ಶರಣಗೌಡ ಐಕೂರ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಸೊನ್ನದ, ಅಡಿವೆಪ್ಪ ಜಾಕಾ, ಜಿಲ್ಲಾ ಕಾರ್ಯದರ್ಶಿ ಪರ್ವತರಡ್ಡಿ ಬೆಂಡಗುಂಬಳಿ ಮತ್ತು ಮಲ್ಲಿಕಾರ್ಜುನ ಹೊನಿಗೇರಿ, ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಚಂದಪ್ಪ ಕಾವಲಿ ರಾಮಸಮುದ್ರ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುನಿತಾ ಚೌವ್ಹಾಣ್, ಸಿದ್ದಲಿಂಗಪ್ಪ ನಾಯಕ, ನಗರಸಭೆ ಉಪಾಧ್ಯಕ್ಷೆ ರುಕೀಯ ಬೇಗಂ, ಗುರುಮಠಕಲ್ ಮಂಡಲ ಅಧ್ಯಕ್ಷ ನರಸಿಂಹಲು ನೀರೆಟ್ಟಿ, ರಾಜಶೇಖರ್ ಕಾಡಂನೊರ, ಲಿಂಗಪ್ಪ ಹತ್ತಿಮನಿ, ಸಂಗಣ್ಣ ವೈಲಿ ಇದ್ದರು.