ಪರೀಕ್ಷಾ ಪೂರ್ವ ಸಿದ್ಧತೆ ಹೇಗೆ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿದ ಜಯಶ್ರೀ
ಅಧ್ಯಯನಕ್ಕೆ ಕ್ರಮಬದ್ಧತೆ ಅಗತ್ಯ. ಸರಿಯಾಗಿ ಅರ್ಥಮಾಡಿಕೊಂಡು ಓದಿದರೆ ವಿದ್ಯಾರ್ಥಿಗಳಿಗೆ ಏಕಾಗ್ರತೆ ತನ್ನಿಂದ ತಾನೆ ಬರುತ್ತದೆ. ಅಧ್ಯಯನ ಮಾಡುವಾಗ ನಕಾರಾತ್ಮಕ ಭಾವನೆ ಇರಬಾರದು. ಶ್ರದ್ಧೆಯಿಂದ ಓದಿರಿ. ನಿಮ್ಮಲ್ಲಿರುವ ಶಕ್ತಿಯ ಬಗ್ಗೆ ನಂಬಿಕೆ ಇರಲಿ. ಈ ಶ್ರದ್ಧೆಯಿಂದ ವಿದ್ಯಾರ್ಥಿಗಳು ಎಂತಹ ಮಹತ್ಕಾರ್ಯವನ್ನಾದರೂ ಸಾಧಿಸಬಹುದು. ಪರೀಕ್ಷಾ ಪರಿಣಾಮ ಸುಧಾರಣೆಗಾಗಿ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪದ ಕಾರ್ಯ ಅಭಿನಂದನೀಯ ಎಂದರು.
ಹುಬ್ಬಳ್ಳಿ ಗ್ರಾಮೀಣಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿ ಜೀವನದ ಒಳ್ಳೆಯ ತಿರುವು. ಅದು ನಿಮ್ಮ ಮುಂದಿನ ವಿದ್ಯಾಭ್ಯಾಸ ದಿನಗಳನ್ನು ನಿರ್ಧರಿಸುತ್ತದೆ. ಗ್ರಹ ವೇಳಾಪಟ್ಟಿ ಹಾಕಿಕೊಂಡು ಸಮಯದ ಸದ್ಬಳಕೆ ಮಾಡಿಕೊಂಡು ಓದಬೇಕು. ಗುಂಪು ಚರ್ಚೆ, ಪುನರಾವರ್ತನೆ ಮೂಲಕ ಅಧ್ಯಯನ ಮಾಡಿದರೆ ನಿಮ್ಮಲ್ಲಿ ನೆನಪಿನ ಶಕ್ತಿ ವೃದ್ಧಿಸುವುದು. ತಂದೆ, ತಾಯಿ, ಇಲಾಖೆ ಹಾಗೂ ಶಿಕ್ಷಕರು ನಿಮಗಾಗಿ ವ್ಯಯಿಸುತ್ತಿರುವ ಶ್ರಮ ಅರ್ಥಮಾಡಿಕೊಂಡು ಓದಬೇಕು ಎಂದರು.ಧಾರವಾಡ ಡಿಮ್ಹಾನ್ಸ್ ಮನೋವೈದ್ಯಕೀಯ ಸಮಾಜ ಕಾರ್ಯಕರ್ತ ಪ್ರಶಾಂತ ಪಾಟೀಲ ಓದು, ಬರಹ, ಏಕಾಗ್ರತೆ, ಶ್ರದ್ಧೆ, ಆತ್ಮವಿಶ್ವಾಸ ಕಂಠಪಾಠ ಪ್ರವೃತ್ತಿ ಮುಂತಾದ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಉಪ ಪ್ರಾಚಾರ್ಯ ಪ್ರಭು ತಳವಾರ ಹಾಗೂ ಜಾನಪದ ವಿದ್ವಾಂಸ ಡಾ. ರಾಮು ಮೂಲಗಿ ಮಾತನಾಡಿದರು. ಗುರು ಬಾಗಲ್ ಸ್ವಾಗತಿಸಿದರು. ಸಂಚಾಲಕ ವೀರಣ್ಣ ವಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಎನ್. ಬಡ್ಡಿ ನಿರೂಪಿಸಿದರು. ಸಂಜನಾ ಮಟ್ಟಿ ವಂದಿಸಿದರು.