ಗದಗ: ಐತಿಹಾಸಿಕ ದೇಗುಲಗಳ ಗ್ರಾಮವೆಂದೇ ಪ್ರಸಿದ್ಧವಾದ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಇತಿಹಾಸದ ಮರುಶೋಧ ಕಾರ್ಯ ಶನಿವಾರ 2ನೇ ದಿನವೂ ಚುರುಕಿನಿಂದ ಸಾಗಿತು.
ಶನಿವಾರ ಬೆಳಗ್ಗೆ 8 ಗಂಟೆಯಿಂದಲೇ 10 ಚದರ ಮೀಟರ್ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ ಸ್ಥಳದಲ್ಲಿ ಉತ್ಖನನ ಕೆಲಸ ನಡೆಯಿತು. ಕೆಲಸ ಆರಂಭವಾದ ಕೆಲವೇ ಗಂಟೆಗಳಲ್ಲಿ ಶಿವಲಿಂಗದ ಪೀಠ ಹಾಗೂ ಪಾನಿಬಟ್ಟಲು (ನೀರಿನ ಬಟ್ಟಲು) ಮಾದರಿಯ ಪ್ರಾಚೀನ ವಸ್ತುಗಳು ಪತ್ತೆಯಾಗಿವೆ. ಇದು ಸ್ಥಳೀಯರಲ್ಲಿ ಹಾಗೂ ಪುರಾತತ್ವ ಶಾಸ್ತ್ರಜ್ಞರಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಭೂಗರ್ಭದಲ್ಲಿ ಇನ್ನೂ ದೊಡ್ಡ ಮಟ್ಟದ ಐತಿಹಾಸಿಕ ದಾಖಲೆಗಳು, ಶಿಲಾಕೃತಿಗಳು ಇರುವ ಸಾಧ್ಯತೆಯನ್ನು ಪುಷ್ಟೀಕರಿಸಿದೆ.
ಕಾರ್ಯವೈಖರಿ: ಜಿಲ್ಲಾಧಿಕಾರಿ ಮತ್ತು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಎನ್. ಶ್ರೀಧರ್ ಅವರು ಈ ಕಾರ್ಯಕ್ಕೆ ಚಾಲನೆ ನೀಡಿದ್ದು, ಮುಂದಿನ ಎರಡು ತಿಂಗಳ ಕಾಲ ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ. ಒಟ್ಟು 38 ಕಾರ್ಮಿಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಕಾರ್ಮಿಕರಿಗೆ ಸರ್ಕಾರದ ಮಾರ್ಗಸೂಚಿಯಂತೆ ದಿನಕ್ಕೆ ₹374 ಕೂಲಿ ಕೂಡಾ ನಿಗದಿಪಡಿಸಲಾಗಿದೆ.ವೈಜ್ಞಾನಿಕ ವಿಧಾನ: ಕೃಷಿ ಸಹಾಯಕಿಯರ ಮೇಲ್ವಿಚಾರಣೆಯಲ್ಲಿ ಅತ್ಯಂತ ಎಚ್ಚರಿಕೆಯಿಂದ ಹಂತ ಹಂತವಾಗಿ ಮಣ್ಣು ತೆಗೆಯಲಾಗುತ್ತಿದೆ. ಮೊದಲ ದಿನ ನಾಲ್ಕು ಇಂಚಿನಷ್ಟು ತೆಗ್ಗು ತೋಡಲಾಗಿದ್ದು (ಮಣ್ಣನ್ನು ಅಗೆಯಲಾಯಿತು), ಶನಿವಾರ ಆಳಕ್ಕೆ ಹೋದಂತೆ ಅವಶೇಷಗಳು ಸಿಗಲಾರಂಭಿಸಿವೆ. ಇದು ಪ್ರಾರಂಭವಷ್ಟೇ, ಆಳಕ್ಕೆ ಹೋದಂತೆಲ್ಲ ಹೆಚ್ಚು ಶಿಲಾವಸ್ತುಗಳು ಸಿಗುವ ಸಾಧ್ಯತೆ ನಿಚ್ಚಳವಾಗಿದೆ.
ಸಾರ್ವಜನಿಕರಿಗೆ ನಿರ್ಬಂಧ: ಉತ್ಖನನ ನಡೆಯುವ ಪ್ರದೇಶವನ್ನು ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದೆ. ಪುರಾತತ್ವ ಇಲಾಖೆಯ ಶಿಫಾರಸಿನ ಮೇರೆಗೆ ಉತ್ಖನನ ಜಾಗಕ್ಕೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ, ಫೋಟೋ ಮತ್ತು ವಿಡಿಯೋಗ್ರಾಫಿ ಮಾಡುವುದಕ್ಕೂ ತಡೆ ನೀಡಲಾಗಿದೆ. ಕೆಲಸಕ್ಕೆ ಯಾವುದೇ ವ್ಯತ್ಯಯವಾಗಬಾರದು ಎಂಬುದು ನಮ್ಮ ಉದ್ದೇಶ ಎಂದು ಜಿಲ್ಲಾಧಿಕಾರಿ ಹೇಳಿದ್ದು, ಗ್ರಾಮಸ್ಥರಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ.ಸ್ಥಳೀಯರಿಂದ ಅಪಸ್ವರ: ಒಂದೆಡೆ ಉತ್ಖನನದಿಂದ ಇತಿಹಾಸದ ಅನಾವರಣವಾಗುತ್ತಿದ್ದರೆ, ಮತ್ತೊಂದೆಡೆ ದೇವಸ್ಥಾನದ ಭಕ್ತರು ಮತ್ತು ಸ್ಥಳೀಯರಿಂದ ಅಪಸ್ವರ ಕೇಳಿಬರುತ್ತಿದೆ. ನಮ್ಮ ಗ್ರಾಮದಲ್ಲಿ ನಡೆಯುವ ಉತ್ಖನನವನ್ನು ನಾವೇ ನೋಡದೇ ಇರುವುದು ಎಂದರೆ ಹೇಗೆ? ಇದರ ಹಿಂದೆ ಯಾವ ಉದ್ದೇಶ ಅಡಗಿದೆ ಎನ್ನುವುದು ಸ್ಪಷ್ಟವಾಗುತ್ತಿಲ್ಲ. ಸಾಲದೆಂಬಂತೆ ಮುಂಬರುವ ಮಾರ್ಚ್ ತಿಂಗಳಲ್ಲಿ ವೀರಭದ್ರೇಶ್ವರ ಜಾತ್ರೆ ನಡೆಯಲಿದೆ. ಸದ್ಯ ಉತ್ಖನನ ನಡೆಯುತ್ತಿರುವ ಜಾಗದಲ್ಲೇ ಪ್ರತಿವರ್ಷ ಅಗ್ನಿಕುಂಡ ನಿರ್ಮಿಸಲಾಗುತ್ತಿತ್ತು. ದೇವಸ್ಥಾನದ ಕಮಿಟಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಈ ಕೆಲಸ ಆರಂಭಿಸಿರುವುದು ಗ್ರಾಮಸ್ಥರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.ಲಕ್ಕುಂಡಿ ಇತಿಹಾಸಕ್ಕೆ ಹೊಸ ಆಯಾಮ: ಅಪರೂಪದ ಬಂಗಾರದ ಆಭರಣಗಳ ಪತ್ತೆಯಿಂದಾಗಿ ಲಕ್ಕುಂಡಿ ಈಗ ದೇಶದ ಗಮನ ಸೆಳೆದಿದೆ. ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಪ್ರಾರಂಭವಾಗಬೇಕು ಎನ್ನುವ ಕೂಗು ಹಲವಾರು ವರ್ಷಗಳಿಂದ ಕೇಳಿ ಬರುತ್ತಿತ್ತು. ಉತ್ಖನನ ಆರಂಭವಾದ 2ನೇ ದಿನವಾದ ಶನಿವಾರವೇ ಪತ್ತೆಯಾಗಿರುವ ಪೀಠದ ಮಾದರಿಯ ಅವಶೇಷಗಳು ಲಕ್ಕುಂಡಿಯ ಇತಿಹಾಸಕ್ಕೆ ಹೊಸ ಆಯಾಮ ನೀಡುವ ಸೂಚನೆ ನೀಡುತ್ತಿವೆ. ಆದರೆ, ಇತಿಹಾಸದ ಸಂರಕ್ಷಣೆ ಮತ್ತು ಜನರ ಧಾರ್ಮಿಕ ನಂಬಿಕೆಗಳ ನಡುವಿನ ಈ ಸಂಘರ್ಷವನ್ನು ಜಿಲ್ಲಾಡಳಿತ ಹೇಗೆ ಬಗೆಹರಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.