ಅತಿವೃಷ್ಟಿಯಿಂದ ಗೋವಿನಜೋಳಕ್ಕೆ ಕೊಳೆರೋಗ

KannadaprabhaNewsNetwork | Published : Aug 18, 2024 1:53 AM

ಸಾರಾಂಶ

ಈ ಬಾರಿ ವಿಪರೀತ ಮಳೆಯಾದ ಪರಿಣಾಮ ಮುಂಡಗೋಡ ತಾಲೂಕಿನ ಬಹುತೇಕ ಕಡೆ ಗೋವಿನಜೋಳ ಬೆಳೆಗೆ ಕೊಳೆರೋಗ ತಗುಲಿದ್ದು, ಬೆಳೆಗಾರರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ.

ಸಂತೋಷ ದೈವಜ್ಞ

ಮುಂಡಗೋಡ: ಈ ಬಾರಿ ವಿಪರೀತ ಮಳೆಯಾದ ಪರಿಣಾಮ ತಾಲೂಕಿನ ಬಹುತೇಕ ಕಡೆ ಗೋವಿನಜೋಳ ಬೆಳೆಗೆ ಕೊಳೆರೋಗ ತಗುಲಿದ್ದು, ಬೆಳೆಗಾರರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಕಳೆದ ವರ್ಷ ಮಳೆ ಕಡಿಮೆಯಾಗಿದ್ದರಿಂದ ಒಳ್ಳೆಯ ಫಸಲು ಪಡೆದು ಲಾಭ ಗಳಿಸಿದ ರೈತರು ಅದನ್ನೇ ಗಮನದಲ್ಲಿಟ್ಟುಕೊಂಡು ಈ ಬಾರಿ ರೈತರು ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಗೋವಿನಜೋಳ ಬಿತ್ತನೆ ಮಾಡಿದ್ದರು. ಆದರೆ ಈ ಬಾರಿ ನಿರಂತರ ಮಳೆಯಿಂದಾಗಿ ಗದ್ದೆಯಲ್ಲಿ ನೀರು ಸಂಗ್ರಹವಾಗಿ ತೇವಾಂಶ ಹೆಚ್ಚಿದ ಪರಿಣಾಮ ಗೋವಿನಜೋಳ ಬೆಳೆಗೆ ಕೊಳೆರೋಗ ಕಾಣಿಸಿಕೊಂಡು ಬೆಳೆ ಕುಂಠಿತವಾಗಿದೆ. ಗೋವಿನಜೋಳ ಬೆಳೆಗಾರರು ನಷ್ಟ ಅನುಭವಿಸಿದ್ದು, ಗೋವಿನಜೋಳ ಬೆಳೆದ ರೈತರು ಕೈಸುಟ್ಟುಕೊಂಡಿದ್ದಾರೆ. ಇದರಿಂದ ಭಾರಿ ನಿರೀಕ್ಷೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಗೋವಿನಜೋಳ ಬೆಳೆದ ರೈತರಿಗೆ ನಿರಾಸೆಯನ್ನುಂಟು ಮಾಡಿದೆ. ಮಳೆ ಪ್ರಮಾಣ ಹೆಚ್ಚು: ಪ್ರಸಕ್ತ ಸಾಲಿನಲ್ಲಿ ಜ. ೧ರಿಂದ ಈವರೆಗೆ ತಾಲೂಕಿನಲ್ಲಿ ೧೨೫೦ ಮಿಮೀ ಮಳೆಯಾಗಿದ್ದು, ವಾಡಿಕೆಗಿಂತ ಸುಮಾರು ೩೦೦ ಮಿಮೀ ಮಳೆ ಜಾಸ್ತಿಯಾಗಿದೆ. ಕಳೆದ ವರ್ಷ ಈ ವೇಳೆಗೆ ಕೇವಲ ೭೫೦ ಮಿಮೀ ಮಳೆಯಾಗಿತ್ತು.

ತಾಲೂಕಿನಲ್ಲಿ ಯಾವುದೇ ನೀರಾವರಿ ಯೋಜನೆ ಇಲ್ಲದಿರುವುದರಿಂದ ಇಲ್ಲಿಯ ಬಹುತೇಕ ರೈತರು ಮಳೆಯಾಶ್ರಿತವಾಗಿ ವ್ಯವಸಾಯ ಮಾಡುತ್ತಾರೆ. ಭತ್ತ ಪ್ರಧಾನ ಪ್ರದೇಶವಾಗಿರುವ ತಾಲೂಕಿನಲ್ಲಿ ಮೊದಲೆಲ್ಲ ಶೇ. ೮೦ರಷ್ಟು ಭೂಮಿಯಲ್ಲಿ ಭತ್ತ ಬೆಳೆಯಲಾಗುತ್ತಿತ್ತು. ಇತ್ತೀಚಿನ ಕೆಲವು ವರ್ಷಗಳಿಂದ ಮಳೆ ಕಡಿಮೆಯಾಗಿ ಅನಾವೃಷ್ಟಿಯಿಂದ ಭತ್ತದ ಬೆಳೆಯುವ ಪ್ರಮಾಣ ಕುಂಠಿತವಾಗಿದೆ. ರೈತರು ಗೋವಿನಜೋಳ ಬೆಳೆಯತ್ತ ಮುಖ ಮಾಡಿದ್ದಾರೆ.

ಕಳೆದ ೭- ೮ ವರ್ಷಗಳ ಈಚೆಗೆ ಮಳೆ ಕಡಿಮೆಯಾಗುತ್ತ ಬಂದಿದ್ದರಿಂದ ಬಹುತೇಕ ರೈತರು ಭತ್ತವನ್ನು ಬಿಟ್ಟು ಗೋವಿನಜೋಳ ಬೆಳೆಯಲು ಮುಂದಾಗುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಗೋವಿನ ಜೋಳದ ಬಿತ್ತನೆ ಪ್ರಮಾಣ ಜಾಸ್ತಿಯಾಗುತ್ತಿದೆ. ಕಡಿಮೆ ಮಳೆ ಹಾಗೂ ಖರ್ಚಿನಲ್ಲಿ ಹೆಚ್ಚಿನ ಲಾಭ ಕೂಡ ಸಿಗಲಾರಂಭಿಸಿದ್ದರಿಂದ ಬಹುತೇಕ ರೈತರು ಭತ್ತಕ್ಕೆ ಪರ್ಯಾಯವಾಗಿ ಗೋವಿನಜೋಳ ಬೆಳೆಯುವಲ್ಲಿ ಆಸಕ್ತಿ ವಹಿಸಿದ್ದಾರೆ.

ತಾಲೂಕಿನಲ್ಲಿ ಬರೋಬರಿ ೫೦೦೦ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಗೋವಿನಜೋಳ ಬೆಳೆಯಲಾಗಿದೆ. ಭತ್ತದ ಕಣಜ ಎಂದೇ ಪ್ರಖ್ಯಾತಿ ಹೊಂದಿದ್ದ ಮುಂಡಗೋಡ ತಾಲೂಕಿನಲ್ಲಿ ಮೊದಲು ೧೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದ ಭತ್ತದ ಬೆಳೆ ಕೇವಲ ೬೦೦೦ ಹೆಕ್ಟೇರ್‌ಗೆ ಇಳಿದಿದೆ.

ಮಳೆ ಹೆಚ್ಚಿದ್ದರಿಂದ ಭತ್ತದ ಗದ್ದೆ, ತೆಗ್ಗು ಪ್ರದೇಶ ಹಾಗೂ ತಡವಾಗಿ ಬಿತ್ತನೆ ಮಾಡಲಾದ ಗೋವಿನಜೋಳ ಬೆಳೆಗೆ ತೇವಾಂಶ ಹೆಚ್ಚಿದ ಪರಿಣಾಮ ಕೊಳೆರೋಗ ಕಾಣಿಸಿಕೊಂಡಿದೆ. ಈ ಬಗ್ಗೆ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯ ಕ್ಷೇತ್ರ ಸಿಬ್ಬಂದಿಯಿಂದ ಸಮೀಕ್ಷೆ ನಡೆಸಲಾಗುತ್ತಿದ್ದು, ಪರಿಶೀಲನೆ ನಡೆಸಿ ನೈಜವಾಗಿ ಹಾನಿಗೊಳಗಾದ ಅರ್ಹ ರೈತರಿಗೆ ಪರಿಹಾರ ಒದಗಿಸಲಾಗುವುದು ಎಂದು ಮುಂಡಗೋಡ ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ ಹೇಳಿದರು.

ಭಾರಿ ನಿರೀಕ್ಷೆಯಿಂದ ಗೋವಿನಜೋಳ ಬೆಳೆಯಲಾಗಿತ್ತು. ಈ ಬಾರಿ ಮಳೆ ಹೆಚ್ಚಾಗಿದ್ದರಿಂದ ಕೊಳೆರೋಗ ತಗುಲಿ ಗೋವಿನಜೋಳ ಬೆಳವಣಿಗೆ ಆಗದೆ ಬೆಳೆ ಸಂಪೂರ್ಣ ಕುಂಠಿತವಾಗಿದೆ. ಇದರಿಂದ ದಿಕ್ಕು ತೋಚದಂತಾಗಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ರೈತ ಮಲ್ಲಿಕಾರ್ಜುನ ಗೌಳಿ ಹೇಳಿದರು.

Share this article