ಚತುಷ್ಪಥ ಹೆದ್ದಾರಿಗೆ ಅರಣ್ಯ ಇಲಾಖೆಯ ಬಿಗಿ ಕಾನೂನು, ಭಾರಿ ಮಳೆ ನಾಗರಿಕರ ಜೀವಕ್ಕೆ ಉರುಳಾಯ್ತೆ?

KannadaprabhaNewsNetwork | Updated : Jul 26 2024, 01:09 PM IST

ಸಾರಾಂಶ

ಪಶ್ಚಿಮ ಘಟ್ಟದಿಂದ ಆವೃತ್ತವಾದ ಉಕ ಜಿಲ್ಲೆಯ ಕರಾವಳಿ ಭಾಗದಿಂದ ಹಾದುಹೋಗುವ ಚತುಷ್ಪಥ ಹೆದ್ದಾರಿಗೆ ಅರಣ್ಯ ಇಲಾಖೆಯ ಬಿಗಿ ಕಾನೂನು ಮತ್ತು ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಿದ್ದ ಭಾರಿ ಮಳೆಯು ನಾಗರಿಕರ ಜನಜೀವನಕ್ಕೆ ಉರುಳಾಗಿ ಪರಿಣಮಿಸಿದೆ.

ರಾಘು ಕಾಕರಮಠ

ಅಂಕೋಲಾ: ಪಶ್ಚಿಮ ಘಟ್ಟದಿಂದ ಆವೃತ್ತವಾದ ಉಕ ಜಿಲ್ಲೆಯ ಕರಾವಳಿ ಭಾಗದಿಂದ ಹಾದುಹೋಗುವ ಚತುಷ್ಪಥ ಹೆದ್ದಾರಿಗೆ ಅರಣ್ಯ ಇಲಾಖೆಯ ಬಿಗಿ ಕಾನೂನು ಮತ್ತು ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಬಿದ್ದ ಭಾರಿ ಮಳೆಯು ನಾಗರಿಕರ ಜನಜೀವನಕ್ಕೆ ಉರುಳಾಗಿ ಪರಿಣಮಿಸಿದೆ.

ಒಂದೆಡೆ ಪಶ್ಚಿಮ ಘಟ್ಟ ಉಳಿಯಬೇಕು, ಇನ್ನೊಂದೆಡೆ ಹೆದ್ದಾರಿ ಅಭಿವೃದ್ಧಿಯೂ ಆಗಬೇಕು ಎನ್ನುವುದು ಕೇಂದ್ರ ಸರ್ಕಾರದ ನಿಲುವು. ಆದರೆ ಚತುಷ್ಪಥ ಹೆದ್ದಾರಿ ನಿರ್ಮಾಣ ಪ್ರಕ್ರಿಯೆಯಲ್ಲಿ ರಸ್ತೆಗೆ ಎಷ್ಟು ಜಾಗ ಬೇಕೊ ಅಷ್ಟು ಮಾತ್ರ ಅರಣ್ಯ ಇಲಾಖೆಯು ಎನ್ಎಚ್ಎಐಗೆ(ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ) ನೀಡಿ ಕೈ ತೊಳೆದುಕೊಂಡಿದೆ. ಹೆದ್ದಾರಿ ಪ್ರಾಧಿಕಾರ ಅಣತಿಯಂತೆ ತಲೆಯಾಡಿಸಿಕೊಂಡು ಕಾಮಗಾರಿ ಗುತ್ತಿಗೆ ಪಡೆದಿರುವ ಐಆರ್‌ಬಿ ಕಂಪನಿ ನಿಧಾನಗತಿಯಲ್ಲೆ ಮೀಸಲಿಟ್ಟ ಗಡಿರೇಖೆಯೊಳಗೆ ಕಾಮಗಾರಿ ನಡೆಸಿದೆ.

ಜಾಗ ಕೊಡದ ಅರಣ್ಯ ಇಲಾಖೆ: 2014ರಲ್ಲಿ ಚತುಷ್ಪಥ ಹೆದ್ದಾರಿ ಪ್ರಾರಂಭವಾಗುವ ವೇಳೆ ತನ್ನ ಗಡಿ ರೇಖೆಯನ್ನು ಗುರುತಿಸಿಕೊಟ್ಟು ಇದರಲ್ಲೆ ಕಾಮಗಾರಿ ನಡೆಸಲು ಅರಣ್ಯ ಇಲಾಖೆಯು ಎನ್ಎಚ್ಎಐಗೆ ಆದೇಶ ನೀಡಿದೆ. ಆದರೆ ಬೆಟ್ಟದ ಇಳಿಜಾರು ಪ್ರದೇಶಗಳಲ್ಲಿ ಗುಡ್ಡವನ್ನು ಕೊರೆಯುವುದರಿಂದ ಮುಂದಾಗುವ ಅನಾಹುತ ಯಾವುದೆಂಬ ಚಿಂತನೆಯನ್ನು ಮಾಡದ ಅರಣ್ಯ ಇಲಾಖೆ, ಪಶ್ಚಿಮ ಘಟ್ಟದ ಬಿಗಿ ಕಾನೂನಿನ ನೆಪವನ್ನು ಹೇಳಿ ಒಂದು ಇಂಚು ಜಾಗವನ್ನು ಹೆಚ್ಚುವರಿಯಾಗಿ ನೀಡಲಿಲ್ಲ.

ಇಚ್ಛಾಶಕ್ತಿಯ ಕೊರತೆ: ಎನ್ಎಚ್ಎಐ ಅರಣ್ಯ ಇಲಾಖೆಯಿಂದ ಕೇವಲ ರಸ್ತೆ ನಿರ್ಮಿಸಲು ಅವಶ್ಯವಿರುವ ಸ್ಥಳವನ್ನು ಮಾತ್ರ ಪಡೆದು ಕಾಮಗಾರಿ ನಡೆಸಲು ಐಆರ್‌ಬಿಗೆ ಅನುಮತಿ ನೀಡಿದೆ. ಹೆದ್ದಾರಿ ಗಡಿಯಿಂದ ಬೆಟ್ಟದ ಇಳಿಜಾರುಗಳಲ್ಲಿ ಕಾಮಗಾರಿ ವೇಳೆ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಎನ್ಎಚ್ಎಐ ಚಿಂತಿಸದಿರುವುದು ಕಂಡುಬಂದಿದೆ. ಆದರೆ ಗುಡ್ಡವನ್ನು ಸುರಕ್ಷತೆಯ ದೃಷ್ಟಿಯಿಂದ ನಿಗದಿತ ಅಂತರದಲ್ಲಿ ಮೆಟ್ಟಿಲಾಕೃತಿಯಲ್ಲಿ ನಿರ್ಮಿಸಲು ಅರಣ್ಯ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸಿ ಕೈತೊಳೆದುಕೊಂಡಿದೆ. ಹೆಚ್ಚುವರಿ ಅರಣ್ಯ ಪ್ರದೇಶದ ಸಾಧೀನಕ್ಕೆ ಎನ್ಎಚ್ಎಐ ಅರಣ್ಯ ಇಲಾಖೆಗೆ ಒತ್ತಡ ಹಾಕುವಲ್ಲಿ ವಿಫಲವಾಗಿದೆ ಎಂಬ ಆರೋಪವು ಎನ್ಎಚ್ಎಐ ಮೇಲಿದೆ.

ನಿಧಾನಗತಿಯ ಕಾಮಗಾರಿ: ಚತುಷ್ಪಥ ಹೆದ್ದಾರಿ ನಿರ್ಮಿಸಲು ಗುತ್ತಿಗೆ ಪಡೆದಿರುವ ಐಆರ್‌ಬಿ ಕಂಪನಿ 11 ವರ್ಷದಿಂದ ಕಾಮಗಾರಿ ನಡೆಸುತ್ತಲೆ ಇದೆ. ಕಾಮಗಾರಿಯನ್ನು ಚುರುಕಿನಿಂದ ಕೈಗೊಳ್ಳಲು ಐಆರ್‌ಬಿ ವಿಫಲವಾಗಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೆದ್ದಾರಿಗೆ ಬೇಕಾದ ಭೂಸ್ವಾಧೀನ ಪ್ರಕ್ರಿಯೆ ಇನ್ನು ಕೂಡ ಬಾಕಿ ಉಳಿದಿದ್ದರಿಂದ ಕಾಮಗಾರಿಗೆ ತೊಡಕಾಗಿದೆ ಎಂದು ಗೊತ್ತಾಗಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಶಿರೂರಿನ ಗುಡ್ಡ ಕುಸಿತ ಪ್ರದೇಶಕ್ಕೆ ಆಗಮಿಸಿದ್ದ ವೇಳೆ, ಅರಣ್ಯ ಇಲಾಖೆ ತನ್ನ ಗಡಿ ರೇಖೆಯನ್ನು ಹಾಕಿರುವುದರಿಂದ ಗುತ್ತಿಗೆ ನಿರ್ವಹಿಸುವ ಕಂಪನಿಗೆ ಅದನ್ನು ದಾಟಿ ಹೋಗಲಾರದೆ ಲಂಬ ಕೋನಾಕೃತಿಯಲ್ಲಿ ಗುಡ್ಡವನ್ನು ಕೊರೆಯಬೇಕಾಯಿತು. ಇನ್ನು ಅವಕಾಶ ನೀಡಿದ್ದರೆ ಮೆಟ್ಟಿಲಾಕೃತಿಯಲ್ಲಿ ಗುಡ್ಡ ಕೊರೆಯಬಹುದಿತ್ತು. ಆದರೆ ಅರಣ್ಯ ಇಲಾಖೆಗೆ ತನ್ನದೆ ಆದ ಕಾನೂನು ಇರುತ್ತದೆ. ಪಶ್ಚಿಮ ಘಟ್ಟದ ಅಂಚಿನಲ್ಲಿ ಅಭಿವೃದ್ಧಿಯಾಗಬೇಕಾದರೆ ಕಠಿಣವಾದ ಷರತ್ತು ಇರುತ್ತದೆ. ಹಾಗಾಗಿ ಅರಣ್ಯ ಇಲಾಖೆಯಿಂದಲೂ ಕೆಲವೊಂದು ತಪ್ಪುಗಳಾಗಿವೆ. ಈ ಬಗ್ಗೆ ಕೇಂದ್ರ ಮಟ್ಟದಲ್ಲೆ ನಿರ್ಣಯದ ಮಂಡನೆಯಾಗಬೇಕು. ಈ ಬಗ್ಗೆ ಪ್ರಧಾನಿಯವರ ಬಳಿ ವಿಷಯದ ಗಂಭೀರತೆಯನ್ನು ತಿಳಿಸಿ ಈ ಸಮಸ್ಯೆಯ ಪರಿಹಾರೋಪಾಯಕ್ಕೆ ಪ್ರಯತ್ನಿಸುತ್ತೇನೆ ಎಂದಿದ್ದರು.

ಜತೆಗೆ ಇದರಲ್ಲಿ ಕೇವಲ ರಾಷ್ಟ್ರೀಯ ಹೆದ್ದಾರಿ ಗುತ್ತಿಗೆ ನಿರ್ವಹಿಸುವ ಕಂಪನಿಯಿಂದ ಮಾತ್ರ ತಪ್ಪಾಗಿದೆ ಎನ್ನುವ ತೀರ್ಮಾನಕ್ಕೆ ಬರುವುದು ಸರಿಯಲ್ಲ. ರಾಜ್ಯದ ಹಲವಾರು ಕಡೆ ಗುಡ್ಡ ಕುಸಿತ ಪ್ರಕರಣಗಳಾಗಿದೆ. ಎಲ್ಲ ವಿಷಯಗಳ ಕುರಿತು ಆಳ ಅಧ್ಯಯನ ಅಗತ್ಯವಾಗಿದೆ ಎಂದು ಹೇಳಿಕೆ ನೀಡಿದ್ದರು.

ಮಾನವ ಸಂಕುಲ ಉಳಿವಿಗೆ ಚಿಂತಿಸಲಿ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಗ್ಗೂಡಿ ಸಮಸ್ಯೆಯನ್ನು ಪರಿಹರಿಸಿ ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತರುವಂತಾಗಬೇಕು. ಸರ್ಕಾರ ಅರಣ್ಯ ಉಳಿಸುವಲ್ಲಿ ಅಷ್ಟೇ ಅಲ್ಲ, ಮಾನವ ಸಂಕುಲ ಉಳಿವಿಗೂ ಚಿಂತಿಸಬೇಕಿದೆ. ಕೇವಲ ರಸ್ತೆ ಮಾಡಲಾಗಿದೆ. ಆದರೆ ಮುಂದಾಗುವ ಅನಾಹುತದ ಬಗ್ಗೆ ಅರಣ್ಯ ಇಲಾಖೆಯಾಗಲಿ, ಎನ್ಎಚ್ಎಐ ಆಗಲಿ ಚಿಂತಿಸದೇ ಇರುವುದು ದುರದೃಷ್ಟಕರ ಎಂದು ನ್ಯಾಯವಾದಿ ಉಮೇಶ ನಾಯ್ಕ ತಿಳಿಸಿದರು.

ಅಧಿಕ ಮಳೆ: ವರ್ಷಪ್ರತಿಯಂತೆ ಜುಲೈ ತಿಂಗಳಲ್ಲಿ ಬೀಳಬೇಕಾದ ವಾಡಿಕೆ ಮಳೆ(1200 ಮಿಮೀ)ಗಿಂತ ಈ ವರ್ಷ ದುಪ್ಪಟ್ಟು ಮಳೆಯಾಗಿದೆ. ಕಳೆದ ವರ್ಷ ಜುಲೈನಲ್ಲಿ 1300 ಮಿಮೀ ಮಳೆಯಾಗಿತ್ತು. ಆದರೆ ಈ ವರ್ಷ ಜುಲೈನ ಕೇವಲ 25 ದಿನದಲ್ಲೆ 2157 ಮಿಮೀ ಮಳೆಯಾಗಿದೆ. 900 ಮಿಮೀ ಹೆಚ್ಚಿನ ಮಳೆಯಾಗಿ ಪ್ರಕೃತಿಗೂ ಸವಾಲಾಗಿ ಪರಿಗಣಿಸಿದೆ.

Share this article