ಸಾರಾಂಶ
ಬುಕರ್ ಪ್ರಶಸ್ತಿ ವಿಜೇತೆ, ಸಾಹಿತಿ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆಗೆ ಆಗಮಿಸುವ ವೇಳೆ ಅವರಿಂದ 2023ರಲ್ಲಿ ವೇದಿಕೆಯೊಂದರಲ್ಲಿ ನಡೆದ ಘಟನೆ ಮರುಕಳಿಸಬಾರದು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
ಬೆಂಗಳೂರು: ಬುಕರ್ ಪ್ರಶಸ್ತಿ ವಿಜೇತೆ, ಸಾಹಿತಿ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆಗೆ ಆಗಮಿಸುವ ವೇಳೆ ಅವರಿಂದ 2023ರಲ್ಲಿ ವೇದಿಕೆಯೊಂದರಲ್ಲಿ ನಡೆದ ಘಟನೆ ಮರುಕಳಿಸಬಾರದು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಗಣೇಶ ಉತ್ಸವದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮುಷ್ತಾಕ್ ಅವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಬಗ್ಗೆ ಭಿನ್ನಾಭಿಪ್ರಾಯ ಇಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸಿದ್ದೇವೆ. ಆದರೆ, ಮುಸ್ಲಿಂ ಮಹಿಳೆಯರಿಗೆ ಅವರದೇ ಧಾರ್ಮಿಕ ಸ್ಥಳದಲ್ಲಿ ಪ್ರವೇಶವಿಲ್ಲದ ವ್ಯವಸ್ಥೆ ಇದೆ. ನಮ್ಮ ಧಾರ್ಮಿಕ ವ್ಯವಸ್ಥೆಯಲ್ಲಿ ಅವರಿಗೆ ಅತ್ಯಂತ ಒಳ್ಳೆಯ ರೀತಿಯಲ್ಲಿ ಸ್ವಾಗತ ಮಾಡುತ್ತಿರುವುದು ಭಾರತೀಯ ಧರ್ಮದ ಬಹುತ್ವದ ಪ್ರತೀಕ ಎಂದರು.
ಅವರ ಸಾಹಿತ್ಯ ಕೊಡುಗೆ ಬಗ್ಗೆ ಭಿನ್ನಭಿಪ್ರಾಯವಿಲ್ಲ
ರಾಜ್ಯದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಕುರಿತು ಪ್ರಶ್ನೆಗೆ, ಇವಿಎಂ ಮೂಲಕ ದೇಶದಲ್ಲಿ ಪಾರದರ್ಶಕ ಚುನಾವಣೆ ನಡೆಯುತ್ತಿದೆ. ಹೀಗಿರುವಾಗ, ಇವಿಎಂ ವಿರುದ್ಧ ಕಾಂಗ್ರೆಸ್ ಹೋರಾಟ ಬರೀ ಜನರ ದಿಕ್ಕು ತಪ್ಪಿಸಲು, ಅಪಪ್ರಚಾರ ಮಾಡಲು ಮತ್ತು ಅವರದೇ ಆದ ನಿರೂಪಣೆ ಸೃಷ್ಟಿಸಲು ಮಾಡಿರುವ ಪ್ರಯತ್ನ.
ಕೆಲ ಕಡೆ ಕಾಂಗ್ರೆಸ್ ಮತ್ತು ಮಿತ್ರಪಕ್ಷದವರು ಕೂಡ ಚುನಾವಣೆಯಲ್ಲಿ ಗೆದ್ದಿದ್ದಾರೆ. ಅದೇ ರೀತಿ ದೇಶದ ಹಲವೆಡೆ ಚುನಾವಣೆಗಳಲ್ಲಿ ಸೋತಿರುವ ಕಾಂಗ್ರೆಸ್ ಪಕ್ಷದ ನಾಯಕರು ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಒಡೆಯರ್ ಹೇಳಿದರು.