ವಚನಗಳು ಸರಳಗನ್ನಡದಲ್ಲಿ, ಆಡುಭಾಷೆಯಲ್ಲಿ, ಮುಕ್ತ ಛಂದಸ್ಸಿನಲ್ಲಿ, ನೇರ ಹಾಗೂ ಮಾರ್ಮಿಕ ಶೈಲಿಯಲ್ಲಿ ರಚಿತವಾದ, ಜೀವನ್ಮುಖಿಯಾದ, ಬದುಕಿಗೆ ಸೂಕ್ತವಾದ ಮಾರ್ಗದರ್ಶನ
ಕನ್ನಡಪ್ರಭ ವಾರ್ತೆ ಮೈಸೂರು
ಹಾಡಿದೊಡೆ ಎನ್ನೊಡೆಯನ ಹಾಡುವೆ ಎಂದು ಪಾಡನ್ನೇ ಹಾಡ ಹೊರಟು, ಕೂಡಲ ಸಂಗಮದೇವ ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ ಎಂದು ವಿಶ್ವಮಾನವರಾಗಿ ಹಾಡಿದ ಬಸವಾದಿ ಪ್ರಮಥರ ವಚನ ಸಾಹಿತ್ಯದಲ್ಲಿ ಅದ್ಭುತವಾದ ಜೀವನ ದರ್ಶನವಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕದ ಅಧ್ಯಕ್ಷ ಜಯಪ್ಪ ಹೊನ್ನಾಳಿ ಹೇಳಿದರು.ನಗರದ ಜೆಎಸ್ಎಸ್ ಆಸ್ಪತ್ರೆ ಆವರಣದಲ್ಲಿನ ಶ್ರೀ ರಾಜೇಂದ್ರ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕ ಹಾಗೂ ಕದಳಿ ವೇದಿಕೆ ಸಂಯಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಚನ ಗಾಯನ ಸ್ಪರ್ಧೆ ಸಮಾರಂಭ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಚನಗಳು ಸರಳಗನ್ನಡದಲ್ಲಿ, ಆಡುಭಾಷೆಯಲ್ಲಿ, ಮುಕ್ತ ಛಂದಸ್ಸಿನಲ್ಲಿ, ನೇರ ಹಾಗೂ ಮಾರ್ಮಿಕ ಶೈಲಿಯಲ್ಲಿ ರಚಿತವಾದ, ಜೀವನ್ಮುಖಿಯಾದ, ಬದುಕಿಗೆ ಸೂಕ್ತವಾದ ಮಾರ್ಗದರ್ಶನ ಮಾಡಬಹುದಾದ, ಅನನ್ಯವೂ ಅಪೂರ್ವವೂ ಆದ ಸಾಹಿತ್ಯವಾಗಿವೆ ಎಂದು ತಿಳಿಸಿದರು.ಕರ್ನಾಟಕ ಕಲಾಶ್ರೀ ಪುರಸ್ಕೃತ ಗಾಯಕ ಪ್ರೊ.ಎಸ್. ಮಲ್ಲಣ್ಣ ಜ್ಯೋತಿ ಬೆಳಗಿಸಿ ಸುಶ್ರಾವ್ಯವಾಗಿ ವಚನ ಗಾಯನ ಮಾಡುವ ಮೂಲಕ ಸಮಾರಂಭ ಉದ್ಘಾಟಿಸಿದರು.
ವೀಣಾ ಮುದ್ದುಮಲ್ಲೇಶ್ ತಂಡದವರು ಪ್ರಾರ್ಥಿಸಿದರು. ಕದಳಿ ವೇದಿಕೆ ಅಧ್ಯಕ್ಷೆ ಶೋಭಾರಾಣಿ ಜೈಪ್ರಕಾಶ್ ಸ್ವಾಗತಿಸಿದರು. ಪರಿಷತ್ತಿನ ಖಜಾಂಚಿ ಮುದ್ದುಮಲ್ಲೇಶ್ ಉದ್ಘಾಟಕರನ್ನು ಪರಿಚಯಿಸಿದರು. ಗೀತಾ ಈಶ್ವರ್, ಸದಾಶಿವ, ಮಲ್ಲಿಕಾ ಮಹದೇವಸ್ವಾಮಿ ಅವರು ದತ್ತಿದಾನಿಗಳ ಪರಿಚಯ ಮಾಡಿಕೊಟ್ಟರು.ವಚನ ಗಾಯನ ನಿರ್ವಹಣೆಯನ್ನು ಗೀತಾ ರಾಜಶೇಖರ್ ನೆರವೇರಿಸಿದರೆ, ತೀರ್ಪುಗಾರರಾಗಿ ಆಕಾಶವಾಣಿ ಕಲಾವಿದರಾದ ಶಶಿಕಲಾ ಚಂದ್ರಶೇಖರ ಹಾಗೂ ಎಂ.ಎನ್. ನಾಗನಂದಿನಿ ಕರ್ತವ್ಯ ನಿರ್ವಹಿಸಿದರು. ದತ್ತಿ ದಾಸೋಹಿಗಳಾದ ಪಿ. ಪುಟ್ಟರಾಜಪ್ಪ, ಪಿ. ಶಾಂತಕುಮಾರ್, ನಂಜುಂಡಸ್ವಾಮಿ ಇದ್ದರು.
ಶೈಲಾ ನಾಗರಾಜ್ ನಿರೂಪಿಸಿದರು. ಪರಿಷತ್ತಿನ ಕಾರ್ಯದರ್ಶಿ ಬಿ.ಎನ್. ನಂದೀಶ್ವರ ಸಭೆ ನಿರ್ವಹಿಸಿದರು. ಡಾ.ಎಚ್.ಎನ್. ಲೋಕೇಶಪ್ಪ ವಂದಿಸಿದರು.ಪ್ರಥಮ ಸ್ಥಾನ ಐದು ಸಾವಿರ ರೂ. ಬಹುಮಾನವನ್ನು ಮಹಾಲಕ್ಷ್ಮಿ ಬಳಗ, ದ್ವಿತೀಯ ಸ್ಥಾನ ನಾಲ್ಕು ಸಾವಿರ ರೂ. ನಗದನ್ನು ಅರಿವಿನ ಮನೆ ಬಳಗ, ತೃತೀಯ ಸ್ಥಾನ ಮೂರು ಸಾವಿರ ರೂ. ನಗದನ್ನು ನೀಲಗಂಗಾ ಮಹಿಳಾ ಬಳಗ, ಚತುರ್ಥ ಸ್ಥಾನ ಎರಡು ಸಾವಿರ ರೂ. ನಗದನ್ನು ಗೌರೀಶಂಕರ ಬಳಗ, ಐದನೇ ಸ್ಥಾನ ಒಂದು ಸಾವಿರ ರೂ. ನಗದನ್ನು ರಾಜರಾಜೇಶ್ವರಿ ಅಕ್ಕನ ಬಳಗ ಪಡೆಯಿತು.
ಕದಳಿ ಮಹಿಳಾ ವೇದಿಕೆ ಮಾಜಿ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ, ಪರಿಷತ್ತಿನ ಉಪಾಧ್ಯಕ್ಷರಾದ ಚಿನ್ನಸ್ವಾಮಿ, ಎಂ.ಎ. ನೀಲಾಂಬಿಕಾ, ಇತರ ಎಲ್ಲಾ ಪದಾಧಿಕಾರಿಗಳು, ನೂರಾರು ಕದಳಿ ಮಹಿಳಾ ಬಳಗದ ಹಾಗೂ ಬಸವ ಬಳಗದ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.