ಚಿಕ್ಕಮಗಳೂರು : ಅತಿಯಾದ ಮಳೆ ಭೂ ಕುಸಿತಕ್ಕೆ ಕಾರಣ: ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾ ತಜ್ಞರ ವರದಿ

KannadaprabhaNewsNetwork |  
Published : Oct 14, 2024, 01:24 AM ISTUpdated : Oct 14, 2024, 11:41 AM IST
ಬಾಬಾಬುಡನ್‌ ಗಿರಿ ರಸ್ತೆಯಲ್ಲಿರುವ ಕವಿಕಲ್‌ ಗಂಡಿ ಬಳಿ ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾದ ತಜ್ಞರ ತಂಡ ಆಗಸ್ಟ್‌ 10 ರಂದು  ಪರಿಶೀಲನೆ ನಡೆಸಿರುವುದು. | Kannada Prabha

ಸಾರಾಂಶ

ಕಳೆದ 6 ವರ್ಷದ ಹಿಂದೆ ಮೂಡಿಗೆರೆ ತಾಲೂಕು ಸೇರಿ ಜಿಲ್ಲೆಯ ಕೆಲವೆಡೆ ಮಳೆಗಾಲದಲ್ಲಿ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿ ಸಾವು- ನೋವು ಸಂಭವಿಸಿತ್ತು. ಈ ಬಾರಿಯೂ ಕೂಡ ಇಂತಹದ್ದೆ ಪರಿಸ್ಥಿತಿ ನಿರ್ಮಾಣವಾಗುವ ಲಕ್ಷಣ ಕಂಡು ಬಂದಿತ್ತು.

ಆರ್‌. ತಾರಾನಾಥ್‌

  ಚಿಕ್ಕಮಗಳೂರು : ಕಳೆದ 6 ವರ್ಷದ ಹಿಂದೆ ಮೂಡಿಗೆರೆ ತಾಲೂಕು ಸೇರಿ ಜಿಲ್ಲೆಯ ಕೆಲವೆಡೆ ಮಳೆಗಾಲದಲ್ಲಿ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿ ಸಾವು- ನೋವು ಸಂಭವಿಸಿತ್ತು. ಈ ಬಾರಿಯೂ ಕೂಡ ಇಂತಹದ್ದೆ ಪರಿಸ್ಥಿತಿ ನಿರ್ಮಾಣವಾಗುವ ಲಕ್ಷಣ ಕಂಡು ಬಂದಿತ್ತು.

ನೆರೆಯ ಕೇರಳದ ವಯನಾಡಿನಲ್ಲಿ ಬೃಹತ್‌ ಬೆಟ್ಟ ಕುಸಿದು ಅಪಾರ ಸಾವು ಸಂಭವಿಸಿತು. ಜನ ವಸತಿ ಪ್ರದೇಶ ನೀರಿನಲ್ಲಿ ಕೊಚ್ಚಿ ಹೋಯಿತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿರುವ ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾದಲ್ಲಿರುವ ತಜ್ಞರ ತಂಡವನ್ನು ಕರ್ನಾಟಕ ರಾಜ್ಯಕ್ಕೂ ಕಳುಹಿಸಿಕೊಟ್ಟಿತ್ತು. ಎಲ್ಲೆಲ್ಲಿ ಭೂ ಕುಸಿತ ಉಂಟಾಗಿದಿಯೋ, ಇದಕ್ಕೆ ನಿಖರವಾದ ಕಾರಣ ಏನು? ಮುಂದಿನ ದಿನಗಳಲ್ಲಿ ಈ ರೀತಿಯಲ್ಲಿ ಅನಾಹುತ ಆಗದಂತೆ ನೀಡಬಹುದಾದ ಸಲಹೆ ಒಳಗೊಂಡ ವರದಿ ನೀಡುವಂತೆ ಸೂಚನೆ ನೀಡಿತ್ತು.

ಈ ಹಿನ್ನೆಲೆಯಲ್ಲಿ ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾದ ದಕ್ಷಿಣ ವಲಯದ ನಿರ್ದೇಶಕ ಡಾ. ಸಜೀವ್‌ ಹಾಗೂ ಸಹ ಸಿಬ್ಬಂದಿ ಡಿ.ಎಸ್. ರವಿ ಅವರು ಕಳೆದ ಆಗಸ್ಟ್‌ 10ರಿಂದ 3ದಿನಗಳ ಕಾಲ ಚಿಕ್ಕಮಗಳೂರು, ಕಳಸ, ಮೂಡಿಗೆರೆ, ಶೃಂಗೇರಿ ಹಾಗೂ ಕೊಪ್ಪ ತಾಲೂಕು ಸುಮಾರು 15ಕ್ಕೂ ಹೆಚ್ಚು ಭೂ ಕುಸಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ.

ಬಾಬಾಬುಡನ್‌ಗಿರಿ, ಮುಳ್ಳಯ್ಯನಗಿರಿ, ಕೊಪ್ಪ ತಾಲೂಕಿನ ಗುಡ್ಡೆತೋಟ, ಹೊರನಾಡು- ಜಯಪುರ ರಸ್ತೆ, ಬಸರೀಕಟ್ಟೆ, ನಾರ್ವೆ, ಶೃಂಗೇರಿ ಪಟ್ಟಣ, ಕೆರೆಕಟ್ಟೆ, ನೆಮ್ಮಾರ್‌, ಚಾರ್ಮಾಡಿ ಘಾಟ್‌ ರಸ್ತೆಗಳಲ್ಲಿ ಭೂ ಕುಸಿತ ಉಂಟಾಗಿದ್ದು, ಎಲ್ಲಾ ಕಡೆಗಳಲ್ಲಿ ಪ್ರಮುಖವಾಗಿ ಕಂಡು ಬಂದಿರುವುದು ಭಾರೀ ಮಳೆಯಿಂದಾಗಿ ಈ ಅನಾಹುತ ಸಂಭವಿಸಿದೆ ಎಂದು ವರದಿಯಲ್ಲಿ ತಜ್ಞರು ಉಲ್ಲೇಖಿಸಿದ್ದಾರೆ.

ರಸ್ತೆ ಹಾಗೂ ಗುಡ್ಡದ ಇಳಿಜಾರು ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿದೆ. ಕೆಲವೆಡೆ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಮಳೆಯ ನೀರು ಹರಿದು ಹೋಗಲು ಚರಂಡಿ ನಿರ್ಮಾಣ ಮಾಡಿರುವುದಿಲ್ಲ. ರಸ್ತೆ ನಿರ್ಮಾಣಕ್ಕೆ ಬೆಟ್ಟಗಳ ಮಣ್ಣನ್ನು ತೆಗೆಯಲಾಗಿದ್ದು, ಈ ಸಂದರ್ಭದಲ್ಲಿ ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಾಣ ಮಾಡಿಲ್ಲ, ಹಾಗಾಗಿ ನಿರಂತರ ಮಳೆಯ ಸಂದರ್ಭದಲ್ಲಿ ಬೆಟ್ಟದ ಮೇಲೆ ಬೀಳುವ ಮಳೆಯ ನೀರು ಹಾಗೂ ಸಡಿಲವಾದ ಮಣ್ಣಿನೊಂದಿಗೆ ಬೆರೆತು ಭೂ ಕುಸಿತ ಉಂಟಾಗಲು ಕಾರಣವಾಗಿದೆ ಎಂದು ಹೇಳಿದ್ದಾರೆ.

ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಭೂ ಕುಸಿತಕ್ಕೆ ತಡೆ- ಸಲಹೆ

ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್‌ ರಸ್ತೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಆಗಾಗ ಭೂ ಕುಸಿತ ಉಂಟಾಗುತ್ತದೆ. ಈ ಬಾರಿಯೂ ಕೂಡ ಕೆಲವೆಡೆ ಧರೆ ಕುಸಿತ ಉಂಟಾಗಿತ್ತು. ಈ ಸಂಬಂಧ ತಜ್ಞರ ತಂಡ ಈ ಕೆಳಕಂಡ ಕೆಲವು ಸಲಹೆಗಳನ್ನು ನೀಡಿದೆ.

1) ಸ್ಲೈಡ್‌ ಡ್ರೇಪರಿ ಸಿಸ್ಟಮ್‌ ಅಳವಡಿಸಬೇಕು, ಅಂದರೆ ಇಳಿಜಾರಿನ ಅತ್ಯಂತ ದುರ್ಬಲ ಭಾಗಗಳನ್ನು ಗುರುತಿಸಿ ಅಲ್ಲಿಗೆ ಸ್ಲೈಡ್‌ ಡ್ರೇಪರಿ ಸ್ಲೋಪ್‌ ಸಿಸ್ಟಮ್‌ ಅಳವಡಿಸಬೇಕು. ಈ ತಂತ್ರವು ಇಳಿಜಾರಿನ ಮೇಲ್ಮೈಯನ್ನು ಸವೆತವನ್ನು ನಿಯಂತ್ರಿಸಲು, ಇಳಿಜಾರಿನ ಸ್ಥಿರತೆಯನ್ನು ಹೆಚ್ಚಿಸಲು ಮತ್ತು ನೀರಿನ ಹರಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಭೂ ಕುಸಿತಗಳಿಗೆ ಒಳಗಾಗುವ ಪ್ರದೇಶಗಳಲ್ಲಿ ಇದು ವಿಶೇಷವಾಗಿ ಪರಿಣಾಮಕಾರಿಯಾಗಿರುತ್ತದೆ.

2) - ರಾಕ್‌ ಸ್ಕೇಲಿಂಗ್‌ ಮತ್ತು ಸ್ಥೀರಿಕರಣ, ನಿಯಮಿತವಾಗಿ ಇಳಿಜಾರನ್ನು ಪರೀಕ್ಷಿಸಿ ಮತ್ತು ರಾಕ್‌ ಸ್ಕೇಲಿಂಗ್‌ ತಂತ್ರಗಳನ್ನು ಬಳಸಿಕೊಂಡು ಸಡಿಲವಾದ ಅಥವಾ ಅಸ್ಥಿರವಾದ ಬಂಡೆಯ ತುಣುಕುಗಳನ್ನು ತೆಗೆದು ಹಾಕಲು, ಅಪಾಯಕಾರಿ ಬಂಡೆಗಳನ್ನು ಹೊರ ಹಾಕಲು ಮತ್ತು ತೆಗೆದು ಹಾಕಲು ಸಹಕಾರಿಯಾಗಲಿದೆ. ಕಲ್ಲು ಬೀಳುವ ಹಾಗೂ ಹೆಚ್ಚಿನ ಅಪಾಯ ಇರುವ ಪ್ರದೇಶಗಳಲ್ಲಿ ಎಚ್ಚರಿಕೆ ಚಿಹ್ನೆಗಳನ್ನು ಮತ್ತು ಭೌತಿಕ ತಡೆಗಳನ್ನು ಸ್ಥಾಪಿಸಬೇಕು,

3) ಮೇಲ್ಮೈ ಹರಿವನ್ನು ಕಡಿಮೆ ಮಾಡಲು, ನೀರಿನ ಹರಿವನ್ನು ನಿರ್ವಹಿಸಲು ಮತ್ತು ಇಳಿಜಾರಿನ ಸ್ಥಿರತೆಯನ್ನು ಹೆಚ್ಚಿಸಲು ಲೈನಿಂಗ್‌ ಟೋ ಡ್ರೈನ್‌ ಅನ್ನು ನಿರ್ಮಿಸಬೇಕು. ಆಯಕಟ್ಟಿನ ರೀತಿಯಲ್ಲಿ ಕಲ್ವರ್ಟ್‌ಗಳನ್ನು ಇರಿಸಿ, ಪರಿಣಾಮಕಾರಿ ನೀರಿನ ನಿರ್ವಹಣೆ ಮತ್ತು ಇಳಿಜಾರು ಸ್ಥಿರೀಕರಣಕ್ಕೆ ಇದು, ನಿರ್ಣಯಕವಾಗಲಿದೆ.

4) ಮಳೆಗಾಲದಲ್ಲಿ ಜಲಪಾತಗಳ ಸಮೀಪವಿರುವ ಪ್ರದೇಶಗಳನ್ನು ತಡೆ ರಹಿತ ವಲಯಗಳಾಗಿ ಗೊತ್ತು ಪಡಿಸಿ, ನೀರು- ಸಂಬಂಧಿತ ಅಪಾಯಗಳನ್ನು ಕಡಿಮೆ ಮಾಡಲು ಸ್ಪಷ್ಟ ಸಂಚಾರ ನಿಯಮಗಳನ್ನು ಅಳವಡಿಸಿ ಮತ್ತು ಅವುಗಳನ್ನು ಜಾರಿಗೊಳಿಸಬೇಕು.ಬಾಬಾಬುಡನ್‌ ಗಿರಿ ರಸ್ತೆಯಲ್ಲಿರುವ ಕವಿಕಲ್‌ ಗಂಡಿ ಬಳಿ ಜಿಯೋಲಾಜಿಕಲ್‌ ಸರ್ವೆ ಆಫ್‌ ಇಂಡಿಯಾದ ತಜ್ಞರ ತಂಡ ಪರಿಶೀಲನೆ ನಡೆಸುತ್ತಿರುವುದು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌