ಹಳೇ ಪ್ರಕರಣಗಳ ಆರೋಪಿಗಳ ಮನೆಗಳಲ್ಲಿ ತಲಾಶ್ । ಕಳ್ಳಭಟ್ಟಿ ತಯಾರಿಕೆ ಬಗ್ಗೆ ಜಾಗೃತಿ, ಸೂಚನೆಕನ್ನಡಪ್ರಭ ವಾರ್ತೆ ಚಾಮರಾಜನಗರ
ತಮಿಳುನಾಡಿನಲ್ಲಿ ಕಳ್ಳಭಟ್ಟಿ ದುರಂತದಲ್ಲಿ ಹಲವರು ಸಾವನ್ನಪ್ಪಿದ ಹಿನ್ನೆಲೆ ಗಡಿಜಿಲ್ಲೆಯಲ್ಲಿ ಅಬಕಾರಿ ಅಧಿಕಾರಿಗಳು ಹಳೇ ಅಡ್ಡೆಗಳಿಗೆ ದಾಳಿ ಮಾಡಿದ್ದು ಮಾತ್ರವಲ್ಲದೆ, ಹಳೇ ಪ್ರಕರಣಗಳ ಆರೋಪಿಗಳ ಮನೆಗಳಲ್ಲಿ ತಲಾಶ್ ನಡೆಸುವ ಜೊತೆಗೆ ಕಳ್ಳಭಟ್ಟಿ ತಯಾರಿಕೆ ಬಗ್ಗೆ ಜಾಗೃತಿ ಮೂಡಿಸಿ, ಇಂಥ ಪ್ರಕರಣಗಳು ಕಂಡು ಬಂದರೆ ತಕ್ಷಣ ಮಾಹಿತಿ ನೀಡುವಂತೆ ಸೂಚನೆಯನ್ನು ಕೊಟ್ಟಿದ್ದಾರೆ.ಅಬಕಾರಿ ಉಪ ಆಯುಕ್ತ ನಾಗಶಯನ ಮಾರ್ಗದರ್ಶನದಲ್ಲಿ ಉಪ ಅಧೀಕ್ಷಕ ಮೋಹನ್‌ಕುಮಾರ್, ಇನ್ಸ್‌ಪೆಕ್ಟರ್‌ಗಳಾದ ಸುನೀಲ್, ಉಮಾಶಂಕರ್, ಸುರೇಶ್, ಹನೂರು ಪೊಲೀಸ್ ಇನ್ಸ್‌ಪೆಕ್ಟರ್ ಮನೋಜ್‌ಕುಮಾರ್ ಹಾಗೂ ಸಿಬ್ಬಂದಿಗಳು ಚಾಮರಾಜನಗರ ತಾಲೂಕಿನ ಮೂಕನಪಾಳ್ಯ ಗ್ರಾಮದ ಹಳೇ ಆರೋಪಿಗಳ ಮನೆ ಹಾಗೂ ಕಳ್ಳಭಟ್ಟಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಯಾವುದೇ ಅಕ್ರಮಗಳು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡಿದ್ದಾರೆ. ಹಳೇ ಆರೋಪಿಗಳ ಮನೆಗಳ ಮೇಲೆ ದಾಳಿ ಮಾಡಿದ ಪೊಲೀಸರು ಯಾವುದೇ ರೀತಿಯ ಕಳ್ಳಭಟ್ಟಿ ತಯಾರಿಸದಂತೆ ಗ್ರಾಮಸ್ಥರಿಗೆ ತಿಳುವಳಿಕೆ ಹೇಳಿದ್ದಾರೆ.ಅಬಕಾರಿ ಉಪ ಅಧೀಕ್ಷಕ ನಾಗಶಯನ ಮಾಹಿತಿ ನೀಡಿ, ಈಗಾಗಲೇ ಚಾಮರಾಜನಗರ ಜಿಲ್ಲೆಯಲ್ಲಿ ಕಳ್ಳಭಟ್ಟಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗಿದೆ. ತಮಿಳುನಾಡಿನಲ್ಲಿ ನಡೆದ ದುರಂತದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ದಿಢೀರ್ ಪರಿಶೀಲನೆ ನಡೆಸಿದ್ದು, ಯಾವುದೇ ರೀತಿ ಕಳ್ಳಭಟ್ಟಿ ಪ್ರಕರಣ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ. ಹನೂರು ತಾಲೂಕಿನ ಗ್ರಾಮಗಳಲ್ಲಿ ತಪಾಸಣೆ
ಕನ್ನಡಪ್ರಭ ವಾರ್ತೆ ಹನೂರು
ತಮಿಳುನಾಡಿನಲ್ಲಿ ಕಳ್ಳಭಟ್ಟಿ ದುರಂತ ಹಿನ್ನಲೆ ಗಡಿ ಭಾಗದ ಹನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಬಕಾರಿ ಪೊಲೀಸರಿಂದ ತಪಾಸಣೆ ನಡೆಯಿತು..ತಮಿಳುನಾಡಿನ ಕಳ್ಳ ಕುರುಚಿ ಜಿಲ್ಲೆಯ ಗ್ರಾಮ ಒಂದರಲ್ಲಿ ನಕಲಿ ಮದ್ಯ ಸೇವನೆ ಮಾಡಿ 35 ಜನರು ಸಾವನ್ನಪ್ಪಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಗಡಿ ಗ್ರಾಮಗಳಾದ ತಾಲೂಕಿನ ಕೊತ್ತ ಗುಳಿ ವೀರನಾಯಕನ ದೊಡ್ಡಿ, ಮಾರಳ್ಳಿ, ಸಾಹೇಬರದೊಡ್ಡಿ, ಕಾಂಚಳ್ಳಿ, ದೊಮ್ಮನ ಗದ್ದೆ ಸೇರಿದಂತೆ ವಿವಿಧ ಕಾಡಂಚಿನ ಬೆಟ್ಟಗುಡ್ಡಗಳ ನಡುವೆ ಇರುವ ಗ್ರಾಮಗಳಲ್ಲಿ ಮತ್ತು ಹಳೆ ಆರೋಪಿಗಳ ಮನೆಗಳಿಗೆ ಅಬಕಾರಿ ಇಲಾಖೆ ಪೊಲೀಸರು ಭೇಟಿ ನೀಡಿ ಯಾವುದೇ ರೀತಿಯ ಭಟ್ಟಿ ತಯಾರಿಸದಂತೆ ತಿಳಿವಳಿಕೆ ನೀಡುವ ಮೂಲಕ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಅಬಕಾರಿ ಜಿಲ್ಲಾ ಡಿಸಿ ನಾಗಶಯನ ಹಾಗೂ ತಾಲೂಕು ಮಟ್ಟದ ಪೊಲೀಸ್ ಅಧಿಕಾರಿಗಳು ಕಳ್ಳಭಟ್ಟಿಯನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ ಹೀಗಾಗಿ ಎಚ್ಚರಿಕೆ ವಹಿಸುವಂತೆ ಗ್ರಾಮಗಳಲ್ಲಿ ನಿವಾಸಿಗಳಿಗೆ ತಿಳಿವಳಿಕೆ ನೀಡಿದರು.