ನಗರದ ಶ್ರೀ ಗುರು ಮಹಾಲಿಂಗೇಶ್ವರ ಜಾತ್ರೆಯ ನಿಮಿತ್ತ ಸೋಮವಾರ ಸ್ಥಳೀಯ ಮಹಾತ್ಮ ಗಾಂಧಿ ಕ್ರೀಡಾಂಗಣದ ಕುಸ್ತಿ ಮೈದಾನದಲ್ಲಿ ನಡೆದ ರಾಷ್ಟ್ರಮಟ್ಟದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಯಲ್ಲಿ ಕಂಡು ಬಂದ ದೃಶ್ಯಗಳಿವು.
ಹರಿಯಾಣ ಕೇಸರಿ ವೀರೇಂದ್ರ ಪೈ ಅವರನ್ನು ಚಿತ್ ಮಾಡಿದ ಮಹಾರಾಷ್ಟ್ರದ ಸಿಕಂದರ್ ಪೈ ಶೇಖ ಆಕರ್ಷಕ ಬಹುಮಾನ ಮತ್ತು ಟ್ರೋಫಿ ಗೆದ್ದುಕೊಂಡರು. ದಾವಣಗೆರೆಯ ಕಾರ್ತಿಕ ಪೈ ಕಾಟೆ ಹರಿಯಾಣದ ಹರೀಶ ಕುಮಾರ ಅವರಿಗೆ ಸೋಲಿನ ರುಚಿ ತೋರಿಸಿದರು. ಕರ್ನಾಟಕ ಕಂಠೀರವ ಪೈ ಶಿವಯ್ಯ ಪೂಜಾರಿ ಮತ್ತು ಕುರುಡೆವಾಡಿಯ ಅಬುಬಕರ ಚೌಸ ನಡುವಿನ ಕುಸ್ತಿ ಸಮಬಲವಾಯಿತು. ಕೊಲ್ಲಾಪುರದ ನಾಗರಾಜ ಬಸಿಡೊನಿ ಪಂಜಾಬದ ಪ್ರದೀಪಸಿಂಗ ಪೈ ಅವರನ್ನು ಸೋಲಿಸಿ ಗೊಡಗೇರಿ ತಾಲೂಕಿನ ಪ್ರಕಾಶ ಇಂಗಳೆ ಗೆಲುವಿನ ನಗೆ ಬೀರಿದರು.
೫೦ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ಕುಸ್ತಿ ಪ್ರದರ್ಶಿಸಿದರು. ಖ್ಯಾತ ಕುಸ್ತಿ ಪಟುಗಳು ಅಕಾಡದಲ್ಲಿ ತೋಡೆ ತಟ್ಟಿ ಸೆಡ್ಡು ಹೊಡೆದು ಮದಗಜಗಳಂತೆ ಸೆಣಸಾಡುತ್ತಿದ್ದರೆ, ಇತ್ತ ಪ್ರೇಕ್ಷಕರು ಸಿಳ್ಳೆ, ಕುಗಾಟ, ಜೈಕಾರ, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಿದ್ದರು. ಸಾವಿರಾರು ಜನ ಹೆಚ್ಚಿನ ಸಂಖ್ಯೆಯಲ್ಲಿ ಕುಸ್ತಿ ಪ್ರೇಮಿಗಳು ಪಂದ್ಯಾವಳಿ ವೀಕ್ಷಿಸಿದರು. ಕುಸ್ತಿ ಪಂದ್ಯಾವಳಿಗೆ ಚಾಲನೆ: ಇದಕ್ಕೂ ಮುಂಚೆ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾತನಾಡಿ,ಕ್ರೀಡೆಗಳು ಮನುಷ್ಯನನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳಿಸುತ್ತವೆ. ಅದರಲ್ಲೂ ಕುಸ್ತಿ ಸದೃಢ ವ್ಯಕ್ತಿಗಳ ಸೆನಸಾಟ. ಜನರಿಗೆ ರೋಮಾಂಚನ ನೀಡುವ ಆಟ. ಹಾಗಾಗಿ ದೇಶೀಯ ಕ್ರೀಡೆಗಳಿಗೆ ಮಹತ್ವ ನೀಡುವುದರ ಜೊತೆಗೆ ಕ್ರೀಡಾ ಪ್ರತಿಭೆಗಳನ್ನು ಹೊರ ತನ್ನಿ ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.