ರೋಚಕ ರಕ್ಷಣಾ ಕಾರ್ಯಾಚರಣೆ : ಹೆಲಿಕಾಪ್ಟರ್‌ನ ಹಗ್ಗದ ಮೂಲಕ ಸಮುದ್ರಕ್ಕಿಳಿದು ಕೋಸ್ಟ್‌ ಗಾರ್ಡ್‌ ಕ್ಷಮತೆ ಪ್ರದರ್ಶನ

KannadaprabhaNewsNetwork |  
Published : Feb 02, 2025, 11:48 PM ISTUpdated : Feb 03, 2025, 09:13 AM IST
ಕೋಸ್ಟ್‌ ಗಾರ್ಡ್‌ ಅಣಕು ಪ್ರದರ್ಶನವನ್ನು ವೀಕ್ಷಿಸುತ್ತಿರುವ ರಾಜ್ಯಪಾಲ. | Kannada Prabha

ಸಾರಾಂಶ

ಕಡಲ ಗಸ್ತು, ಕಡಲಿನಲ್ಲಿ ಅನಾಹುತಗಳ ನಿರ್ವಹಣೆ, ನಾಗರಿಕರ ರಕ್ಷಣೆಯ ಜವಾಬ್ದಾರಿ ಹೊಂದಿರುವ ಕೋಸ್ಟ್‌ ಗಾರ್ಡ್‌ ಸಮುದ್ರದ ಮಧ್ಯೆ ತನ್ನ ಕಾರ್ಯಾಚರಣೆಯ ರೋಚಕ ಅಣಕು ಪ್ರದರ್ಶನ ನೀಡುವುದರೊಂದಿಗೆ ಕಾರ್ಯ ಕ್ಷಮತೆ ಸಾಬೀತುಪಡಿಸಿತು.

 ಮಂಗಳೂರು : ಕಡಲ ಗಸ್ತು, ಕಡಲಿನಲ್ಲಿ ಅನಾಹುತಗಳ ನಿರ್ವಹಣೆ, ನಾಗರಿಕರ ರಕ್ಷಣೆಯ ಜವಾಬ್ದಾರಿ ಹೊಂದಿರುವ ಕೋಸ್ಟ್‌ ಗಾರ್ಡ್‌ ಸಮುದ್ರದ ಮಧ್ಯೆ ತನ್ನ ಕಾರ್ಯಾಚರಣೆಯ ರೋಚಕ ಅಣಕು ಪ್ರದರ್ಶನ ನೀಡುವುದರೊಂದಿಗೆ ಕಾರ್ಯ ಕ್ಷಮತೆ ಸಾಬೀತುಪಡಿಸಿತು.

ಭಾರತೀಯ ಕೋಸ್ಟ್‌ಗಾರ್ಡ್‌ನ 49ನೇ ಸ್ಥಾಪನಾ ದಿನದ ಅಂಗವಾಗಿ ಭಾನುವಾರ ಎನ್ಎಂಪಿಎ ಬಂದರಿನಿಂದ 20 ನಾಟಿಕಲ್‌ ಮೈಲು ದೂರದಲ್ಲಿ ವಿವಿಧ ನೌಕೆಗಳು, ಹೆಲಿಕಾಪ್ಟರ್‌ಗಳನ್ನು ಬಳಸಿ ಕೋಸ್ಟ್‌ ಗಾರ್ಡ್‌ ಸಿಬ್ಬಂದಿ ಮೈನವಿರೇಳಿಸುವ ಕಸರತ್ತು ಪ್ರದರ್ಶಿಸಿದರು.

ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋಥ್‌ ನೌಕೆಯಲ್ಲಿದ್ದುಕೊಂಡೇ ಕೋಸ್ಟ್‌ ಗಾರ್ಡ್‌ನ ಸುಮಾರು 400 ಸಿಬ್ಬಂದಿಯ ಈ ಅಣಕು ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕಡಲ ಗಸ್ತು ಹಡಗು ‘ವರಾಹ’, ಇನ್ನೊಂದು ಹಡಗು ‘ಸಕ್ಷಮ್‌’, ಮೂರು ಫಾಸ್ಟ್‌ ಪ್ಯಾಟ್ರೋಲ್‌ ವೆಸೆಲ್‌ಗಳಾದ ಅಮಾರ್ತ್ಯ, ರಾಜ್‌ದೂತ್‌ ಹಾಗೂ ಸಾವಿತ್ರಿಭಾಯಿ ಫುಲೆ, ಎರಡು ಇಂಟರ್‌ಸೆಪ್ಟರ್‌ ಬೋಟುಗಳು, ‘ಚೇತಕ್‌’ ಹೆಲಿಕಾಪ್ಟರ್‌ ಕಾರ್ಯಾರಣೆಯಲ್ಲಿ ಭಾಗವಹಿಸಿದ್ದವು. ಸಮುದ್ರ ಮಾರ್ಗದ ಮೂಲಕ ಅಕ್ರಮ ಪ್ರವೇಶಕ್ಕೆ ತಡೆ, ಕಡಲುಗಳ್ಳರ ಪತ್ತೆ, ಸಮುದ್ರದಲ್ಲಿ ನಡೆಯುವ ಅವಘಡಗಳು ಹಾಗೂ ನಾಗರಿಕರ ರಕ್ಷಣೆಯ ಕ್ಷಿಪ್ರ ಕಾರ್ಯಾಚರಣೆಗಳನ್ನು ಕೋಸ್ಟ್‌ ಗಾರ್ಡ್‌ ಸಿಬ್ಬಂದಿ ಪ್ರದರ್ಶಿಸಿದರು.

ಭಾರತದ ಸೀಮಾರೇಖೆಯೊಳಗೆ ಅಕ್ರಮವಾಗಿ ಹಡಗು ಪ್ರವೇಶ ಮಾಡಿದಾಗ ಅದನ್ನು ಸುತ್ತುವರಿದು ಎಚ್ಚರಿಕೆಯ ಗುಂಡುಗಳನ್ನು ಹಾರಿಸಿ ವಶಕ್ಕೆ ಪಡೆಯುವ ಕಾರ್ಯಾಚರಣೆ ಆರಂಭದಲ್ಲಿ ನಡೆಯಿತು. ಸಮುದ್ರ ನಡುವೆ ಬೋಟ್‌ಗಳು ತೊಂದರೆಗೆ ಸಿಲುಕಿದಾಗ ಕ್ಷಿಪ್ರಗತಿಯಲ್ಲಿ ಸಾಗಿ ರಕ್ಷಣೆ ಮಾಡುವುದು, ಗಸ್ತು ಹಡಗಿನಲ್ಲಿರುವ- ಸಿಬ್ಬಂದಿ ಸಹಿತ ‘ಲೈಫ್‌ ರಾಫ್ಟ್‌’ಗಳನ್ನು ಸಮುದ್ರಕ್ಕಿಳಿಸಿ ಅವುಗಳ ಮೂಲಕ ರಕ್ಷಣಾ ಕಾರ್ಯಾಚರಣೆ, ಹೆಲಿಕಾಪ್ಟರ್‌ನ ಹಗ್ಗದ ಮೂಲಕ ಸಮುದ್ರಕ್ಕಿಳಿದು ರಕ್ಷಣೆ, ಇವೆಲ್ಲದರ ಜತೆಗೆ ನೌಕಾ ಫಿರಂಗಿಗಳಿಂದ ನಡೆದ ಫೈರಿಂಗ್‌ ದೃಶ್ಯ ರೋಚಕವಾಗಿತ್ತು.

ರಾಜ್ಯಪಾಲ ರೊಂದಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಆಗ್ರವಾಲ್‌, ಕೋಸ್ಟ್‌ ಗಾರ್ಡ್‌-3 ಡಿಐಜಿ ಪಿ.ಕೆ. ಮಿಶ್ರಾ ಇದ್ದರು. ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌ ಕೂಡ ಗಸ್ತು ಹಡಗು ‘ವರಾಹ’ಕ್ಕೆ ಬಂದು ರಾಜ್ಯಪಾಲರ ಜತೆ ಕೋಸ್ಟ್‌ಗಾರ್ಡ್‌ ಅಧಿಕಾರಿ, ಸಿಬ್ಬಂದಿಯಿಂದ ಗೌರವ ರಕ್ಷೆ ಸ್ವೀಕರಿಸಿ ನಿರ್ಗಮಿಸಿದರು.

PREV

Recommended Stories

ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥ ಸಂಚಲನ ಶಾಂತಿಯುತ
ವಲಸಿಗರಿಂದ ಗ್ರಾಮೀಣ ಭಾಗದ ಕಾರ್ಮಿಕರಿಗೂ ಸಂಕಷ್ಟ