ಸೀಗುವಾನಿ ಭದ್ರಾ ಹಿನ್ನೀರಿನ ತಟದಲ್ಲಿ ಜೀಪ್‌ನ ರೋಮಾಂಚಕ ಸ್ಪರ್ಧೆ

KannadaprabhaNewsNetwork | Published : Jun 16, 2024 1:48 AM

ಸಾರಾಂಶ

ನರಸಿಂಹರಾಜಪುರ, ತಾಲೂಕಿನ ಸೀಗುವಾನಿ ಗ್ರಾಮದ ಭದ್ರಾ ಹಿನ್ನೀರಿನ ತಟದಲ್ಲಿ ಶನಿವಾರ ಎನ್‌.ಆರ್.ಪುರ ಅಡ್ವೆಂಚರ್ ಅಂಡ್‌ ಮೋಟಾರ್‌ ಸ್ಪೋಟ್ಸ್ ಕ್ಲಬ್‌ ಆಯೋಜನೆ ಮಾಡಿದ್ದ ರಾಜ್ಯ ಮಟ್ಟದ ಮಡ್ ಟಸ್ಕರ್ -24 ಪೋರ್ ವೀಲ್‌ ಜೀಪಿನ ರೇಸ್ ನ್ನು ಸಾವಿರಾರು ಜನರು ಹರ್ಷೋದ್ಗಾರದಿಂದ ವೀಕ್ಷಿಸಿದರು.

- ಮಡ್ ಟಸ್ಕರ್ -24 । ಎನ್‌.ಆರ್‌.ಪುರ ಅಡ್ವೆಂಚರ್‌ ಅಂಡ್‌ ಮೋಟಾರ್‌ ಸ್ಪೋರ್ಟ್ಸ್ ಕ್ಲಬ್ ಆಯೋಜನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಸೀಗುವಾನಿ ಗ್ರಾಮದ ಭದ್ರಾ ಹಿನ್ನೀರಿನ ತಟದಲ್ಲಿ ಶನಿವಾರ ಎನ್‌.ಆರ್.ಪುರ ಅಡ್ವೆಂಚರ್ ಅಂಡ್‌ ಮೋಟಾರ್‌ ಸ್ಪೋಟ್ಸ್ ಕ್ಲಬ್‌ ಆಯೋಜನೆ ಮಾಡಿದ್ದ ರಾಜ್ಯ ಮಟ್ಟದ ಮಡ್ ಟಸ್ಕರ್ -24 ಪೋರ್ ವೀಲ್‌ ಜೀಪಿನ ರೇಸ್ ನ್ನು ಸಾವಿರಾರು ಜನರು ಹರ್ಷೋದ್ಗಾರದಿಂದ ವೀಕ್ಷಿಸಿದರು.

ತಮಿಳು ನಾಡು, ಕೇರಳ ರಾಜ್ಯ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳ ಜೀಪ್‌ ಸವಾರರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಹೊಂಡ, ಗುಂಡಿ, ಕೆಸರು ಜಾಗದಲ್ಲಿ 500 ಮೀಟರ್‌ ಉದ್ದದ ಟ್ರ್ಯಾಕ್‌ ಸಿದ್ದಪಡಿಸಲಾಗಿತ್ತು. ಸ್ಪರ್ಧೆಯಲ್ಲಿ . ಓಪನ್‌ ಕ್ಲಾಸ್‌, ಸ್ಟಾಕ್‌ ಪೆಟ್ರೋಲ್‌ ಕ್ಲಾಸ್‌, ಸ್ಟಾಕ್ ಡೀಸೆಲ್‌ ಕ್ಲಾಸ್‌ ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕವಾಗಿ 4 ವಿಭಾಗ ಮಾಡಲಾಗಿತ್ತು.

ಒಂದು ಜೀಪಿನ ನಂತರ ಒಂದು ಜೀಪನ್ನು ಸ್ಪರ್ಧೆಗೆ ಬಿಡಲಾಗಿತ್ತು. ಹೊಂಡ, ಗುಂಡಿಗಳಲ್ಲಿ ವೇಗವಾಗಿ ನುಗ್ಗಿ ಬರುವ ಜೀಪಿನ ರೇಸ್‌ ನೋಡುಗರಲ್ಲಿ ರೋಮಾಂಚನ ಉಂಟು ಮಾಡುತ್ತಿತ್ತು. ಸಾವಿರಾರು ಜನರು ಭದ್ರಾ ತಟದಲ್ಲಿ ಸೇರಿ ಸ್ಪರ್ಧೆ ವೀಕ್ಷಿಸಿ ಹರ್ಷೋದ್ಗಾರ ಮಾಡಿ ಸ್ಪರ್ಧಿಗಳಿಗೆ ಹುರಿದುಂಬಿಸಿದರು.

ಬೆಳಿಗ್ಗೆ ಶಾಸಕ ಟಿ.ಡಿ.ರಾಜೇಗೌಡ ಹಸಿರು ನಿಶಾನೆ ತೋರಿ ಮಡ್ ಟಸ್ಕರ್ -24 ಪೋರ್‌ ವೀಲ್ ಜೀಪು ರೇಸ್ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಎನ್‌.ಆರ್‌.ಪುರ ಅಡ್ವೆಂಚರ್ ಅಂಡ್‌ ಮೋಟಾರ್‌ ಸ್ಪೋರ್ಟ್ಸ್ ಕ್ಲಬ್‌ ನ ಅಧ್ಯಕ್ಷ ಇತಿಹಾಸ್ ಖಾಂಡ್ಯ, ಕಾರ್ಯದರ್ಶಿ ಶ್ರೀ ದತ್ತ, ಖಜಾಂಚಿ ರಜತ್ ಗೌಡ, ನಿರ್ದೇಶಕ ದೇವಂತರಾಜ್‌, ಸದಸ್ಯರಾದ ರಿತಿನ್‌ ಪೌಲ್‌, ಗೌತಮ್‌, ಇಂಡಿಯನ್‌ ಮೋಟಾರ್‌ ಸ್ಪೋರ್ಟ್ ಕ್ಲಬ್‌ ಅಧ್ಯಕ್ಷ ಮೂಸಾ ಷರೀಫ್‌ ಹಾಗೂ ಕ್ಲಬ್ ಸದಸ್ಯರು ಸಹಕಾರ ನೀಡಿದರು. ಭದ್ರತೆಗಾಗಿ ಮಾರ್ಷಲ್ ಗಳು ಹಾಗೂ ಪೊಲೀಸರು ಇದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಆ್ಯಂಬುಲೆನ್ಸ್‌ ಸಿದ್ಧವಾಗಿಡಲಾಗಿತ್ತು. ನೂರಾರು ಕಾರ್ಯಕರ್ತರು ಸ್ಪರ್ಧೆ ಯಶಸ್ಸಿಗಾಗಿ ಕೆಲಸ ಮಾಡಿದರು.

ಬಹುಮಾನ ವಿತರಣೆ:

ಓಪನ್ ಕ್ಲಾಸ್‌ ವಿಭಾಗದಲ್ಲಿ ಪ್ರಥಮ ಬಹುಮಾನ 1 ಲಕ್ಷ ಹಾಗೂ ಟ್ರೋಫಿಯನ್ನು ಕೊಡಗಿನ ಚೇತನ್‌ ಚಂಗಪ್ಪ ಹಾಗೂ ಮಯೂರ್‌ ಬೋಪಯ್ಯ ಪಡೆದರು. ದ್ವಿತೀಯ ಬಹುಮಾನ 50 ಸಾವಿರ ,ಆಕರ್ಷಕ ಟ್ರೋಪಿಯನ್ನುಕೇರಳ ಮೂಲದ ಡಾ.ಮಹಮ್ಮದ್‌ ಷಹಾದ್‌ ಹಾಗೂ ರಾಜೀವ್ ಲಾಲ್‌ ಪಡೆದರು. ತೃತೀಯ ಬಹುಮಾನ 30 ಸಾವಿರವನ್ನು ಕೇರಳದ ಮೆಹಬೂಬ್‌. ಕೆ ಹಾಗೂ ಷಪಿ ಪಡೆದುಕೊಂಡರು.

ಸ್ಟಾಕ್‌ ಡೀಸೆಲ್ ಕ್ಲಾಸ್ ವಿಭಾಗದಲ್ಲಿ ಪ್ರಥಮ ಬಹುಮಾನ 50 ಸಾವಿರ ರು., ಟ್ರೋಫಿಯನ್ನು ಹಾಸನದ ವಿನಯಕುಮಾರ್‌ ಹಾಗೂ ವಿಕ್ರಂ ಪಡೆದರು.ದ್ವಿತೀಯ ಬಹುಮಾನ 25 ಸಾವಿರ, ಟ್ರೋಪಿಯನ್ನು ಕೊಡಗಿನ ಅಭಿಷೇಕ್‌ ಉತ್ತಪ್ಪ ಹಾಗೂ ಸೋನು ಪೊನ್ನಣ್ಣ, ತೃತೀಯ ಬಹುಮಾನ 15 ಸಾವಿರ ರು.ವನ್ನು ಕೊಡಗಿನ ಅಪ್ಪಣ್ಣ ಬಿ.ಕೆ. ಹಾಗೂ ಶಮಂತ್ ಜೈನ್ ಪಡೆದುಕೊಂಡರು.

ಸ್ಟಾಕ್‌ ಪೆಟ್ರೋಲ್ ಕ್ಲಾಸ್‌ ವಿಭಾಗದಲ್ಲಿ ಪ್ರಥಮ ಬಹುಮಾನ 50 ಸಾವಿರ ರು.ಗಳನ್ನು ಕೇರಳದ ಮಹಮ್ಮದ್‌ ದಾನಿಶ್‌ ಹಾಗೂ ಜಾಫಜ್‌ , ದ್ವಿತೀಯ ಬಹುಮಾನ 25 ಸಾವಿರ ರು.ವನ್ನು ಕೇರಳದ ರೆಬಿಲ್‌ ಕೋಮ ಹಾಗೂ ಜಮ್ಜೀದ್ ಪಡೆದರೆ, ತೃತೀಯ ಬಹುಮಾನಕ್ಕೆ ಪ್ರದೀಪ್‌ ಹಾಗೂ ಗೌತಮ್ ಪಾತ್ರರಾದರು.

ಲೇಡೀಸ್‌ ಕ್ಲಾಸ್‌ ನಲ್ಲಿ ಪ್ರಥಮ ಬಹುಮಾನವನ್ನು ಬೆಂಗಳೂರಿನ ಮೀನಾ ಶ್ರೀಕಾಂತ್‌ ಹಾಗೂ ದ್ವಿತೀಯ ಬಹುಮಾವನನ್ನು ಸಹನ ಶೆಟ್ಟಿ ಗಳಿಸಿದರು.

Share this article