ನಿತ್ಯದ ಜೀವನದಲ್ಲಿ ವ್ಯಾಯಾಮ ಅತೀ ಮುಖ್ಯ: ಡಾ. ಈಶ್ವರ ಚಾಲನೆ

KannadaprabhaNewsNetwork |  
Published : Dec 01, 2024, 01:35 AM IST
ಹುಬ್ಬಳ್ಳಿಯಲ್ಲಿ ಹು-ಧಾ ಪೊಲೀಸ್ ಆಯುಕ್ತಾಲಯ ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಹು-ಧಾ ಮಹಾನಗರ ಪಾಲಿಕೆಯ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಪ್ರತಿದಿನ ಒತ್ತಡದ ನಡುವೆ ಕಾರ್ಯ ನಿರ್ವಹಿಸುತ್ತಿರುತ್ತೇವೆ. ಒತ್ತಡ ನಿವಾರಣೆ ಹಾಗೂ ಸದೃಢ ಆರೋಗ್ಯ ಹೊಂದಲು ದಿನನಿತ್ಯದ ಜೀವನದಲ್ಲಿ ವ್ಯಾಯಾಮ ಅತೀ ಅವಶ್ಯಕ ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.

ಹುಬ್ಬಳ್ಳಿ: ಪ್ರತಿದಿನ ಒತ್ತಡದ ನಡುವೆ ಕಾರ್ಯ ನಿರ್ವಹಿಸುತ್ತಿರುತ್ತೇವೆ. ಒತ್ತಡ ನಿವಾರಣೆ ಹಾಗೂ ಸದೃಢ ಆರೋಗ್ಯ ಹೊಂದಲು ದಿನನಿತ್ಯದ ಜೀವನದಲ್ಲಿ ವ್ಯಾಯಾಮ ಅತೀ ಅವಶ್ಯಕ ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.

ಇಂದು ಇಲ್ಲಿನ ಕಾರವಾರ ರಸ್ತೆಯ ಹಳೆಯ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಹು-ಧಾ ಪೊಲೀಸ್ ಆಯುಕ್ತಾಲಯ ಘಟಕದ ವತಿಯಿಂದ ಶನಿವಾರ ಆಯೋಜಿಸಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಪೊಲೀಸರು ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಹೀಗಾಗಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಕ್ರೀಡೆಗಳು ಸಹಾಯಕವಾಗಿವೆ. ನಿತ್ಯ ವ್ಯಾಯಾಮಕ್ಕೆ ಒತ್ತು ನೀಡಬೇಕಾಗಿದೆ. ಯಾವುದಾದರೂ ಒಂದು ಕ್ರೀಡೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸದೃಢರಾದಾಗ ಮಾತ್ರ ಉತ್ತಮ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.

ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ. ಸಂತೋಷಕುಮಾರ ಬಿರಾದಾರ ಮಾತನಾಡಿ, ಕ್ರೀಡಾ ಸ್ಫೂರ್ತಿ ಮೆರೆಯಲು ಕ್ರೀಡಾಕೂಟ ಉತ್ತಮ ವೇದಿಕೆಯಾಗಿದೆ‌. ಕ್ರೀಡಾಕೂಟದಲ್ಲಿ ಭಾಗವಹಿಸಿದ ಹಳೆಯ ನೆನಪುಗಳು ಮರಳಿ ಬರುತ್ತವೆ. ಶಿಸ್ತುಬದ್ಧವಾಗಿ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಪೊಲೀಸರು ಕ್ರೀಡಾಕೂಟದಲ್ಲಿ ಭಾಗವಹಿಸುವುದರ ಮೂಲಕ ಸದೃಢರಾಗಬೇಕು. ಜೀವನ ಶೈಲಿ ಬದಲಾವಣೆಗೆ ಕ್ರೀಡೆ ಸಹಕಾರಿಯಾಗಿದೆ. ಎಲ್ಲರೂ ಕ್ರೀಡಾ ಮನೋಭಾವದಿಂದ ಭಾಗವಹಿಸುವಂತೆ ಕರೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ ಮಾತನಾಡಿ, ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಉತ್ತಮ ಮೆರುಗು ತರಲಾಗಿದೆ. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ. ಪೊಲೀಸರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಕಡೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು.

ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಎಲ್ಲರ ಮೇಲಿದೆ. ಶ್ರಮವಹಿಸಿ ಕರ್ತವ್ಯ ನಿರ್ವಹಿಸಬೇಕು. ಎರಡು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದೆ. ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸಬೇಕು. ನಿರಂತರ ಪರಿಶ್ರಮದಿಂದ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿದೆ. ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಕಳೆದ ಬಾರಿ ಪುರುಷರ ವಿಭಾಗದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದ ವೆಂಕಟೇಶ ನಾಯ್ಕ ಅವರು ಕ್ರೀಡಾ ಜ್ಯೋತಿಯನ್ನು ಅತಿಥಿಗಳಿಗೆ ಹಸ್ತಾಂತರಿಸಿದರು. ಆರ್‌‌ಪಿಐ ಮಾರುತಿ ಹೆಗಡೆ ಅವರ ಮುಂದಾಳತ್ವದಲ್ಲಿ ಉತ್ತರ ವಿಭಾಗ, ದಕ್ಷಿಣ ವಿಭಾಗ, ಧಾರವಾಡ ವಿಭಾಗ, ಮಹಿಳಾ ವಿಭಾಗ, ಸಂಚಾರಿ ವಿಭಾಗ ಮತ್ತು ಸಿ.ಎ.ಆರ್. ವಿಭಾಗ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿದವು.

ಈ ವೇಳೆ ಡಿಸಿಪಿ ರವೀಶ ಸಿ.ಆರ್, ಯಲ್ಲಪ್ಪ ಕಾಶಪ್ಪನವರ, ಪಿಟಿಎಸ್ ಪ್ರಾಚಾರ್ಯರಾದ ಎಂ.ಎಂ. ಯಾದವಾಡ, ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಕುಟುಂಬಸ್ಥರು ಪಾಲ್ಗೊಂಡಿದ್ದರು. ಇನ್‌ಸ್ಪೆಕ್ಟರ್ ಮಾರುತಿ ಗುಳ್ಳಾರಿ ನಿರೂಪಿಸಿದರು. ಡಿಸಿಪಿ ಮಹಾನಿಂಗ ನಂದಗಾವಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ