ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಪರಿಶೀಲನೆ : ಬಿಪಿಎಲ್‌ ಕಾರ್ಡ್‌ ಉಳಿವಿಗೆ ಕಸರತ್ತು!

KannadaprabhaNewsNetwork |  
Published : Oct 06, 2025, 02:00 AM IST
4545 | Kannada Prabha

ಸಾರಾಂಶ

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಪರಿಶೀಲನೆಗೆ ಸಲ್ಲಿಸುತ್ತಿರುವ ದಾಖಲೆಗಳನ್ನು ಗಮನಿಸಿದಾಗ ಈ ಅಂಶ ಬೆಳಕಿಗೆ ಬರುತ್ತಿದೆ. ಇದನ್ನು ನೋಡುತ್ತಿದ್ದಂತೆ ಅಧಿಕಾರಿ ವರ್ಗವೇ ಕಕ್ಕಾಬಿಕ್ಕಿಯಾಗುತ್ತಿದ್ದು, ಕಳೆದ ವರ್ಷದ ಐಟಿಆರ್‌ ತಂದುಕೊಡುವಂತೆ ಸೂಚನೆ ನೀಡುತ್ತಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಬಿಪಿಎಲ್‌ ಉಳಿಸಿಕೊಳ್ಳುವ ಹಠಕ್ಕೆ ಬಿದ್ದಿರುವ ಕಾರ್ಡ್‌ದಾರರು, ತಮ್ಮ ಆದಾಯ ಕಡಿತಗೊಳಿಸಿ ಐಟಿಆರ್‌ ಫೈಲ್‌ ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಪರಿಶೀಲನೆಗೆ ಸಲ್ಲಿಸುತ್ತಿರುವ ದಾಖಲೆಗಳನ್ನು ಗಮನಿಸಿದಾಗ ಈ ಅಂಶ ಬೆಳಕಿಗೆ ಬರುತ್ತಿದೆ. ಇದನ್ನು ನೋಡುತ್ತಿದ್ದಂತೆ ಅಧಿಕಾರಿ ವರ್ಗವೇ ಕಕ್ಕಾಬಿಕ್ಕಿಯಾಗುತ್ತಿದ್ದು, ಕಳೆದ ವರ್ಷದ ಐಟಿಆರ್‌ ತಂದುಕೊಡುವಂತೆ ಸೂಚನೆ ನೀಡುತ್ತಿದೆ.

ಆಗುತ್ತಿರುವುದೇನು?: ಅನರ್ಹರ ಬಿಪಿಎಲ್‌ ಕಾರ್ಡ್‌ ರದ್ದುಪಡಿಸಬೇಕೆಂಬ ಉದ್ದೇಶದಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಎಲ್ಲ ನ್ಯಾಯಬೆಲೆ ಅಂಗಡಿಗಳ ಮುಂದೆ ಸಂಶಯ ಬಂದವರ ಹೆಸರುಗಳ ಪಟ್ಟಿ ಅಂಟಿಸಿದೆ. ಬಿಪಿಎಲ್‌ ಕಾರ್ಡ್‌ಗೆ ಅರ್ಹತೆ ಎಂದರೆ ವಾರ್ಷಿಕ ₹ 1.20 ಲಕ್ಷ ಆದಾಯ ಹೊಂದಿರಬೇಕು. ಇನ್ನು ರೈತರಾದರೆ ಗರಿಷ್ಠ 7.5 ಎಕರೆ ಜಮೀನು ಇರಬೇಕು. ಹಳದಿ ಬೋರ್ಡ್‌ನ ಕಾರಿರಬೇಕು. ಜಿಎಸ್‌ಟಿ ಪಾವತಿದಾರರಿರಬಾರದು. ಇವುಗಳಿಗಿಂತ ಹೆಚ್ಚಿನ ಆದಾಯ ಇದ್ದರೆ ಅಥವಾ ಜಮೀನು, ವೈಟ್‌ ಬೋರ್ಡ್‌ ವಾಹನಗಳಿದ್ದರೆ (ಕಾರು, ಜೀಪು ಇತ್ಯಾದಿ) ಅನರ್ಹರಾಗುತ್ತಾರೆ.

ಜಿಲ್ಲೆಯಲ್ಲಿ 481 ನ್ಯಾಯಬೆಲೆ ಅಂಗಡಿಗಳಿವೆ. 3.90 ಲಕ್ಷ ಬಿಪಿಎಲ್‌ ಕಾರ್ಡ್‌ದಾರರಿದ್ದಾರೆ. ಪ್ರತಿ ನ್ಯಾಯಬೆಲೆ ಅಂಗಡಿಗಳ ಸಂಶಯ ಇರುವ 100-150 ಜನರ ಪಟ್ಟಿ ಅಂಟಿಸಲಾಗಿದೆ. ಈ ಎಲ್ಲರಿಗೂ ಆದಾಯ ಸೇರಿದಂತೆ ವಿವಿಧ ದಾಖಲೆಗಳನ್ನು ನೀಡುವಂತೆ ಸೂಚಿಸಲಾಗಿದೆ. ಅದರಂತೆ ಫಲಾನುಭವಿಗಳು ದಾಖಲೆಗಳನ್ನು ಸಲ್ಲಿಸುತ್ತಿದ್ದಾರೆ. ಆದರೆ, ಈ ವರ್ಷದ ಐಟಿಆರ್‌ (ಇನಕಮ್‌ ಟ್ಯಾಕ್ಸ್‌ ರಿಟರ್ನ್ಸ್‌ ) ಫೈಲ್‌ ಮಾಡುವಾಗಲೇ ಆದಾಯ ಕಡಿತಗೊಳಿಸುತ್ತಿರುವುದು ಕಂಡು ಬರುತ್ತಿದೆ.

ನೌಕರಸ್ಥನಾಗಿದ್ದರೆ ನಿಗದಿತ ಆದಾಯ ಇರುತ್ತದೆ. ಐಟಿಆರ್‌ನಲ್ಲಿ ಹೆಚ್ಚು ಕಡಿಮೆ ಮಾಡಲು ಬರುವುದಿಲ್ಲ. ಆದರೆ, ಕ್ಯಾಬ್‌ ಡ್ರೈವರ್‌, ಬಿಜಿನೆಸ್‌ ಮ್ಯಾನ್‌ ಸೇರಿದಂತೆ ವಿವಿಧ ಉದ್ಯೋಗದಲ್ಲಿ ತೊಡಗಿರುವವರು ಇದೀಗ ಆದಾಯ ಕಡಿತಗೊಳಿಸುತ್ತಿದ್ದಾರೆ. ಇದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಬಿಪಿಎಲ್‌ ಕಾರ್ಡ್‌ಗಳ ಪರಿಶೀಲನೆಗೆ ಸಲ್ಲಿಸುತ್ತಿರುವ ದಾಖಲೆಗಳಿಂದ ಬೆಳಕಿಗೆ ಬರುತ್ತಿದೆ.

ಬಿಪಿಎಲ್‌ ಕಾರ್ಡ್‌ನ ಅನರ್ಹತೆಯ ಎಚ್ಚರಿಕೆಯ ಪಟ್ಟಿಯಲ್ಲಿ ಹೆಸರು ಬರುತ್ತಿದ್ದಂತೆ ಲೆಕ್ಕ ಪರಿಶೋಧಕರ ಬಳಿ ತೆರಳಿ ತಮ್ಮ ಆದಾಯ ಕಡಿತಗೊಳಿಸಿಕೊಂಡು ಬರುತ್ತಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಲ್ಲಿಸಿದ ಬಹುತೇಕ ದಾಖಲೆಗಳು ₹ 1.18 ಲಕ್ಷ, ₹ 1.19 ಲಕ್ಷ ಆದಾಯ ತೋರಿಸುತ್ತಿರುವ ದಾಖಲೆಗಳೇ ಆಗಿವೆ. ಇವುಗಳನ್ನು ನೋಡುತ್ತಿದ್ದಂತೆ ಅದ್ಹೇಗೆ ಎಲ್ಲರದ್ದು ಇಷ್ಟೇ ಆದಾಯ ಎಂದು ಅಧಿಕಾರಿ ವರ್ಗವೇ ಕಕ್ಕಾಬಿಕ್ಕಿಯಾಗುತ್ತಿದೆ. ಹೀಗಾಗಿ ಈ ವರ್ಷದ ಐಟಿಆರ್‌ ಫೈಲ್‌ ಮಾಡಿರುವ ದಾಖಲೆಯೂ ಇರಲಿ. ಕಳೆದ ವರ್ಷದ ಐಟಿಆರ್‌ ಫೈಲ್‌ ಮಾಡಿರುವ ದಾಖಲೆಯನ್ನೂ ನೀಡಿ ಎಂದು ಹೇಳಿ ಕಳುಹಿಸುತ್ತಿದೆ. ಇದರಿಂದ ಫಲಾನುಭವಿಗಳು ಇಕ್ಕಟ್ಟಿಗೆ ಸಿಲುಕುವಂತಾಗಿದೆ.

ಬಿಪಿಎಲ್‌ ಕಾರ್ಡ್‌ ರದ್ದತಿ ಪ್ರಕ್ರಿಯೆ ಶುರುವಾಗುತ್ತಿದ್ದಂತೆ ಅವುಗಳನ್ನು ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿರುವುದಂತೂ ಸತ್ಯ.

ಬಿಪಿಎಲ್‌ ಕಾರ್ಡ್‌ ಉಳಿಸಿಕೊಳ್ಳಲು ಈ ವರ್ಷದ ಐಟಿಆರ್‌ ಫೈಲ್‌ನಲ್ಲಿ ಆದಾಯ ಕಡಿತಗೊಳಿಸಿಕೊಂಡು ಬರುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಅದರಲ್ಲೂ ನಿಗದಿತ ಆದಾಯ ಇಲ್ಲದ ಉದ್ಯೋಗಗಳಲ್ಲಿ ತೊಡಗಿರುವವರು ಲೆಕ್ಕ ಪರಿಶೋಧಕರ ಬಳಿ ತೆರಳಿ ₹ 1.20 ಲಕ್ಷಗಿಂತ ಕಡಿಮೆ ಆದಾಯ ತೋರಿಸಿಕೊಂಡು ಬರುತ್ತಿದ್ದಾರೆ. ಅದಕ್ಕಾಗಿ ಕಳೆದ ವರ್ಷ ಐಟಿಆರ್‌ ಫೈಲ್‌ ಮಾಡಿರುವ ದಾಖಲೆ ಸಲ್ಲಿಸುವಂತೆ ಹೇಳುತ್ತಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನಾಡಿದ್ದು ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟ
ಹುಟ್ಟು ಸಾವಿನ ಮಧ್ಯೆ ಸಾಧನೆ ಮಹತ್ವದ್ದು: ಡಾ.ಮುರುಗೇಶ ನಿರಾಣಿ