ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ
ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರಲ್ಲಿ ಶನಿವಾರ ನಡೆದ ‘ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆಯ ಜಾಗೃತಿ ಕಾರ್ಯಕ್ರಮ, ಹಣ್ಣುಗಳ ವೈವಿದ್ಯತಾ ಮೇಳ ಹಾಗೂ ಮ್ಯಾಂಗೋಸ್ಟೀನ್ ಮತ್ತು ರಾಂಬುಟಾನ್ ಹಣ್ಣಿನ ಕ್ಷೇತ್ರೋತ್ಸವ ಕಾರ್ಯಕ್ರಮ ಆಕರ್ಷಕವಾಗಿ ಮೂಡಿಬಂತು.
ಕೇಂದ್ರದಿಂದ ಆಯೋಜಿಸಲಾಗಿದ್ದ ಹಣ್ಣುಗಳ ವೈವಿಧ್ಯತಾ ಮೇಳಕ್ಕೆ ಉತ್ತಮ ಸ್ಪಂದನೆ ದೊರಕಿತು. ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಹೊರ ರಾಜ್ಯದ ರೈತರು ಕೂಡ ಆಗಮಿಸಿ ಮಾಹಿತಿ ಪಡೆದುಕೊಂಡರು.ಚೆಯ್ಯಂಡಾಣೆಯ ಕೃಷಿಕ ಸುದೀರ್ ಮಕ್ಕಿಮನೆ ಅವರು ತಮ್ಮ ತೋಟದಲ್ಲಿ ಬೆಳೆಯಲಾಗಿದ್ದ ರಾಂಬುಟಾನ್, ಮ್ಯಾಂಗೋಸ್ಟಿನ್, ಜಬೋಟಿಕ, ಅಂಜೂರ, ಹಾಸ್ ಬೆಣ್ಣೆಹಣ್ಣು, ಎಗ್ ಫ್ರೂಟ್, ಲಕ್ಷ್ಮಣ ಫಲ, ವಿಶೇಷ ತಳಿಯ ಬಾಳೆ ಹಣ್ಣು ಸೇರಿ ವಿವಿಧ ತಳಿಯ ಹಣ್ಣುಗಳನ್ನು ಪ್ರದರ್ಶನಕ್ಕಿಟ್ಟು ಆಗಮಿಸಿದ್ದ ರೈತರಿಂದ ಮೆಚ್ಚುಗೆಗೆ ಪಾತ್ರರಾದರು.
ಚೆಟ್ಟಳ್ಳಿಯ ಕರುಣ್ ಕಾಳಯ್ಯ ಅವರು ದ್ರಾಕ್ಷಿ, ಸೀಬೆ, ಬಾಳೆಹಣ್ಣು ಹಾಗೂ ಪಪಾಯ ಹಣ್ಣನ್ನು ಇಟ್ಟಿದ್ದರು. ಚೆಟ್ಟಳ್ಳಿ ಕೇಂದ್ರದಿಂದ ಬೆಣ್ಣೆ ಹಣ್ಣು ಪ್ರದರ್ಶನ ಕೂಡ ಮಾಡಲಾಗಿದ್ದು, ವಿದೇಶಿ ತಳಿಗಳಾದ ಜೆಮ್ ಹಾಸ್, ಲಾಂಬ್ ಹಾಸ್, ಪಿಂಕರ್ಟೋನ್, ಮೆಕ್ಸಿಕನ್ ಹಾಸ್, ಚೆಟ್ಟಳ್ಳಿ ಕೇಂದ್ರದಿಂದ ಬಿಡುಗಡೆ ಮಾಡಲಾಗಿರುವ ಅರ್ಕಾ ಸುಪ್ರೀಂ, ಅರ್ಕಾ ಕೂರ್ಗ್ ರವಿ ಸೇರಿದಂತೆ ವಿವಿಧ ತಳಿಗಳನ್ನು ಪ್ರದರ್ಶನಕ್ಕಿಡಲಾಗಿತ್ತು. ಹಳದಿ ಬಣ್ಣದ ಬೆಣ್ಣೆ ಹಣ್ಣು ವಿಶೇಷ ಗಮನ ಸೆಳೆಯಿತು.
ಉತ್ತಮ ಪ್ರದರ್ಶನಕ್ಕೆ ಪ್ರಶಸ್ತಿ: ಅತ್ಯುತ್ತಮವಾಗಿ ಹಣ್ಣುಗಳ ಪ್ರದರ್ಶನ ಮಾಡಿದ ರವಿಂಶಕರ್ ಹಾಗೂ ಸುದೀರ್ ಅವರಿಗೆ ಪ್ರಥಮ ಬಹುಮಾನವಾಗಿ ತಲಾ ರು.5 ಸಾವಿರ ನಗದು, ಎಂ.ಎಂ. ಸೋಮಯ್ಯ ಹಾಗೂ ನಿರ್ಮಲ ಜಯಪ್ರಕಾಶ್ ಅವರಿಗೆ ದ್ವಿತೀಯ ರು.3 ಸಾವಿರ ನಗದು ಹಾಗೂ ಕರುಣ್ ಕಾಳಯ್ಯ, ಮಂದಪ್ಪ ಅವರಿಗೆ ತೃತೀಯ ಬಹುಮಾನವಾಗಿ ರು.2 ಸಾವಿರ ನಗದು ನೀಡಲಾಯಿತು.
ಗಿಡಗಳಿಗೆ ಭಾರಿ ಡಿಮ್ಯಾಂಡ್!: ಹಣ್ಣುಗಳ ಪ್ರದರ್ಶನ ಅಂಗವಾಗಿ ಕೇರಳದ ಖಾಸಗಿ ನರ್ಸರಿಯೊಂದರಿಂದ ಕೇಂದ್ರದ ಆವರಣದಲ್ಲಿ ವಿವಿಧ ವಿದೇಶಿ ಹಣ್ಣು ಗಿಡಗಳ ಮಾರಾಟವನ್ನು ಮಾಡಲಾಯಿತು. ಪ್ರದರ್ಶನ ಆರಂಭವಾದ ಕೆಲವೇ ಗಂಟೆಗಳಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ರೈತರು ನಾ ಮುಂದು ತಾ ಮುಂದು ಎಂದು ಮುಗಿಬಿದ್ದು ಖರೀದಿಸಿದರು. ರಾಂಬುಟಾನ್, ಮ್ಯಾಂಗೋಸ್ಟಿನ್, ಹಲಸು, ಮಾವು ಗಿಡಗಳಿಗೆ ಹೆಚ್ಚು ಬೇಡಿಕೆ ಕಂಡುಬಂತು. ಕೆಲವು ತಳಿಯ ಗಿಡಗಳು ಸ್ಥಳದಲ್ಲೇ ಖಾಲಿಯಾಯಿತು.