ಬೇಡ್ತಿ-ವರದಾ ಜೋಡಣೆಗಾಗಿ ರೈತರ ನಿರೀಕ್ಷೆ

KannadaprabhaNewsNetwork |  
Published : Jun 08, 2024, 12:31 AM ISTUpdated : Jun 08, 2024, 12:32 AM IST
ಪೋಟೋ ಇದೆ. | Kannada Prabha

ಸಾರಾಂಶ

ರಾಷ್ಟ್ರೀಯ ನದಿ ಜೋಡಣೆ ಪಟ್ಟಿಯಲ್ಲಿರುವ ಬೇಡ್ತಿ-ವರದಾ ನದಿ ಜೋಡಣೆ ಅನುಷ್ಠಾನ ದಶಕಗಳ ಬೇಡಿಕೆಯಾಗಿದ್ದು, ನೂತನ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಈ ಯೋಜನೆ ಕೈಗೂಡಲಿ ಎಂದು ಅನ್ನದಾತರು ಎದುರು ನೋಡುತ್ತಿದ್ದಾರೆ.

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ರಾಷ್ಟ್ರೀಯ ನದಿ ಜೋಡಣೆ ಪಟ್ಟಿಯಲ್ಲಿರುವ ಬೇಡ್ತಿ-ವರದಾ ನದಿ ಜೋಡಣೆ ಅನುಷ್ಠಾನ ದಶಕಗಳ ಬೇಡಿಕೆಯಾಗಿದ್ದು, ನೂತನ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಈ ಯೋಜನೆ ಕೈಗೂಡಲಿ ಎಂದು ಅನ್ನದಾತರು ಎದುರು ನೋಡುತ್ತಿದ್ದಾರೆ.

ಬೇಡ್ತಿ-ವರದಾ ನದಿ ಜೋಡಣೆ ಅನುಷ್ಠಾನಗೊಳಿಸಿದಲ್ಲಿ ಸಮುದ್ರ ಸೇರುವ ಸಿಹಿ ನೀರನ್ನು ಉತ್ತರ ಕರ್ನಾಟಕದ ಜನರಿಗೆ ಕುಡಿಯಲು, ಕೃಷಿಭೂಮಿಗೆ ಹರಿಸಬೇಕು ಎನ್ನುವುದು ಬಹುದಿನದ ಬೇಡಿಕೆ.

ಎರಡು ದಶಕಗಳಿಂದ ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ, ಶಾಲ್ಮಲಾ, ಪಟ್ಟದ ಹೊಳೆ ಈ ೩ ನದಿಗಳ ನೀರನ್ನು ವರದಾ ನದಿಗೆ ಕೇವಲ ೨೦ ಕಿಮೀ ಅಂತರದ ಕಾಮಗಾರಿಯಲ್ಲಿ ಜೋಡಿಸಿ ಹಾವೇರಿ, ಗದಗ, ಕೊಪ್ಪಳ, ರಾಯಚೂರು, ಶಿವಮೊಗ್ಗ ಜಿಲ್ಲೆಗಳಿಗೆ ಕುಡಿಯುವ ನೀರು ಹಾಗೂ ಅಂದಾಜು ೧.೬ ಲಕ್ಷ ಹೆಕ್ಟೇರ್ ಕೃಷಿ ಭೂಮಿಗೆ ವರ್ಷದ ೧೨ ತಿಂಗಳೂ ಕೊರತೆಯಿಲ್ಲದಂತೆ ನೀರನ್ನು ನಿಭಾಯಿಸಬಹುದು ಎಂಬ ಲೆಕ್ಕಾಚಾರವಿದೆ.

ಎರಡು ದಶಕಗಳಿಂದ ಹಾವೇರಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಹೋರಾಟಗಳನ್ನು ನಡೆಸಿ ಸರಕಾರಗಳ ಗಮನ ಸೆಳೆಯಲಾಗಿದೆ. ೨೦೦೩ರಲ್ಲಿಯೇ ರಾಷ್ಟ್ರೀಯ ಜಲಾಭಿವೃಧ್ದಿ ಸಂಸ್ಥೆಯು ಅಧ್ಯಯನ ನಡೆಸಿ ಬೇಡ್ತಿ, ಶಾಲ್ಮಲಾ, ಪಟ್ಟದಹೊಳೆ ಜಲಮೂಲದಿಂದ ವರದಾ ನದಿಗೆ ನೀರು ಹರಿಸುವ ಯೋಜನೆಯನ್ನು ಪ್ರಸ್ತಾಪಿಸಿ, ೨೦೨೧ರಲ್ಲಿ ರಾಜ್ಯ ಸರಕಾರದ ಮುಂಗಡ ಪತ್ರದಲ್ಲಿ ಸಮಗ್ರ ಯೋಜನಾ ವರದಿಯನ್ನು ತಯಾರಿಸಲು ಸೂಚಿಸಲಾಗಿತ್ತು. ಇದು ಅನುಷ್ಠಾನವಾದರೆ ನೂರಾರು ಟಿಎಂಸಿ ನೀರು ವರದಾ ನದಿಗೆ ಬರಲಿದೆ.ಇದಕ್ಕಾಗಿಯೇ ಕರ್ನಾಟಕ ರಾಜ್ಯ ಬೇಡ್ತಿ -ವರದಾ ನದಿ ಜೋಡಣೆ ಹೋರಾಟ ಸಮಿತಿ ಹುಟ್ಟಿಕೊಂಡು ಜಾಗೃತಿ ಜಾಥಾ, ಮೆರವಣಿಗೆ, ಹಾವೇರಿ ಹುಕ್ಕೇರಿಮಠದಲ್ಲಿ ಹುಬ್ಬಳ್ಳಿ ಮೂರುಸಾವಿರಮಠದ ಶ್ರೀಗಳ ಸಮ್ಮುಖದಲ್ಲಿ, ಮಾಜಿ ಸಂಸದ ಮಂಜುನಾಥ ಕುನ್ನೂರ ಅವರನ್ನೊಳಗೊಂಡು ಹೋರಾಟ ಸಭೆ, ಬನವಾಸಿ ಮಧುಕೇಶ್ವರ ದೇವಾಲಯದ ಬಳಿಯ ವರದಾ ನದಿಗೆ ಪೂಜೆ, ರಾಜ್ಯ ರಾಷ್ಟ್ರ ನಾಯಕರಿಗೆ ಮನವಿ ಸಲ್ಲಿಸುವ ಕಾರ್ಯಗಳು ನಡೆದಿವೆ.

ಇದೊಂದು ಜನಾಂದೋಲನವಾಗಿ ಚಾಲನೆಯಲ್ಲಿದ್ದು, ಈಗ ಇದೇ ಕ್ಷೇತ್ರದ ಲೋಕಸಭೆ ಸದಸ್ಯ ಬಸವರಾಜ ಬೊಮ್ಮಾಯಿ ಹಿಂದೆ ರಾಜ್ಯದ ನೀರಾವರಿ ಸಚಿವರಾಗಿದ್ದಾಗಿನ ಅನುಭವವನ್ನೂ ಬಳಸಿಕೊಂಡು ಈ ಯೋಜನೆ ಅನುಷ್ಠಾನಕ್ಕೆ ಮುಂದಾಗುತ್ತಾರೆ. ಎರಡು ದಶಕಗಳ ಹೋರಾಟದ ಯಶಸ್ವಿ ಸಾಕಾರಕ್ಕೆ ಇದು ಸಕಾಲ ಎಂಬ ನಂಬಿಕೆ ರೈತ ಜನರಲ್ಲಿ ಮೂಡಿದೆ. ವರದಾ ನದಿಗೆ ಬೇಡ್ತಿ ನೀರು ಹರಿಸುವ ಇಚ್ಛಾಶಕ್ತಿ ಎರಡೂ ಸರಕಾರಕ್ಕೆ ಬೇಕು. ಸಂಸದ ಬಸವರಾಜ ಬೊಮ್ಮಾಯಿ ಅವರು ನೀರಾವರಿ ಬಗೆಗೆ ಸರಿಯಾಗಿ ತಿಳಿದವರು. ಈ ಯೋಜನೆ ಅನುಷ್ಠಾನ ಮಾಡುವರೆಂಬ ವಿಶ್ವಾಸವಿದೆ. ಇದರ ಅನುಷ್ಠಾನಕ್ಕೆ ಏನೇ ತೊಂದರೆ ಬಂದರೂ ನಮ್ಮ ಉಗ್ರ ಹೋರಾಟ ಅನಿವಾರ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.ನದಿಯ ಸಿಹಿ ನೀರು ಸಮುದ್ರಕ್ಕೆ ಸೇರುವುದು ಬೇಡ. ನಮ್ಮ ವರದೆಗೆ ಕೊಡಿ, ವರವಾಗುತ್ತದೆ. ಕೃಷಿಗೆ ಯೋಗ್ಯವಾದ ಈ ನೀರು ಉತ್ತರ ಕರ್ನಾಟಕದ ೭ ಜಿಲ್ಲೆಗಳ ಜನರ ಬಾಯಾರಿಕೆ ನೀಗಿಸಿ, ರೈತರ ಹೊಲಗಳಿಗೆ ಜೀವ ನದಿಯಾಗುತ್ತದೆ. ಯೋಜನೆಯ ಸಾಕಾರ ರೈತರಿಗೆ ಉಪಕಾರ. ಜನಪ್ರತಿನಿಧಿಗಳ ಇಚ್ಛಾಶಕ್ತಿ ರೈತರಿಗೆ ಶಕ್ತಿಯಾಗಬೇಕು ಎಂದು ಹೋರಾಟ ಸಮಿತಿ ಅಧ್ಯಕ್ಷ ಸೋಮಶೇಖರ ಕೋತಂಬರಿ ಹೇಳಿದರು.

PREV