ಇಲಾಖೆಗಳ ಜಮೀನು, ನಿವೇಶನ ಸಮಸ್ಯೆ ತ್ವರಿತ ಇತ್ಯರ್ಥಪಡಿಸಿ

KannadaprabhaNewsNetwork |  
Published : Oct 17, 2026, 02:00 AM IST
ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಂತರ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ನಡೆಯಿತು. | Kannada Prabha

ಸಾರಾಂಶ

ಕೊಪ್ಪಳ ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳ ಜಮೀನು ಹಾಗೂ ನಿವೇಶನಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ವಿಳಂಬವಿಲ್ಲದೆ ಇತ್ಯರ್ಥಪಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ್ ಅಧಿಕಾರಿಗಳಿಗೆ ಸೂಚಿಸಿದರು.

ಕೊಪ್ಪಳ: ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳ ಜಮೀನು ಹಾಗೂ ನಿವೇಶನಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ವಿಳಂಬವಿಲ್ಲದೆ ಇತ್ಯರ್ಥಪಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ್ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಂತರ ಇಲಾಖೆಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಯೋಜನೆಗಳಿಗೆ ಗುರುತಿಸಿರುವ ನಿವೇಶನಗಳ ಹದ್ದುಬಸ್ತು, ಸರ್ವೇ ಕಾರ್ಯ ಮತ್ತು ದಾಖಲೆಗಳ ವರ್ಗಾವಣೆಯನ್ನು ತಕ್ಷಣ ಪೂರ್ಣಗೊಳಿಸಬೇಕು. ನಿಯಮಾನುಸಾರ ದಾಖಲೆ ಸಿದ್ಧಪಡಿಸಿ, ಜಮೀನು ಮಂಜೂರಾತಿಗೆ ಸಂಬಂಧಿಸಿದ ಕಡತಗಳು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅನಗತ್ಯವಾಗಿ ಬಾಕಿ ಉಳಿಯದಂತೆ ಶೀಘ್ರ ಇತ್ಯರ್ಥಪಡಿಸಬೇಕು ಎಂದು ತಾಕೀತು ಮಾಡಿದರು.

ಗ್ರಾಮೀಣ ಘನತ್ಯಾಜ್ಯ ನಿರ್ವಹಣಾ ಘಟಕಗಳು, ಶಾಲಾ-ಕಾಲೇಜುಗಳು, ಸಾರಿಗೆ ಸಂಸ್ಥೆ, ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೆ ಇಲಾಖೆಗೆ ಅಗತ್ಯವಿರುವ ಭೂಮಿಯನ್ನು ಪರಿಶೀಲಿಸಿ ಒದಗಿಸಬೇಕು. ಖಾಸಗಿ ಜಮೀನಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಶಾಲೆಗಳ ಭೂಮಿಯನ್ನು ಶಾಲೆಗಳ ಹೆಸರಿಗೆ ನೋಂದಾಯಿಸುವ ಪ್ರಕ್ರಿಯೆಯನ್ನು ಶಿಕ್ಷಣ ಮತ್ತು ಕಂದಾಯ ಇಲಾಖೆಗಳು ಜಂಟಿಯಾಗಿ ಚುರುಕುಗೊಳಿಸಬೇಕು ಎಂದು ನಿರ್ದೇಶನ ನೀಡಿದರು.

ಅತಿಕ್ರಮಣ ತೆರವಿಗೆ ಸೂಚನೆ: ಜಿಲ್ಲೆಯ ಮುಜರಾಯಿ ಇಲಾಖೆ ಹಾಗೂ ವಕ್ಫ್ ಮಂಡಳಿಗೆ ಸೇರಿದ ಸ್ಥಿರಾಸ್ತಿಗಳ ವಿವರಗಳನ್ನು ಕಂದಾಯ ದಾಖಲೆಗಳೊಂದಿಗೆ ಪರಿಶೀಲಿಸಿ ನವೀಕರಿಸಬೇಕು. ಆಸ್ತಿಗಳ ಪಹಣಿ ಮತ್ತು ನಕ್ಷೆಗಳನ್ನು ಕಾಲಕಾಲಕ್ಕೆ ನವೀಕರಿಸುವುದರ ಜತೆಗೆ ಅತಿಕ್ರಮಣವಾಗಿರುವ ಜಾಗಗಳನ್ನು ಯಾವುದೇ ಮುಲಾಜಿಲ್ಲದೆ ಕಾನೂನು ಪ್ರಕಾರ ತೆರವುಗೊಳಿಸಬೇಕು. ಆಸ್ತಿಗಳ ರಕ್ಷಣೆಗೆ ತಂತಿಬೇಲಿ ಅಥವಾ ರಕ್ಷಣಾ ಗೋಡೆ ನಿರ್ಮಿಸಿ ಸಂರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕೊಪ್ಪಳ ಸಹಾಯಕ ಆಯುಕ್ತ ಮೆಹಬೂಬ್ ಜೀಲಾನಿ ಖುರೇಶಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೃತ ಸಿಐಎಸ್‌ಎಫ್ ಸಿಬ್ಬಂದಿ ಕುಟುಂಬಕ್ಕೆ ₹1 ಕೋಟಿ ವಿಮೆ
ಆತ್ಮನಿರ್ಭರ ಭಾರತದ ನೌಕಾ ಶಕ್ತಿಗೆ ಐಎನ್‌ಎಸ್ ಸಮರ್ಥಕ್ ಬಲ