ಜಾತ್ರೆಯ ಲೆಕ್ಕಪತ್ರ ಒಪ್ಪಿಸದೇ ಖರ್ಚು ವೆಚ್ಚಗಳಿಗೆ ಅನುಮೋದನೆ ನೀಡಲ್ಲ

KannadaprabhaNewsNetwork |  
Published : Jan 18, 2025, 12:45 AM IST
ಫೋಟೋ ಜ.೧೭ ವೈ.ಎಲ್.ಪಿ. ೦೨ | Kannada Prabha

ಸಾರಾಂಶ

ಕಳೆದ ಜಾತ್ರೆಯ ಖರ್ಚು ವೆಚ್ಚದ ಅಧಿಕೃತ ದಾಖಲೆ ಒಪ್ಪಿಸಿದ ನಂತರವೇ ಸಭೆ ಮುಂದುವರಿಸಬೇಕು ಎಂದು ಪಪಂ ಸದಸ್ಯರಾದ ರಾಧಾಕೃಷ್ಣ ನಾಯ್ಕ, ಸತೀಶ ನಾಯ್ಕ ಆಗ್ರಹಿಸಿದ್ದಾರೆ.

ಯಲ್ಲಾಪುರ: ಸದಸ್ಯರು ಹಾಗೂ ಅಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯದಿಂದ ಮುಂದೂಡಲ್ಪಟ್ಟಿದ್ದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಜ. ೧೬ರಂದು ಅಧ್ಯಕ್ಷೆ ನರ್ಮದಾ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು.

ಕಳೆದ ಜಾತ್ರೆಯ ಖರ್ಚು ವೆಚ್ಚದ ಅಧಿಕೃತ ದಾಖಲೆ ಒಪ್ಪಿಸಿದ ನಂತರವೇ ಸಭೆ ಮುಂದುವರಿಸಬೇಕು ಎಂದು ಪಪಂ ಸದಸ್ಯರಾದ ರಾಧಾಕೃಷ್ಣ ನಾಯ್ಕ, ಸತೀಶ ನಾಯ್ಕ ಆಗ್ರಹಿಸಿದರು. ಜಾತ್ರೆಯ ಲೆಕ್ಕದಲ್ಲಿ ಅವ್ಯವಹಾರ ಆಗಿದೆ. ಜಾತ್ರೆ ಮುಗಿದು ಎರಡು ವರ್ಷಗಳು ಕಳೆದರೂ ಲೆಕ್ಕ ನೀಡಿಲ್ಲ. ಹಿಂದಿನ ಮುಖ್ಯಾಧಿಕಾರಿ ಲೆಕ್ಕ ಪತ್ರ ಒಪ್ಪಿಸದೇ ವರ್ಗಾವಣೆಗೊಂಡಿದ್ದಾರೆ. ಲೆಕ್ಕಪತ್ರದ ಮಾಹಿತಿ ನೀಡದೇ ಜಾತ್ರೆಯ ಖರ್ಚು ವೆಚ್ಚಗಳಿಗೆ ಅನುಮೋದನೆ ನೀಡಲಾರೆವು ಎಂದು ಪಟ್ಟು ಹಿಡಿದರು.

ಮುಖ್ಯಾಧಿಕಾರಿ ಸುನೀಲ್ ಗಾವಡೆ, ''''ಒಂದು ವಾರ ಕಾಲಾವಕಾಶ ಕೊಡಬೇಕು. ಕಡತ ಪರಿಶೀಲನೆ ಮಾಡಿ, ತಪ್ಪು ಕಂಡುಬಂದಲ್ಲಿ ಅಂತಹವರ ವಿರುದ್ದ ನೊಟೀಸ್ ನೀಡಲಾಗುವುದು'''' ಎಂದು ಸ್ಪಷ್ಟಪಡಿಸಿದರು. ಜ. ೨೩ರಂದು ಸದಸ್ಯರಿಗೆ ಲೆಕ್ಕಪತ್ರದ ಮಾಹಿತಿ ನೀಡಲಾಗುವುದು ಎಂದರು.

ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಆಗುವ ಮುನ್ನವೇ ಲೇಔಟ್ ಹಸ್ತಾಂತರ ಮಾಡಿಕೊಂಡ ವಿಷಯದ ಬಗ್ಗೆ ಸದಸ್ಯರು ಪ್ರಶ್ನಿಸಿದರು. ಧಾತ್ರಿ ಲೇಔಟ್‌ನಲ್ಲಿ ಒಂದು ವಾರದೊಳಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡುವುದಾಗಿ ಪ್ರತಿಭಟನಾನಿರತ ಮಂಜುನಾಥ ಹೆಗಡೆ ಅವರಿಗೆ ಭರವಸೆ ನೀಡಿ, ೧೫ ದಿನ ಕಳೆದರೂ ವ್ಯವಸ್ಥೆ ಮಾಡಿಲ್ಲ ಎಂದು ಸದಸ್ಯ ಸತೀಶ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಮುಖ್ಯಾಧಿಕಾರಿ ಪ್ರತಿಕ್ರಿಯಿಸಿ, ನೀರಿನ ವ್ಯವಸ್ಥೆ ಕಲ್ಪಿಸುವ ಬಗ್ಗೆ ಲೇಔಟ್ ಡೆವಲಪರ್‌ಗೆ ನೋಟಿಸ್ ಸಿದ್ಧಪಡಿಸಲಾಗಿದೆ. ನೋಟಿಸ್ ನೀಡಿ ಕ್ರಮ ಕೈಗೊಳ್ಳುತ್ತೇವೆ ಎಂದರು. ಪಟ್ಟಣದ ಎಲ್ಲ ಲೇಔಟ್‌ಗಳಿಗೆ ಒಮ್ಮೆ ಭೇಟಿ ನೀಡಿ ಮೂಲ ಸೌಕರ್ಯಗಳ ವ್ಯವಸ್ಥೆ ಪರಿಶೀಲಿಸಬೇಕು ಎಂದು ಸದಸ್ಯ ಸೋಮು ನಾಯ್ಕ ಆಗ್ರಹಿಸಿದರು. ಇದಕ್ಕೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಸಭೆಯ ಅಜೆಂಡಾದಲ್ಲಿ ೨೦ ವಿಷಯಗಳಿದ್ದರೂ ಹಿಂದಿನ ಸಭೆಯ ವಿಷಯಗಳು, ಸರ್ಕಾರದ ವಿವಿಧ ಸುತ್ತೋಲೆಗಳನ್ನು ಓದುವುದರಲ್ಲೇ ಹೆಚ್ಚಿನ ಸಮಯ ಕಳೆಯಲಾಯಿತು. ವಿದ್ಯುತ್ ವ್ಯತ್ಯಯದ ಬಗ್ಗೆ ಹೆಸ್ಕಾಂ ಮೊದಲೇ ಮಾಹಿತಿ ನೀಡಿದ್ದರೂ, ಸಭೆಗೆ ಬೆಳಕಿನ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದೇ ಕತ್ತಲೆಯಲ್ಲೇ ಸಭೆ ನಡೆಯಿತು. ಪಟ್ಟಣದ ಆಡಳಿತ ಕಾರ್ಯಾಲಯದಲ್ಲಿ ವಿದ್ಯುತ್ ಇಲ್ಲದಿದ್ದರೆ, ಪರ್ಯಾಯ ವ್ಯವಸ್ಥೆಯೇ ಇಲ್ಲದಿರುವುದು ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

ಸದಸ್ಯರ ಪ್ರಶ್ನೆಗೆ ಮುಖ್ಯಾಧಿಕಾರಿ ನಿಯಮಾವಳಿಗಳನ್ನು ಹೇಳುವುದು ಬಿಟ್ಟರೆ, ಖಚಿತವಾಗಿ ಯಾವುದೇ ನಿರ್ಣಯ ಹೇಳದೇ ಜಾರಿಕೊಂಡರು. ವೇದಿಕೆಯಲ್ಲಿದ್ದ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಮೌನವಹಿಸಿದ್ದು ಬಿಟ್ಟರೆ ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳಲಿಲ್ಲ. ಸದಸ್ಯರಾದ ರಾಧಾಕೃಷ್ಣ ನಾಯ್ಕ ಹಾಗೂ ಸತೀಶ ನಾಯ್ಕ ಪ್ರತಿ ವಿಷಯದಲ್ಲೂ ಮಧ್ಯಪ್ರವೇಶಿಸಿ ಚರ್ಚೆ ನಡೆಸಿದರು. ಸದಸ್ಯರಾದ ಸೋಮು ನಾಯ್ಕ, ರಾಜು ನಾಯ್ಕ, ಸುನಂದಾ ದಾಸ್ ಕೆಲ ವಿಷಯಗಳಲ್ಲಿ ಮಾತನಾಡಿದರು. ಉಳಿದ ಸದಸ್ಯರು ಮೌನ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!