ಪಂಪ್‌ಸೆಟ್ ಸಕ್ರಮಕ್ಕೆ ದುಬಾರಿ ಶುಲ್ಕ: ರೈತರ ಪಾಲಿಗೆ ಮರಣ ಶಾಸನ

KannadaprabhaNewsNetwork |  
Published : Mar 26, 2026, 02:00 AM IST
ಹಗರಿಬೊಮ್ಮನಹಳ್ಳಿಯಲ್ಲಿ ರೈತರ ಅಕ್ರಮ ಪಂಪ್‌ಸೆಟ್‌ಗಳ ಸಕ್ರಮಕ್ಕೆ ದುಬಾರಿ ಶುಲ್ಕ ಮತ್ತು ಗಡುವು ನೀಡಿರುವ ರಾಜ್ಯ ಸರಕಾರದ ನಿಲುವನ್ನು ವಿರೋಧಿಸಿ ರಾಜ್ಯ ರೈತ ಸಂಘದ ತಾಲೂಕು ಪದಾಧಿಕಾರಿಗಳು ಬುಧವಾರ ಇಲ್ಲಿನ ಆಡಳಿತ ಸೌಧದ ಬಳಿ ಪ್ರತಿಭಟನೆ ನಡೆಸಿ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಕಾಂಗ್ರೆಸ್ ಸರ್ಕಾರ ರೈತಪರ ಕಾನೂನುಗಳನ್ನು ಜಾರಿಗೊಳಿಸುವ ಬದಲಾಗಿ ನಿರಂತರವಾಗಿ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ.

ಹಗರಿಬೊಮ್ಮನಹಳ್ಳಿ: ರೈತರ ಅಕ್ರಮ ಪಂಪ್‌ಸೆಟ್‌ಗಳ ಸಕ್ರಮಕ್ಕೆ ದುಬಾರಿ ಶುಲ್ಕ ವಿಧಿಸಿರುವ ಜೊತೆಗೆ ಗಡುವು ನೀಡಿರುವ ರಾಜ್ಯ ಸರ್ಕಾರ ಹಗಲು ದರೋಡೆ ನಡೆಸಿದೆ ಎಂದು ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಪಿ.ಬಸವನಗೌಡ ಆರೋಪಿಸಿದರು.

ರೈತರ ಅಕ್ರಮ ಪಂಪ್‌ಸೆಟ್‌ಗಳ ಸಕ್ರಮಕ್ಕೆ ದುಬಾರಿ ಶುಲ್ಕ ಮತ್ತು ಗಡುವು ನೀಡಿರುವ ರಾಜ್ಯ ಸರ್ಕಾರದ ನಿಲುವನ್ನು ವಿರೋಧಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಬುಧವಾರ ಇಲ್ಲಿನ ಆಡಳಿತ ಸೌಧದ ಬಳಿ ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ರೈತಪರ ಕಾನೂನುಗಳನ್ನು ಜಾರಿಗೊಳಿಸುವ ಬದಲಾಗಿ ನಿರಂತರವಾಗಿ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ. ಇಂಧನ ಸಚಿವ ಕೆ.ಜೆ. ಜಾರ್ಜ್‌ ದುಬಾರಿ ಶುಲ್ಕ ವಿಧಿಸುವ ಮೂಲಕ ರೈತರ ಪಾಲಿಗೆ ಮರಣ ಶಾಸನ ಬರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಕಷ್ಟು ರೈತರು ಸಾಲ-ಶೂಲ ಮಾಡಿ ಕೊಳವೆಬಾವಿ ಕೊರೆಸಿದ್ದಾರೆ. ಕಾಲಕಾಲಕ್ಕೆ ಮಳೆ ಇಲ್ಲದೇ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಕಂಗಾಲಾಗಿರುವ ರೈತ ವರ್ಗಕ್ಕೆ ಪ್ರತಿ ಪಂಪ್‌ಸೆಟ್ ಸಕ್ರಮಕ್ಕೆ ₹೧.೫ ಲಕ್ಷ ಶುಲ್ಕ ನೀಡುವುದು ಸಾಧ್ಯವಾಗದ ಮಾತು ಎಂದು ಪ್ರತಿಪಾದಿಸಿದರು.

ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಗೋಣಿಬಸಪ್ಪ ಮಾತನಾಡಿ, ಉದ್ಯಮಿಗಳಿಗೆ ಹಲವಾರು ಸೌಲಭ್ಯ ನೀಡುವ ರಾಜ್ಯ ಸರ್ಕಾರ ರೈತರಿಗೆ ಉಚಿತ ವಿದ್ಯುತ್ ವಿತರಿಸದೇ ವಂಚಿಸುತ್ತಿದೆ. ವಿದ್ಯುತ್ ಸರಬರಾಜನ್ನು ಖಾಸಗೀಕರಣ ನಡೆಸಿ ಪ್ರಿಪೇಡ್ ಮೀಟರ್ ಅಳವಡಿಸಿ ಮುಂದಿನ ದಿನಗಳಲ್ಲಿ ಕಾಸು ಕೊಟ್ಟವರಿಗೆ ವಿದ್ಯುತ್ ನೀಡುವ ಹುನ್ನಾರ ನಡೆಸಿದೆ ಎಂದು ಕಿಡಿಕಾರಿದರು.

ಈ ಹಿಂದೆ ಸರ್ಕಾರದ ಆದೇಶದಂತೆ ಪಂಪ್‌ಸೆಟ್ ಸಕ್ರಮಕ್ಕೆ ರೈತರು ತಲಾ ₹೧೮ ಸಾವಿರ ಪಾವತಿಸಿದ್ದರೂ ಇಂದಿಗೂ ಕಾಮಗಾರಿಗಳು ಕೈಗೆತ್ತಿಕೊಂಡಿಲ್ಲ. ಸರ್ಕಾರ ರೈತ ವಿರೋಧಿ ಧೋರಣೆಗಳನ್ನೇ ಮುಂದುವರೆಸಿದರೆ ಹಗರಿಬೊಮ್ಮನಹಳ್ಳಿ ಬಂದ್ ನಡೆಸಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಘದ ರಾಜ್ಯ ಸಮಿತಿ ಸದಸ್ಯ ಬಿ.ಸಿದ್ದನಗೌಡ ಮಾತನಾಡಿ, ಸರ್ಕಾರವೇ ನೋಂದಣಿ ಶುಲ್ಕ ಪಾವತಿಸಿ ತಾಲೂಕಿನ ರೈತರ ಪಂಪ್‌ಸೆಟ್‌ಗಳ ಸಕ್ರಮಕ್ಕೆ ಮುಂದಾಗಲಿ ಇಲ್ಲದಿದ್ದರೆ ಈ ಮೊದಲು ಪಾವತಿಸಿರುವ ₹೧೮ ಸಾವಿರ ಮೊತ್ತವನ್ನು ವಾಪಸ್‌ ಮಾಡಬೇಕು ಎಂದು ಆಗ್ರಹಿಸಿದರು.

ಬಳಿಕ ಉಪ ತಹಸೀಲ್ದಾರ್ ಶಿಲ್ಪ ಅವರಿಗೆ ಮನವಿ ಸಲ್ಲಿಸಲಾಯಿತು. ರಾಜ್ಯ ರೈತ ಸಂಘದ ಕೆ.ಎಂ. ಮಂಜುನಾಥಯ್ಯ, ಡಿ.ಕಲೀಲ್‌ಬಾಷಾ, ಕೆ.ಮೈಲಾರಪ್ಪ, ಕೆ.ಪ್ರಕಾಶ, ಎಂ.ಜಿ. ಮೃತ್ಯುಂಜಯ, ಕೆ.ಹನುಮ ರೆಡ್ಡಿ, ಎಲ್.ಎಂ. ಬಸಯ್ಯ ಇದ್ದರು.

ಹಗರಿಬೊಮ್ಮನಹಳ್ಳಿಯಲ್ಲಿ ರೈತರ ಅಕ್ರಮ ಪಂಪ್‌ಸೆಟ್‌ ಸಕ್ರಮಕ್ಕೆ ದುಬಾರಿ ಶುಲ್ಕ ಮತ್ತು ಗಡುವು ನೀಡಿರುವ ರಾಜ್ಯ ಸರ್ಕಾರದ ನಿಲುವನ್ನು ವಿರೋಧಿಸಿ ರಾಜ್ಯ ರೈತ ಸಂಘದ ತಾಲೂಕು ಪದಾಧಿಕಾರಿಗಳು ಬುಧವಾರ ಇಲ್ಲಿನ ಆಡಳಿತ ಸೌಧದ ಬಳಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವನ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರವಿದೆ: ಡಾ.ಸಿ.ಸೋಮಶೇಖರ್
ಮದ್ದೂರು ನಗರಸಭೆ: 1.15 ಕೋಟಿ ರು. ಉಳಿತಾಯ ಬಜೆಟ್ ಮಂಡನೆ